ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಓತಿಹಾಳ: ಸೋರುತಿಹುದು ಶಾಲೆಯ ಮಾಳಿಗೆ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವರಾಂಡದಲ್ಲಿ ಬೋಧನೆ
Published 10 ಜುಲೈ 2024, 6:14 IST
Last Updated 10 ಜುಲೈ 2024, 6:14 IST
ಅಕ್ಷರ ಗಾತ್ರ

ಸಿಂದಗಿ: ತಾಲ್ಲೂಕಿನ ಓತಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 80 ವರ್ಷಗಳಷ್ಟು ಹಳೆಯದಾದ ಶಾಲೆ. ಈ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಇಲ್ಲಿ 13 ವರ್ಗ ಬೋಧನಾ ಕೊಠಡಿಗಳಿವೆ. ಯೋಗ್ಯ ಎನ್ನಬಹುದಾದ ಆರು ಕೊಠಡಿಗಳಲ್ಲಿ ಒಂದು ಕೊಠಡಿಯಲ್ಲಿ ಶಾಲಾ ಶಿಕ್ಷಕರ ಕಾರ್ಯಾಲಯ, ಅದರಲ್ಲಿಯೇ ಗ್ರಂಥಾಲಯ ಇದೆ. ಇನ್ನುಳಿದ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಯಾವಾಗ ಮೇಲ್ಛಾವಣೆ ಕುಸಿದು ಬೀಳುತ್ತದೆ ಎಂಬ ಭಯ, ಆತಂಕ ಶಿಕ್ಷಕರು ಮತ್ತು ಪಾಲಕರಲ್ಲಿ ಕಾಡುತ್ತದೆ.

ಮಳೆ ಬಂದರೆ ಸೋರುತಿಹುದು ಶಾಲೆಯ ಮಾಳಿಗೆ. ಹೀಗಾಗಿ ಮಳೆಯಲ್ಲಿ ಮಕ್ಕಳಿಗೆ ಶಾಲೆ ರಜೆ ಅನಿವಾರ್ಯ. ಬಿಸಿಯೂಟದ ದವಸ ಧಾನ್ಯಗಳು ನೀರು ಪಾಲಾಗುತ್ತವೆ. ಶಾಲಾ ಸಾಮಗ್ರಿಗಳು, ಮಹತ್ವದ ಶಾಲಾ ದಾಖಲೆಗಳು ಮಳೆಯಿಂದಾಗಿ ನಾಶಗೊಂಡಿವೆ.

ಎರಡು ಕೊಠಡಿಗಳ ಹಾಳುಗೊಂಡಿದ್ದ ಹಂಚಿನ ಮೇಲ್ಛಾವಣೆ ತೆಗೆದು ಸಿಮೆಂಟ್ ಮೇಲ್ಛಾವಣೆ ಹಾಕಿದ್ದರೂ ಉಪಯೋಗವಾಗಿಲ್ಲ. ಯಾಕೆಂದರೆ ಕಳೆದ ಎರಡು ವರ್ಷಗಳಿಂದ ಈ ಎರಡು ಕೊಠಡಿಗಳಿಗೆ ಬಾಗಿಲು, ಕಿಟಕಿ ಜೋಡಣೆ ಮಾಡಿಲ್ಲ ಎಂಬುದು ಶಿಕ್ಷಕರ ಅಳಲು.

ಶಾಲಾ ಕಟ್ಟಡ ನಿರ್ಮಾಣಕ್ಕಾಗಿ, ಶಾಲಾ ಕೊಠಡಿಗಳ ದುರಸ್ತಿಗಾಗಿ ಶಿಕ್ಷಣ ಇಲಾಖೆ, ಮತಕ್ಷೇತ್ರದ ಶಾಸಕರಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡಾಗಲೂ ಯಾವುದೇ ಕ್ರಮ ಕೈಗೊಂಡಿಲ್ಲ.

ಇನ್ನಾದರೂ ಎಚ್ಚೆತ್ತುಕೊಂಡು ಶಾಲಾ ಕೊಠಡಿಗಳ ನಿರ್ಮಾಣ, ದುರಸ್ತಿ ಆಗದಿದ್ದರೆ ಶಾಲಾ ಮಕ್ಕಳೊಂದಿಗೆ ಶಾಲಾ ಸುಧಾರಣಾ ಸಮಿತಿ ಸದಸ್ಯರು ಶಿಕ್ಷಣ ಇಲಾಖೆಯ ಕಾರ್ಯಾಲಯದ ಎದುರು ಉಗ್ರ ಪ್ರತಿಭಟನೆ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಸಮಿತಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

‘ಮಳೆಯಿಂದ ಕೋಣೆಗಳು ಸೋರಿ ಚಿಣ್ಣರ ಅಂಗಳ ಸಾಮಗ್ರಿಗಳು, ಮಹತ್ವದ ದಾಖಲೆಗಳು ನಾಶಗೊಂಡಿವೆ. ಎಸ್‌ಡಿಎಂಸಿ ಅಧ್ಯಕ್ಷರು ಶಾಲೆ ಕೊಠಡಿಗಳು ಮಂಜೂರುಗೊಳ್ಳದ ಕಾರಣ ಇಲಾಖಾ ಅಧಿಕಾರಿಗಳ ವಿರುದ್ದ ಆಕ್ರೋಶದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥ ಕಿರಣಕುಮಾರ ನಾಟೀಕಾರ ಹೇಳಿದರು. 

ಮಳೆಗೆ ಸೋರುವ ನಾಲ್ಕು ಕೊಠಡಿಗಳು. ಎರಡು ಕೊಠಡಿಗಳಿಗೆ ಬಾಗಿಲು ಕಿಟಕಿ ಇಲ್ಲ. ಒಂದು ವರ್ಗದ ಬೋಧನೆ ವರಾಂಡದಲ್ಲಿ ನಡೆಯುತ್ತದೆ.
ಜಿ.ಎನ್.ನಡಕೂರ, ಮುಖ್ಯ ಗುರು, ಸರ್ಕಾರಿ ಪ್ರಾಥಮಿಕ ಶಾಲೆ ಓತಿಹಾಳ
ಶಾಲಾ ಕೊಠಡಿಗಳ ವ್ಯವಸ್ಥೆ ಆಗದಿದ್ದರೆ ಮಕ್ಕಳೊಂದಿಗೆ ಶಾಲಾ ಎಸ್‌ಡಿಎಂಸಿ ಸದಸ್ಯರು ಬಿಇಒ ಕಚೇರಿ ಎದುರು ಹೋರಾಟ ಕೈಗೊಳ್ಳಲಾಗುವುದು.
ಬಸಮ್ಮ ಪ್ರಭು ಮಣೂರ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ
ಓತಿಹಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರು ಕೊಠಡಿಗಳ ದುರಸ್ತಿಗೆ ಅನುದಾನ ದೊರೆತ ಕೂಡಲೆ ಕೊಠಡಿಗಳನ್ನು ದುರಸ್ತಿ ಮಾಡಲಾಗುವುದು.
ಆರೀಫ್ ಬಿರಾದಾರ, ಬಿಇಒ, ಸಿಂದಗಿ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT