ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: 33 ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ

ಮಮದಾಪುರದ ಮೀಸಲು ಅರಣ್ಯ ಪ್ರದೇಶ
Published 20 ಮೇ 2024, 15:13 IST
Last Updated 20 ಮೇ 2024, 15:13 IST
ಅಕ್ಷರ ಗಾತ್ರ

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಮಮದಾಪುರದ ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ 2024–25ನೇ ಸಾಲಿನಲ್ಲಿ 33 ಸಾವಿರ ಗಿಡ ನೆಡುವ ಕಾರ್ಯಕ್ಕೆ ಮಮದಾಪುರದ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ ಸೋಮವಾರ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಅರಣ್ಯ ಇಲಾಖೆಯು ಮಮದಾಪುರದಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟು ಬೆಳೆಸಿದ್ದು, ಇದೀಗ ಮೂರನೇ ಹಂತದಲ್ಲಿ ಮತ್ತಷ್ಟು ಗಿಡಗಳನ್ನು ನೆಡಲು ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಅರಣ್ಯ ನಾಶದಿಂದ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ವರ್ಷ ಎಂದೂ ಕಾಣದ ಬಿಸಿಲು ಜನರನ್ನು ಬಾಧಿಸಿದೆ. ಭವಿಷ್ಯದಲ್ಲಿ ಇದರಿಂದ ಪಾರಾಗಲು ಪ್ರತಿಯೊಬ್ಬರೂ ಎರಡೆರಡು ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಮನವಿ ಮಾಡಿದರು. 

ವಿಜಯಪುರ ವಲಯ ಅರಣ್ಯ ಅಧಿಕಾರಿ ಸಂತೋಷ ಆಜೂರ ಮಾತನಾಡಿ, ಮಮದಾಪುರದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಒಂದು ಲಕ್ಷ ಸಸಿಗಳನ್ನು ನೆಟ್ಟು, ಬೇಸಿಗೆಯಲ್ಲಿ ನೀರುಣಿಸಿ ಸಂರಕ್ಷಿಸಲಾಗಿದೆ. ಈ ವರ್ಷ 33 ಸಾವಿರ ಗಿಡ ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಮತ್ತಷ್ಟು ಗಿಡಗಳನ್ನು ನೆಟ್ಟು ಮಾದರಿ ಅರಣ್ಯವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಅರಣ್ಯ ಪ್ರದೇಶದಲ್ಲಿ ಆಲ, ಅರಳಿ, ಹುಣಸೆ, ಅತ್ತಿ, ಬೇವು, ಹೊಂಗೆ, ಬಿದಿರು, ನೇರಳೆ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತಿದೆ. ಈ ಗಿಡಗಳಿಗೆ ನೀರಿನ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ನೆಟ್ಟ ಒಂದು ಗಿಡವೂ ಸಾಯದಂತೆ ರಕ್ಷಣೆ ಮಾಡಲಾಗುವುದು ಎಂದರು. 

ಸಚಿವರಾದ ಎಂ.ಬಿ.ಪಾಟೀಲ, ಎನ್‌ಟಿಪಿಸಿ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಹಕಾರ, ಪ್ರೋತ್ಸಾಹದಿಂದ ಇಷ್ಟೊಂದು ಗಿಡಗಳನ್ನು ನೆಟ್ಟು ಬೆಳೆಸಲು ಸಾಧ್ಯವಾಗಿದೆ. ಗ್ರಾಮಸ್ಥರ ಸಹಕಾರವೂ ಇರುವುದರಿಂದ ಅರಣ್ಯ ಸಮೃದ್ಧವಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ಉಪ ವಲಯ ಅರಣ್ಯಾಧಿಕಾರಿ ಎ.ಎಸ್‌.ಬಗಲಿ, ಮಮದಾಪುರ ಬೀಟ್ ಫಾರೆಸ್ಟರ್ ಗುರು ಬಾಗೇವಾಡಿ, ಶ್ರೀಧರ ಪತ್ತಾರ, ನಡುತೋಪು ಸಿಬ್ಬಂದಿ ಸುರೇಶ, ಪ್ರಕಾಶ ಇದ್ದರು.

ಸಚಿವ ಎಂ.ಬಿ.ಪಾಟೀಲ ಅವರು ಬಬಲೇಶ್ವರ ತಾಲ್ಲೂಕಿಗೆ ಮೊದಲು ನೀರು ತಂದರು ಬಳಿಕ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಇದೀಗ ಅರಣ್ಯ ಬೆಳೆಸಲು ಆದ್ಯತೆ ನೀಡಿದ್ದಾರೆ. ಸಚಿವರಿಂದ ತಾಲ್ಲೂಕು ಸಮೃದ್ಧವಾಗಿದೆ
ಅಭಿನವ ಮುರುಘೇಂದ್ರ ಸ್ವಾಮೀಜಿ ವಿರಕ್ತಮಠ ಮಮದಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT