ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ತುಂಬಿ ಹರಿದ ಚಿಕ್ಕಗಲಗಲಿ ಬ್ಯಾರೇಜ್‌ಗೆ ಬಾಗೀನ

ಜಾಕೆಟಿಂಗ್ ಮಾದರಿಯು ರಾಜ್ಯದಲ್ಲಿ ಹೊಸ ಪ್ರಯೋಗ; ಎಂ.ಬಿ.ಪಾಟೀಲ
Last Updated 23 ಜೂನ್ 2021, 11:22 IST
ಅಕ್ಷರ ಗಾತ್ರ

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಚಿಕ್ಕಗಲಗಲಿಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ₹54 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಬ್ರಿಡ್ಜ್-ಕಂ-ಬಾಂದಾರ ತುಂಬಿ ನಿಂತಿರುವ ಹಿನ್ನೆಲೆಯಲ್ಲಿಶಾಸಕ ಎಂ.ಬಿ.ಪಾಟೀಲ್ ಬುಧವಾರ ಗಂಗಾಪೂಜೆ ನೆರವೇರಿಸಿ, ಬಾಗೀನ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,2014ರಲ್ಲಿ ಈ ಭಾಗದ ರೈತ ಮುಖಂಡರು ಚಿಕ್ಕಗಲಗಲಿಯಲ್ಲಿ ಹೊಸ ಬ್ಯಾರೇಜ್ ನಿರ್ಮಿಸಲು ಬೇಡಿಕೆ ಇಟ್ಟಿದ್ದರು. ಟ್ರಿಬುನಲ್ ಹಾಗೂ ನ್ಯಾಯಾಲಯಗಳ ವ್ಯಾಜ್ಯದ ತೊಂದರೆ ಇರುವುದರಿಂದ ಹೊಸ ಬ್ಯಾರೇಜ್ ನಿರ್ಮಿಸುವುದು ಅಸಾಧ್ಯವಾಗಿತ್ತು ಎಂದರು.

50 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದ ಬ್ಯಾರೇಜ್ ಸುಸ್ಥಿತಿಯಲ್ಲಿ ಇರಲಿಲ್ಲ. ಅದನ್ನು ಎತ್ತರಿಸಲು ತಾಂತ್ರಿಕ ತೊಂದರೆಯೂ ಕೂಡ ಇತ್ತು. ಪಕ್ಕದ ತೆಲಂಗಾಣದಲ್ಲಿ ಜಾಕೆಟಿಂಗ್ ಮಾದರಿಯಲ್ಲಿ ಹಾಲಿ ಬ್ಯಾರೇಜ್‍ ಅನ್ನು ಬಲಪಡಿಸಿ, ಎತ್ತರಿಸುವ ಕಾಮಗಾರಿ ಮಾಡಿದ್ದರು. ಅದೇ ಮಾದರಿಯನ್ನು ಇಲ್ಲಿ ಪ್ರಯೋಗಿಸಿ ಹಿಂದಿನ ಬ್ಯಾರೇಜ್‍ ಅನ್ನು ಬಲಪಡಿಸಿ, ಎತ್ತರಿಸಲಾಗಿದೆ. ಇದು ಕರ್ನಾಟಕದ ಮಟ್ಟಿಗೆ ಹೊಸ ಪ್ರಯೋಗ ಎಂದರು.

ಕೋರ್ತಿ-ಕೋಲ್ಹಾರದಲ್ಲಿ ₹ 32 ಕೋಟಿ ವೆಚ್ಚದಲ್ಲಿ, ಗಲಗಲಿಯಲ್ಲಿ ₹34 ಕೋಟಿ ವೆಚ್ಚದಲ್ಲಿ ಒಟ್ಟು ₹66 ಕೋಟಿಗಳನ್ನು ಆರಂಭದಲ್ಲಿ ಮಂಜೂರು ನೀಡಲಾಗಿತ್ತು. ವಿನ್ಯಾಸದಲ್ಲಿ ಬದಲಾವಣೆ, ಜಿ.ಎಸ್.ಟಿ ಹೆಚ್ಚಳ ಮತ್ತು ಹೆಚ್ಚುವರಿ ಕಾಮಗಾರಿ ಸೇರಿ ಗಲಗಲಿ ಬ್ಯಾರೇಜ್‌ಗೆ ಒಟ್ಟು ₹54 ಕೋಟಿ ವಿನಿಯೋಗವಾಗಿದೆ. ಗಗಲಗಲಿ ಬ್ಯಾರೇಜ್‌ನಿಂದ ಹಿಪ್ಪರಗಿ ಬ್ಯಾರೇಜ್ ವರೆಗೆ ನೀರು ನಿಂತಿದೆ. ಇದರಿಂದ ಪ್ರತಿ ವರ್ಷ ಬೇಸಿಗೆಯಲ್ಲಿ ಮಹಾರಾಷ್ಟ್ರದ ಮುಂದೆ ಕೈಒಡ್ಡುವ ಬೇಡಿಕೆ ಕಡಿಮೆ ಆಗಲಿದೆ ಎಂದು ಹೇಳಿದರು.

ತುಬಚಿ-ಬಬಲೇಶ್ವರ ಯೋಜನೆಯಿಂದ ಈಗಾಗಲೇ ಮಹಾರಾಷ್ಟ್ರದ ಜತ್‌ ತಾಲ್ಲೂಕಿನ ಹಳ್ಳಿಗಳಿಗೆ ನೀರು ಕೊಡಲಾಗುತ್ತಿದ್ದು, ಅದರ ಬದಲಾಗಿ ಮಹಾರಾಷ್ಟ್ರದಿಂದ ಬೇಸಿಗೆಯಲ್ಲಿ ನಮ್ಮ ಬ್ಯಾರೇಜ್‍ಗಳಿಗೆ ನೀರು ಪಡೆಯುವ ಪ್ರಯತ್ನ ನಡೆದಿದೆ ಎಂದರು.

2013-18ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿ ರಾಜ್ಯದಾದ್ಯಂತ ಹಲವಾರು ನಿರ್ಮಾಣ ಕಾಮಗಾರಿ ಯೋಜನೆಗಳಿಗೆ ಚಾಲನೆ ನೀಡಿದ್ದೆ. ನನ್ನ ಅವಧಿ ಪೂರ್ಣಗೊಳ್ಳುವ ಮುಂಚೆಯೇ ಕೆಲವು ಯೋಜನೆಗಳನ್ನು ನಾನೇ ಉದ್ಘಾಟಿಸಿದ್ದೇನೆ. ನಾವೇ ಶಂಕುಸ್ಥಾಪನೆ ಮಾಡಿ, ನಾವೇ ಉದ್ಘಾಟನೆ ಮಾಡುವ ಭಾಗ್ಯ ಸಿಗುವುದು ಅಪರೂಪ ಎಂದರು.

ಆಸ್ಪತ್ರೆ ನಿರ್ಮಾಣ:

ನಂದಿ ಸಕ್ಕರೆ ಕಾರ್ಖಾನೆ ಭಾಗದಲ್ಲಿ ಆಸ್ಪತ್ರೆಗಳ ಕೊರತೆಯಿದ್ದು, ಪ್ರಾಥಮಿಕ ಆರೊಗ್ಯ ಕೇಂದ್ರ ಆರಂಭಿಸಬೇಕು ಎಂದು ಸ್ಥಳೀಯರು ಸಲ್ಲಿಸಿದ ಮನವಿಗೆ ನೀವು ಸ್ಥಳಾವಕಾಶ ಕೊಟ್ಟರೆ, ಬಿ.ಎಲ್.ಡಿ.ಇ ಸಂಸ್ಥೆಯಿಂದಲೇ ಇಲ್ಲಿ ಚಿಕ್ಕ ಆಸ್ಪತ್ರೆ ನಿರ್ಮಿಸುವುದಾಗಿ ಎಂ.ಬಿ.ಪಾಟೀಲ ಭರವಸೆ ನೀಡಿದರು.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಹಿರಿಯ ಸಹಕಾರಿ ಧುರೀಣ ಎಚ್.ಎಸ್.ಕೊರಡ್ಡಿ, ಜಿ.ಪಂ. ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಶಿವನಗೌಡ ಪಾಟೀಲ ಯಡಹಳ್ಳಿ, ಮುತ್ತು ವಾಸನ್ನ ದೇಸಾಯಿ, ಎಚ್.ಆರ್.ಬಿರಾದಾರ, ಬಸನಗೌಡ ಪಾಟೀಲ, ರಾಮಣ್ಣ ಶೇಬಾನಿ,ಗಿರೀಶ ಪಾಟೀಲ ಶಿರಬೂರ ಉಪಸ್ಥಿತರಿದ್ದರು.

* ಜನರು ಜನಪ್ರತಿನಿಧಿಗಳಿಗೆ ಅಧಿಕಾರದ ಅವಕಾಶ ಕೊಟ್ಟಾಗ, ಇಚ್ಛಾಶಕ್ತಿ ಪ್ರದರ್ಶನ ಮಾಡಿ, ಜನರ ಅಭಿವೃದ್ಧಿಗಾಗಿ ಶ್ರಮಿಸಲು ಮುಂದಾಗಬೇಕು.

–ಎಂ.ಬಿ.ಪಾಟೀಲ್, ಶಾಸಕ, ಬಬಲೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT