ವಿಜಯಪುರ: ಲಿಂಗಾಯತರ ಮನಸ್ಸಿಗೆ ಘಾಸಿ- ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ

ವಿಜಯಪುರ: ಶಾಸಕ ಎಂ.ಬಿ.ಪಾಟೀಲರು ಲಿಂಗಾಯತ ನಾಯಕರಲ್ಲ ಎಂಬ ಹೇಳಿಕೆ ರಾಜ್ಯದ ಲಿಂಗಾಯತರ ಮನಸ್ಸಿಗೆ ಘಾಸಿಯಾಗಿದೆ. ಇದು ಲಿಂಗಾಯತರಿಗೆ ಮಾಡಿದ ಅಪಮಾನ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಆಕ್ರೋಶ ವ್ಯಕ್ತಪಡಿಸಿದರು.
ಎಂ.ಬಿ.ಪಾಟೀಲ ಅವರ ಜಾತಿ ಸರ್ಕಾರದ ಲಿಂಗಾಯತ ಸಮುದಾಯದ ಪಟ್ಟಿಯಲ್ಲಿ ಇಲ್ಲ ಎಂದು ಉಮೇಶ ಕೋಳಕೂರ ಯಾವ ಆಧಾರದ ಮೇಲೆ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸಬೇಕು. ಈ ಹೇಳಿಕೆ ನೀಡುವ ಮುಂಚೆ ಅವರು ಹತ್ತು ಬಾರಿ ಆಲೋಚಿಸಬೇಕಿತ್ತು ಎಂದಿದ್ದಾರೆ.
ಲಿಂಗಾಯತರ ಅಭಿವೃದ್ದಿಗೆ ಎಂ.ಬಿ.ಪಾಟೀಲ ಯಾವ ಕಾರ್ಯ ಮಾಡಿದ್ದಾರೆ ಎಂಬುದು ಉಮೇಶ ಕೋಳಕೂರ ಅವರಿಗೂ ಗೊತ್ತಿರುವ ವಿಚಾರ. ಮಾಧ್ಯಮಗಳಿಗೆ ಅನಗತ್ಯ ಹೇಳಿಕೆ ನೀಡಿ, ಲಿಂಗಾಯತರ ಅಸ್ಮಿತೆಯನ್ನು ಕೆಣಕಿರುವುದು ಖಂಡನೀಯ ಎಂದರು.
ಎಂ.ಬಿ.ಪಾಟೀಲರು ಕೇವಲ ಲಿಂಗಾಯತ ನಾಯಕ ಮಾತ್ರವಲ್ಲ, ಎಲ್ಲ ಜಾತಿ, ಧರ್ಮ, ಸಮುದಾಯ ಸೇರಿದಂತೆ ಈಡೀ ರಾಜ್ಯದ ನಾಯಕರಾಗಿದ್ದಾರೆ ಎಂಬುದನ್ನು ಅವರು ಇನ್ನಾದರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಚಿವ ಕಾರಜೋಳ ಅವರು ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ದಲಿತ ಕಲ್ಯಾಣಕ್ಕಾಗಿ ಯಾವ ಕಾರ್ಯ ಮಾಡಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅಶೋಕ ಮನಗೂಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.