ವಿಜಯಪುರ: ಜಿಲ್ಲೆಯ ಮುತ್ತಗಿ ಗ್ರಾಮದಲ್ಲಿ ಗುರುವಾರ ಪಲಂಧು ರೈತ ಉತ್ಪಾದಕ ಕಂಪನಿ, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಅನಿಕೇತನ ಸಂಸ್ಥೆಯ ಸಹಯೋಗದಲ್ಲಿ ಈರುಳ್ಳಿ ಬೀಜ ಉತ್ಪಾದನೆ ಹಾಗೂ ಸಾವಯವ ಕೃಷಿಯಿಂದ ಬೆಳೆದ ಉತ್ಪನ್ನಗಳ ಖರೀದಿ ಕುರಿತು ತರಬೇತಿ ಕಾರ್ಯಕ್ರಮ ಜರುಗಿತು.
ಪಲಂಧು ರೈತ ಉತ್ಪಾದಕ ಕಂಪನಿ ಸಿಇಒ ಸಿದ್ದು ಪೂಜಾರ ಮಾತನಾಡಿ, ಪಲಂದು ಕಂಪನಿಯಿಂದ ಬೀಜೋತ್ಪಾದನೆ ಮಾಡುವ ಮೂಲಕ ಕಂಪನಿ ಬ್ರ್ಯಾಂಡ್ ಹೆಸರಿನಲ್ಲಿ ರಾಜ್ಯದಾದ್ಯಂತ ಈರುಳ್ಳಿ ಬೀಜವನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದರು.
ಬಾಗಲಕೋಟೆ ತೋಟಗಾರಿಕೆ ವಿವಿಯ ವಿಜ್ಞಾನಿ ಬಿ.ಬಿ. ಪಾಟೀಲ ಮಾತನಾಡಿ, ರೈತರಿಗೆ ಈರುಳ್ಳಿ ಬೀಜ ಸಂಸ್ಕರಣೆ ಕುರಿತು ಸಂವಾದ ನಡೆಸಿದರು. ಈರುಳ್ಳಿ ಬೀಜೋತ್ಪಾದನೆಗಾಗಿ ಪಲಂಧು ರೈತ ಉತ್ಪಾದಕ ಕಂಪನಿಯನ್ನು ದತ್ತು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಯೋಜನೆಯನ್ನು ರೂಪಿಸಿ ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಗುವುದು ಎಂದರು.
ಉದ್ಭವ ಖೆಡೆಕರ ಮಾತನಾಡಿ, ರೈತರಿಗೆ ಉತ್ತಮ ಗುಣಮಟ್ಟ ವಿವಿಧ ಈರುಳ್ಳಿ ತಳಿ ಬೀಜಗಳ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು.
ಪಲಂಧು ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಚಂದ್ರಶೇಖರ ಮಾಳಜಿ, ನಿರ್ದೇಶಕ ಅಣ್ಣಪ್ಪ ಚೌಧರಿ, ತೋಟಗಾರಿಕೆ ಇಲಾಖೆಯ ರವಿ ಪೋಲಿಸ್‌ಪಾಟೀಲ, ಅಮೃತ ಆರ್ಗ್ಯಾನಿಕ್‌ನ ಆನಂದ ಬಿರಾದಾರ, ಸಂತೋಷ ಹಳಮನಿ ಇದ್ದರು.