ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇವಡಿ, ವ್ಯಂಗ್ಯ, ಜಾತಿ ಜಗಳಕ್ಕೆ ಇತಿಶ್ರೀ..? ಒಳೇಟಿನ ಅಸಲಿಯತ್ತಿನ ಆಟ ಆರಂಭ..!

ಆರೋಪ–ಪ್ರತ್ಯಾರೋಪಕ್ಕೆ ತೆರೆ
Last Updated 30 ಏಪ್ರಿಲ್ 2019, 16:06 IST
ಅಕ್ಷರ ಗಾತ್ರ

ವಿಜಯಪುರ:ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ಮುಸ್ಸಂಜೆ ತೆರೆ ಬಿದ್ದಿದೆ. ಇದರ ಬೆನ್ನಿಗೆ ಒಳೇಟಿನ ಅಸಲಿಯತ್ತಿನ ರಾಜಕಾರಣ ತೆರೆದುಕೊಂಡಿದೆ.

ವಿಜಯಪುರ ಹೊಂದಾಣಿಕೆ ರಾಜಕಾರಣಕ್ಕೆ ಹೆಸರುವಾಸಿ. ಇಷ್ಟು ದಿನ ಬಹಿರಂಗ ಅಖಾಡದಲ್ಲಿ ವಾಕ್ಸಮರ ನಡೆಸಿದ ಧುರೀಣರ ಪೈಕಿ ಯಾರ‍್ಯಾರು, ಇದೀಗ ಯಾವ್ಯಾವ ದಾಳ ಬಳಸಲಿದ್ದಾರೆ, ಮೌನಕ್ಕೆ ಶರಣಾಗುವರು ಯಾರು ? ಎಂಬುದು ಅಖಾಡದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಅಭ್ಯರ್ಥಿಗಳ ಬೆಂಬಲಿಗರು ಒಂದೆಡೆ ಮತದಾನಕ್ಕೂ ಮುನ್ನ ಮತ್ತೊಮ್ಮೆ ಮತದಾರರ ಮನವೊಲಿಕೆಗಾಗಿ, ಅವರವರ ಮನೆ ಬಾಗಿಲಿಗೆ ತೆರಳಿ ಕೈ ಮುಗಿದು ಮತ ಯಾಚಿಸಲು ತಂಡಗಳನ್ನು ರಚಿಸಿಕೊಂಡು ಸಿದ್ಧರಾಗಿದ್ದರೆ; ಇನ್ನೊಂದೆಡೆ ಕತ್ತಲ ರಾತ್ರಿಯ ಚುನಾವಣಾ ಕರಾಮತ್ತನ್ನು ನಡೆಸಲು, ಪ್ರಬಲ ಅಭ್ಯರ್ಥಿಗಳ ಬೆಂಬಲಿಗ ಪಡೆಯೂ ಅಖಾಡಕ್ಕಿಳಿದಿದೆ.

ಭಾನುವಾರ ರಾತ್ರಿ, ಸೋಮವಾರ ರಾತ್ರಿಯ ಕುರುಡು ಕಾಂಚಾಣದ ಕರಾಮತ್ತಿನ ತಡೆಗಾಗಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಚುನಾವಣಾ ಆಯೋಗ ಹಲ ಕಣ್ಗಾವಲು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಗಿಳಿದಿದೆ. ಇದರ ನಡುವೆಯೂ ಚಾಣಾಕ್ಷ್ಯರ ಕರಾಮತ್ತು ಎಗ್ಗಿಲ್ಲದೆ ನಡೆದಿದೆ.

ಐಟಿ ದಾಳಿಯ ಹೆದರಿಕೆಯಿಂದ, ಕುರುಡು ಕಾಂಚಾಣದ ನರ್ತನಕ್ಕೆ ಸಾಥ್‌ ನೀಡಲು ಹಲವರು ಹಿಂದೇಟು ಹಾಕಿದರೂ; ಕೊನೆ ಕ್ಷಣದ ಕರಾಮತ್ತಿಗಾಗಿ ಅಭ್ಯರ್ಥಿಗಳು ತಮ್ಮ ಆಪ್ತ ಪಡೆಯನ್ನೇ ಅಖಾಡಕ್ಕಿಳಿಸಿ, ಕ್ಷೇತ್ರದ ಮೂಲೆ ಮೂಲೆಗೂ ತಲುಪಿಸಲು ತಮ್ಮದೇ ಸಂಪರ್ಕ ಜಾಲ ಬಳಸಿಕೊಂಡಿದ್ದಾರೆ.

ಜಾತಿಯಲ್ಲೇ ಜಗಳ:

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ದಲಿತ ಎಡಗೈ ಸಮುದಾಯದವರು. ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚವ್ಹಾಣ ಬಂಜಾರಾ ಸಮುದಾಯದವರು.

ಆರಂಭದಿಂದಲೂ ಬಂಜಾರಾ ಸಮುದಾಯ ಒಗ್ಗಟ್ಟು ಪ್ರದರ್ಶಿಸಿದೆ. ಕೊನೆ ಕ್ಷಣದಲ್ಲಿ ಬಂಜಾರಾ ಸಮಾಜದಲ್ಲಿನ ಬಿಜೆಪಿ ಮುಖಂಡರು ಜಿಗಜಿಣಗಿಗೆ ಮತ ಹಾಕುವಂತೆ ನೀಡಿದ ಹೇಳಿಕೆಗೆ ಪ್ರತಿಯಾಗಿ, ಜೆಡಿಎಸ್‌, ಕಾಂಗ್ರೆಸ್‌ನ ಮುಖಂಡರು ಪ್ರತಿ ಹೇಳಿಕೆ ನೀಡಿ, ಟೀಕಾ ಸಮರವನ್ನೇ ನಡೆಸಿದ್ದಾರೆ.

ದಲಿತ ಸಂಘಟನೆಗಳು ಸಹ ಪರ–ವಿರೋಧ ವಾಗ್ದಾಳಿ ನಡೆಸಿವೆ. ಆಂತರಿಕವಾಗಿ ದಲಿತ ಎಡಗೈ–ಬಲಗೈ ಸಮುದಾಯದ ಪ್ರಮುಖರ ಸಭೆಗಳು ನಡೆದಿದ್ದು, ಒಮ್ಮತದ ನಿರ್ಣಯ ಅಂಗೀಕಾರವಾಗಿದೆ. ಇದರ ಬೆನ್ನಿಗೂ ಮೂರು ಪಕ್ಷಗಳ ಪ್ರಮುಖರು, ಬಿಎಸ್‌ಪಿ ಅಭ್ಯರ್ಥಿಯೂ ದಲಿತ ಮತಗಳ ಮೇಲೆ ಕಣ್ಣಿಟ್ಟುಕೊಂಡು ಪ್ರಚಾರ ನಡೆಸಿದ್ದಾರೆ. ಹೇಳಿಕೆ–ಪ್ರತಿ ಹೇಳಿಕೆ ನೀಡಿದ್ದು, ಸರಣಿ ಪತ್ರಿಕಾಗೋಷ್ಠಿಯನ್ನು ನಡೆಸಿ, ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.

ಅನೇಕ ಸಮಾಜಗಳು, ಜಾತಿಯ ಮುಖಂಡರು ಬೆಂಬಲ ವ್ಯಕ್ತಪಡಿಸಿ ಪತ್ರಿಕಾಗೋಷ್ಠಿ, ಸರಣಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಕ್ಷೇತ್ರದಲ್ಲಿನ ಚುನಾವಣಾ ಕಾವು ಹೆಚ್ಚಿಸಿದ್ದಾರೆ.

ಪಂಚಮಸಾಲಿ ಸಮಾಜದಲ್ಲೂ ಜಿಗಜಿಣಗಿ ಬೆಂಬಲಿಸುವ ವಿಚಾರದಲ್ಲಿ ಪರ–ವಿರೋಧ ವ್ಯಕ್ತವಾಗಿದೆ. ಆರೋಪ, ಟೀಕೆಗಳ ಸುರಿಮಳೆಯೇ ನಡೆಯಿತು. ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಲು, ಜೆಡಿಎಸ್‌ ಸಹ ಬಹಿರಂಗ ಪ್ರಚಾರದ ಕೊನೆ ದಿನ ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಸವರಾಜ ದಿಂಡೂರ ಮೂಲಕ ಪತ್ರಿಕಾಗೋಷ್ಠಿ ನಡೆಸಿ, ರಮೇಶ ವಿರುದ್ಧ ಜಾತಿಯ ಟೀಕಾಸ್ತ್ರ ಪ್ರಯೋಗಿಸಿತು. ಇದಕ್ಕೆ ಪ್ರತಿಯಾಗಿ ಜಿಗಜಿಣಗಿ ಒಡನಾಡಿ ಸೋಮನಗೌಡ ಯರನಾಳ ರಮೇಶ ಪರ ಕೊನೆಯದಾಗಿ ಮತ್ತೊಮ್ಮೆ ಬ್ಯಾಟ್‌ ಬೀಸಿದರು.

ಜಿಗಜಿಣಗಿ ವಿರುದ್ಧ ವ್ಯಂಗ್ಯದ ಟೀಕೆ..!

ಚುನಾವಣಾ ಪ್ರಚಾರ ಅಧಿಕೃತವಾಗಿ ಆರಂಭವಾಗುವುದಕ್ಕೂ ಮುನ್ನವೇ ಶುರುವಾಗಿದ್ದ ಜಿಗಜಿಣಗಿ ವಿರುದ್ಧದ ಟೀಕೆಗಳು ಬಹಿರಂಗ ಪ್ರಚಾರ ಅಂತ್ಯವಾಗುವ ತನಕವೂ ಬಿರುಸು, ಲೇವಡಿ, ವ್ಯಂಗ್ಯವಾಗಿಯೇ ನಡೆದವು.

‘ಜಿಗಜಿಣಗಿ ಮನೆ ಮುಂದಿನ ರಸ್ತೆ ಮಾಡಿಸಿದ್ದು ನಾವೇ. ಭೂತನಾಳ ಕೆರೆ ತುಂಬಿಸಿದ್ದೇವೆ. ಮೊಮ್ಮಕ್ಕಳ ಜತೆ ವಿಶ್ರಾಂತಿ ಪಡೆಯಲಿ’ ಎಂದು ಅಣ್ತಮ್ಮ ಗೃಹಸಚಿವ ಎಂ.ಬಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ವ್ಯಂಗ್ಯದ ಮೊನಚು ಬಾಣದ ದಾಳಿಯನ್ನೇ ತಮ್ಮ ಬಹಿರಂಗ ಪ್ರಚಾರದಲ್ಲಿ ಪ್ರಮುಖ ಟೀಕಾಸ್ತ್ರವನ್ನಾಗಿ ಬಳಸಿದರು.

ನಾಗಠಾಣ ಶಾಸಕ ದೇವಾನಂದ ಚವ್ಹಾಣ ಭಯೋತ್ಪಾದಕ ಎಂದು ಜರಿದರೆ, ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೆಣ್ಮಗಳ ಮೂಲಕ ಸೋಲಿಸೋಣ. ಗೋಳಗುಮ್ಮಟಕ್ಕಿರುವ ಬುದ್ದಿ ನಮ್ಮ ಜಿಗಜಿಣಗಿಗೆ ಇಲ್ಲ. ಕೇಕೇ, ಚಪ್ಪಾಳೆ ಬಿಡಿ, ವೋಟ್‌ ಹಾಕಿ ಎಂದೇ ಎಲ್ಲೆಡೆ ಕಾರ್ಯಕರ್ತರನ್ನು ಹುರಿದುಂಬಿಸಿದರು.

2018ರ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್, ಜೆಡಿಎಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ಈ ಚುನಾವಣಾ ಪ್ರಚಾರದುದ್ದಕ್ಕೂ ತಮ್ಮ ಎಂದಿನ ಸೌಮ್ಯ ಶೈಲಿಗೆ ಶರಣಾಗಿ, ಟೀಕೆಗಳಿಗೆ ಪ್ರತಿ ಟೀಕೆ ನಡೆಸದೆ, ವಿವಿಧೆಡೆ ಪ್ರಚಾರದಲ್ಲೇ ತಲ್ಲೀನರಾಗಿದ್ದರು.

ನೀರಾವರಿ ವಿಷಯದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಗೃಹ ಸಚಿವ ಎಂ.ಬಿ.ಪಾಟೀಲ, ಹಾಗೂ ಬೆಂಬಲಿಗರ ನಡುವೆ ಅಸಂಸದೀಯ ಶಬ್ದಗಳ ಸಮರವೇ ನಡೆಯಿತು. ನಡಹಳ್ಳಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆಯೇ ಹಲ್ಲೆ ಯತ್ನವೂ ನಡೆದಿದ್ದು, ಈ ಚುನಾವಣೆಯ ಕಪ್ಪುಚುಕ್ಕೆಯಾಗಿ ಇತಿಹಾಸದ ಪುಟಕ್ಕೆ ಸೇರ್ಪಡೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT