ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಂಜಾನೆ ಶ್ರಮಿಕರು’ ಪತ್ರಿಕಾ ವಿತರಕರು

ಪತ್ರಿಕಾ ವಿತರಕರ ದಿನಾಚರಣೆ ಇಂದು
Last Updated 3 ಸೆಪ್ಟೆಂಬರ್ 2021, 14:00 IST
ಅಕ್ಷರ ಗಾತ್ರ

ವಿಜಯಪುರ:ಆಧುನಿಕ ಆವಿಷ್ಕಾರದ ಪರಿಣಾಮ ದಿನ ಪತ್ರಿಕೆಗಳು ರೂಪಾಂತರಗೊಳ್ಳುತ್ತಿದ್ದರೂ ಜನರ ಮನೆಬಾಗಿಲಿಗೆ ತಲುಪಿಸುವ ‘ವಿತರಕರು’ ಮಾತ್ರ ಇಂದಿಗೂ ಪತ್ರಿಕೆಗಳ ಬೆನ್ನೆಲುಬಾಗಿಯೇ ಇದ್ದಾರೆ.

ಗಾಳಿ, ಮಳೆ,ಚಳಿ, ಬಿಸಿಲು ಸೇರಿದಂತೆ ಇನ್ನಾವುದೇ ಪರಿಸ್ಥಿತಿ ಇರಲಿ ವರ್ಷಪೂರ್ತಿ ಕೆಲಸ ಮಾಡುವ ಪತ್ರಿಕಾ ವಿತರಕರು ಕೋವಿಡ್‌ಗೂ ಅಂಜದೇ ಎಂದಿನಂತೆ ಕಾರ್ಯನಿರ್ವಹಿಸುವ ಮೂಲಕ ತಮ್ಮ ವೃತ್ತಿ ಬದ್ಧತೆ ಮೆರೆಯುತ್ತಿದ್ದಾರೆ.

ಬೆಳ್ಳಂಬೆಳಿಗ್ಗೆ ಪತ್ರಿಕೆಗಳನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ‘ಪತ್ರಿಕೆಗಳ ಬೆನ್ನೆಲಬು’ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಕೋವಿಡ್‌ ಸಂದಿಗ್ಧ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುವ ಮೂಲಕ ‘ಕೊರೊನಾ ಸೇನಾನಿ’ಗಳಿಗೂ ಒಂದು ಕೈ ಮೇಲೆಂಬಂತೆ ಸಾಹಸ ಮೆರೆದಿದ್ದಾರೆ.

‘ಪತ್ರಿಕೆಗಳಿಂದ ಕೊರೊನಾ ಸೋಂಕು ಹರಡುತ್ತದೆ’ ಎಂಬ ಊಹಾಪೂಹಗಳು ಹಬ್ಬಿದಾಗಲೂ ಅಂಜದೇ, ಓದುಗರ ಮನೆ ಬಾಗಿಲಿಗೆ ಪತ್ರಿಕೆಯನ್ನು ಒಯ್ದು, ‘ಅಂಜ ಬೇಡಿ, ಗಾಳಿ ಸುದ್ದಿಗೆ ಕಿವಿಕೊಡಬೇಡಿ’ ಎಂದು ತಿಳಿ ಹೇಳಿದರು.

‘ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ದುಡಿಮೆಯಿಂದ ವಂಚಿತರಾದಸಮಾಜದ ವಿವಿಧ ವರ್ಗಗಳಿಗೆ ಹಾಗೂ ವೃತ್ತಿಯವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ಸಹಾಯ, ಸಹಕಾರ ನೀಡುವ ಮೂಲಕ ಕೈಹಿಡಿದವು. ಆದರೆ, ಈ ಸಂದರ್ಭದಲ್ಲಿ ನಮ್ಮನ್ನು ಸರ್ಕಾರ ಮರೆತಿರುವುದು ಬೇಸರದ ಸಂಗತಿ’ ಎನ್ನುತ್ತಾರೆ ವಿಜಯಪುರ ನಗರ ಹಾಗೂ ಜಿಲ್ಲೆಯ ಪತ್ರಿಕಾ ಏಜೆಂಟರು ಮತ್ತು ವಿತರಕರು.

‘ಪತ್ರಿಕಾ ವಿತರಕರ’ ದಿನಾಚರಣೆಯ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಹಿರಿಯ ಪತ್ರಿಕಾ ಏಜೆಂಟ್‌ ಸುರೇಶ ಕಲಾದಗಿ, ಜನರು ಪತ್ರಿಕೆ ಹಾಕುವ ಹುಡುಗರನ್ನು ಪ್ರೋತ್ಸಾಹಿಸಬೇಕು, ಗೌರವಿಸಬೇಕು. ಜೊತೆಗೆ ಸರ್ಕಾರ ಪತ್ರಿಕಾ ವಿತರಕರನ್ನು ಕಡೆಗಣಿಸದೇ ಬೆಂಬಲವಾಗಿ ನಿಲ್ಲಬೇಕು’ ಎಂದರು.

‘ಪತ್ರಿಕಾ ವಿತರಕರನ್ನು ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಸಿಗುವ ಸೌಲಭ್ಯಗಳನ್ನು ಕೊಡಿಸಬೇಕು. ಸರ್ಕಾರ ನಮ್ಮ ರಕ್ಷಣೆಗೆ ಬರಬೇಕು’ ಎನ್ನುತ್ತಾರೆ ವಿಜಯಪುರದ ಹಿರಿಯ ಪತ್ರಿಕಾ ಏಜೆಂಟ್‌ ಮಲ್ಲಪ್ಪ ಮಂಗಣ್ಣಾವರ.

***

* ಸಂಕಷ್ಟದಲ್ಲಿರುವ ಪತ್ರಿಕಾ ವಿತರಕರಿಗೆ ಸಹಾಯಧನ ಒದಗಿಸಬೇಕು

* ಪತ್ರಿಕಾ ವಿತರಕರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲಸೌಲಭ್ಯ ಸಿಗಬೇಕು

* ಜೀವ ವಿಮಾ ಸೌಲಭ್ಯ ಒದಗಿಸಬೇಕು

* 60 ವರ್ಷ ಮೇಲ್ಪಟ್ಟ ಪತ್ರಿಕಾ ವಿತರಕರಿಗೆ ಪಿಂಚಣಿ ನೀಡಬೇಕು

* ಪತ್ರಿಕಾ ವಿತರಕರಿಗೆ ಸೈಕಲ್‌ ಸೌಲಭ್ಯ ಕಲ್ಪಿಸಬೇಕು

* ಆರೋಗ್ಯ ವಿಮಾ ಸೌಲಭ್ಯ ನೀಡಬೇಕು

* ವಸತಿ ಯೋಜನೆಯಡಿ ಮನೆಗಳನ್ನು ನೀಡಬೇಕು

***

40 ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವೆ. ಅಂದಿನಿಂದಲೂ ಸೈಕಲ್‌ನಲ್ಲೇ ತಿರುಗಾಡುತ್ತಿರುವ. ನಮ್ಮ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಸೌಲಭ್ಯ ನೀಡಬೇಕು

–ರಸೂಲ್‌ಸಾಬ್‌ ಹಂಡರಗಲ್‌, ಜುಲಾಯಿ ಗಲ್ಲಿ, ವಿಜಯಪುರ

***

40 ವರ್ಷಗಳಿಂದ ಖುಷಿಯಿಂದ ಕಾರ್ಯನಿರ್ವಹಿಸುತ್ತಿರುವೆ. ದುಡಿಮೆ ಜೊತೆಗೆ ಜ್ಞಾನ ಸಂಪಾದನೆ, ಜನ ಸಂಪರ್ಕವೂ ಲಭಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹುಡುಗರು ಈ ಕ್ಷೇತ್ರಕ್ಕೆ ಬರುತ್ತಿಲ್ಲ.

–ರೇವಪ್ಪ ರಾ.ಪಾಟೀಲ, ಸಿಂದಗಿ

***

18 ವರ್ಷಗಳಿಂದ ಮಳೆ, ಚಳಿಗೂ ಅಂಜದೇ ನಿತ್ಯ ಈ ಕೆಲಸದಲ್ಲಿ ತೊಡಗಿರುವೆ. ಕೋವಿಡ್‌ ಸಂದರ್ಭದಲ್ಲಿ ನಮ್ಮ ನೆರವಿಗೆ ಯಾರೂ ಬಂದಿಲ್ಲ. ಸರ್ಕಾರ ನಮಗೂ ಆಹಾರ ಕಿಟ್ ನೀಡಬೇಕು

–ಧನರಾಜ ಸಾತಪುತೆ, ಜಲನಗರ, ವಿಜಯಪುರ

***

ಏಳು ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿದ್ದೇನೆ. ನಮ್ಮ ಉಪ ಜೀವನಕ್ಕೆ ನೆರವಾಗಿದೆ. ಇದರಿಂದ ನಮ ಬದುಕು ಹಸನಾಗಿದೆ.

–ಶಿವಾನಂದ ಹೂಗಾರ, ಶಹಾಪುರ ಅಗಸಿ, ವಿಜಯಪುರ

***

19 ವರ್ಷಗಳಿಂದ ಪತ್ರಿಕೆ ವಿತರಕನಾಗಿ ಕಾರ್ಯನಿರ್ವಹಿಸುತ್ತಿರುವೆ. ಕೆಲಸ ಅತೃಪ್ತಿ ಇದೆ. ಇದರಿಂದಲೇ ನಮ್ಮ ಬದುಕು ನಡೆಯುತ್ತಿದೆ.ಸರ್ಕಾರದಿಂದ ಸಹಾಯದ ನಿರೀಕ್ಷೆಯಲ್ಲಿದ್ದೇವೆ

–ಶಿವಕುಮಾರ ಕರಜಗಿ, ಕೀರ್ತಿ ನಗರ, ವಿಜಯಪುರ

***

15 ವರ್ಷಗಳಿಂದ ಪತ್ರಿಕಾ ವಿತರಣೆ ಕಾರ್ಯ ಮಾಡುತ್ತಿರುವೆ. ಜೀವನಕ್ಕೆ ದಾರಿದೀಪವಾಗಿದೆ. ಬೇರೆ ವ್ಯವಹಾರ, ವೃತ್ತಿಗಳಿಗಿಂತ ಈ ವೃತ್ತಿ ಗೌರವದ ಬದುಕು ನೀಡಿದೆ

–ಮಲ್ಲಿಕಾರ್ಜುನ ಹಳ್ಳದ,ಐನಾಪುರ ಮಹಲ್‌, ವಿಜಯಪುರ

***

30 ವರ್ಷಗಳಿಂದ ಈ ವೃತ್ತಿಯಲ್ಲೇ ಬದುಕು ಕಂಡುಕೊಂಡಿರುವೆ. ಬೆಳಿಗ್ಗೆ 4ರಿಂದ 8ರ ವರೆಗೆ ಪ್ರತಿದಿನ ಈ ಕೆಲಸ ಮಾಡಿ, ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವೆ. ಸಂತೋಷವಾಗಿರುವೆ

–ನಾಗಪ್ಪ ಕಾಖಂಡಕಿ, ಕೇಂದ್ರ ಬಸ್‌ ನಿಲ್ದಾಣ, ವಿಜಯಪುರ

***

30 ವರ್ಷಗಳಿಂದ ಪತ್ರಿಕೆ ವಿತರಕನಾಗಿ ಕಾರ್ಯ ನಿರ್ವಹಿಸುತ್ತಿರುವೆ. ಎರಡು ಹೊತ್ತು ಅನ್ನ ಈ ವೃತ್ತಿಯಿಂದ ಸಿಗುತ್ತಿದೆ. ಇದರಿಂದ ಬದುಕು ಖುಷಿಯಿಂದ ನಡೆಯುತ್ತಿದೆ

–ಶಂಕರ ಡಿ.ರಾಠೋಡ, ರಾಜೇಂದ್ರನಗರ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT