ಬುಧವಾರ, ಜೂನ್ 29, 2022
24 °C
ಮುಂಗಾರು ಬಿತ್ತನೆಗೆ ಹೊಲ ಸಜ್ಜುಗೊಳಿಸುತ್ತಿರುವ ರೈತ ಸಮುದಾಯ

ಎಣ್ಣೆಕಾಳು ಉತ್ಪಾದನೆಗೆ ಉತ್ತೇಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ನಿರೀಕ್ಷೆಗೂ ಮೀರಿ ಮುಂಗಾರು ಪೂರ್ವ ಮಳೆಯಾಗಿದೆ. ಪರಿಣಾಮ ರೈತ ಸಮುದಾಯ ಮುಂಗಾರು ಬಿತ್ತನೆಗೆ ಹೊಲವನ್ನು ಹಸನುಗೊಳಿಸಿ, ಬಿತ್ತನೆಗೆ ಸಜ್ಜುಗೊಳಿಸುವ ಕಾಯಕದಲ್ಲಿ ನಿರತವಾಗಿದ್ದಾರೆ.

ವಾಡಿಕೆಯಂತೆ ಈ ವರ್ಷವೂ ಜೂನ್‌ 7ಕ್ಕೆ ಜಿಲ್ಲೆಗೆ ಮುಂಗಾರು ಆಗಮಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಖಚಿತಪಡಿಸಿದೆ. 

ಜಿಲ್ಲೆಯಲ್ಲಿ 9,72,318 ಹೆಕ್ಟೇರ್‌ ಸಾಗುವಳಿ ಕ್ಷೇತ್ರವಿದ್ದು, 3,42,203 ಹಿಡುವಳಿದಾರರು ಇದ್ದಾರೆ. ಈ ವರ್ಷದ ಮುಂಗಾರಿನಲ್ಲಿ 7.5 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಇದೆ.

ಜಿಲ್ಲೆಯ ಮುಖ್ಯ ಬೆಳೆಯಾಗಳಾದ ತೊಗರಿ 5.25 ಲಕ್ಷ ಹೆಕ್ಟೇರ್‌, ಮುಸುಕಿನ ಜೋಳ 58 ಸಾವಿರ ಹೆಕ್ಟೇರ್‌, ಸಜ್ಜೆ 19 ಸಾವಿರ ಹೆಕ್ಟೇರ್‌, ಹೆಸರು 25 ಸಾವಿರ ಹೆಕ್ಟೇರ್‌, ಕಬ್ಬು 90 ಸಾವಿರ ಹೆಕ್ಟೇರ್‌, ಹತ್ತಿ 35 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಇದೆ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಡಾ.ವಿಲಿಯಂ ರಾಜಶೇಖರ್‌.

ಪ್ರತಿ ವರ್ಷ ಸೂರ್ಯಕಾಂತ್ರಿಯನ್ನು ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗುತ್ತದೆ. ಆದರೆ, ಈ  ಬಾರಿ ಒಂದು ಲಕ್ಷ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, ಶೇಂಗಾ ಉತ್ಪಾದನೆಗೆ ವಿಶೇಷ ಒತ್ತು ನೀಡಲಾಗಿದೆ ಎನ್ನುತ್ತಾರೆ ಅವರು.

ರಷ್ಯಾ–ಉಕ್ರೇನ್‌ ಯುದ್ಧದ ಪರಿಣಾಮ ಅಡುಗೆ ಎಣ್ಣೆ ತುಟ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಜಿಲ್ಲೆಯಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಎಣ್ಣೆ ಕಾಳುಗಳ ಕೃಷಿ ಮಾಡುವ ಮೂಲಕ ದೇಶದ ಆರ್ಥಿಕ ಸಬಲತೆಗೆ ಅನುಕೂಲ ಮಾಡುವ ಹಾಗೂ ರೈತರಿಗೂ ಆರ್ಥಿಕವಾಗಿ ಲಾಭವಾಗಿಸುವ ಉದ್ದೇಶದಿಂದ ಕೃಷಿ ಇಲಾಖೆ ಎಣ್ಣೆ ಕಾಳುಗಳ ಉತ್ಪಾದನೆಗೆ ಮೊದಲ ಆದ್ಯತೆ ನೀಡಿದೆ ಎನ್ನುತ್ತಾರೆ ರಾಜಶೇಖರ್‌.

ಈ ವರ್ಷದ ಮುಂಗಾರಿನಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, ಶೇಂಗಾ ಮತ್ತಿತರರ ಎಣ್ಣೆಕಾಳು ಕೃಷಿಗೆ ಆದ್ಯತೆ ನೀಡಲಾಗಿದ್ದು, ರೈತ ಸಮುದಾಯ ತೊಗರಿಯ ಜೊತೆಗೆ ಎಣ್ಣೆಕಾಳುಗಳ ಉತ್ಪಾದನೆಗೆ ಒತ್ತು ನೀಡಬೇಕು. ಇದರಿಂದ ಆರ್ಥಿಕವಾಗಿ ಅನುಕೂಲವಾಗಲಿದೆ ಎಂದು ಅವರು ವಿನಂತಿಸಿದ್ದಾರೆ.

ಅಲ್ಲದೇ, ಪ್ರತಿಯೊಬ್ಬ ರೈತರು ಹವಾಮಾನ ಆಧರಿತ ಬೆಳೆವಿಮೆಯನ್ನು ಕಡ್ಡಾಯವಾಗಿ ಮಾಡಿಸಲು ಆದ್ಯತೆ ನೀಡಬೇಕು. ಬೆಳೆ ನಷ್ಠವಾದರೆ ಸೂಕ್ತ ಪರಿಹಾರ ಸಿಗಲಿದೆ ಎನ್ನುತ್ತಾರೆ ಅವರು.

ಈಗಾಗಲೇ ರೈತರು ಭೂಮಿಯನ್ನು ಬಿತ್ತನೆಗೆ ಸಜ್ಜುಗೊಳಿಸುತ್ತಿದ್ದಾರೆ. ರೈತರಿಗೆ ಅಗತ್ಯ ಇರುವ ಬಿತ್ತನೆ ಬೀಜ, ರಸಗೊಬ್ಬರವನ್ನು ಕೃಷಿ ಇಲಾಖೆ  ದಾಸ್ತಾನು ಮಾಡಿಕೊಳ್ಳತೊಡಗಿದೆ.

ತೊಗರಿ 11,700 ಕ್ವಿಂಟಲ್‌, ಗೋವಿನ ಜೋಳ 3,700 ಕ್ವಿಂಟಲ್‌, ಶೇಂಗಾ 635 ಕ್ವಿಂಟಲ್‌, ಸೂರ್ಯಕಾಂತಿ 714 ಕ್ವಿಂಟಲ್‌ ಮತ್ತು ಸಜ್ಜೆ 146 ಕ್ವಿಂಟಲ್‌ ಸೇರಿದಂತೆ ಒಟ್ಟು 17,0037 ಕ್ವಿಂಟಲ್‌ ಬಿತ್ತನೆ ಬೀಜವನ್ನು ಸಂಗ್ರಹಿಸಲಾಗಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆಗೆ ಕ್ರಮಕೈಗೊಂಡಿದೆ ಎನ್ನುತ್ತಾರೆ ರಾಜಶೇಖರ್‌.

ಅದೇ ರೀತಿ ಮುಂಗಾರು ಹಂಗಾಮಿಗೆ ಜಿಲ್ಲೆಗೆ 89 ಸಾವಿರ ಮೆಟ್ರಿಕ್‌ ಟನ್‌ ವಿವಿಧ ರಸಗೊಬ್ಬರದ ಅಗತ್ಯವಿದೆ. ಸದ್ಯ ಜಿಲ್ಲೆಯಲ್ಲಿ 8500 ಟನ್‌ ಡಿಎಪಿ, 10 ಸಾವಿರ ಟನ್‌ ಯೂರಿಯಾ, 23 ಸಾವಿರ ಟನ್‌ ಕಾಂಪ್ಲೆಕ್ಸ್‌ ದಾಸ್ತಾನು ಇದೆ. ಆದರೆ, ಬಿತ್ತನೆ ಆರಂಭವಾಗದ ಹಿನ್ನೆಲೆಯಲ್ಲಿ ಇನ್ನೂ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ.

ಹೆಚ್ಚುವರಿ ಮಳೆ:

ಜಿಲ್ಲೆಯಲ್ಲಿ ಜನವರಿಯಿಂದ ಮೇ 24ರ ವರೆಗೆ 49 ಎಂಎಂ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಚಂಡಮಾರುತದ ಪರಿಣಾಮ 117 ಎಂಎಂ ಅಧಿಕ ಮಳೆಯಾಗಿದೆ. 

ವಿಚಕ್ಷಣ ದಳ:

ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಅಕ್ರಮ ಮಾರಾಟ ಮತ್ತು ಕಳಪೆ ಗುಣಮಟ್ಟದ ಬೀಜ, ರಸಗೊಬ್ಬರ ಪೂರೈಕೆ ತಡೆಯಲು ಕೃಷಿ ಇಲಾಖೆಯು ಪ್ರತಿ ತಾಲ್ಲೂಕಿಗೆ ತಲಾ ಒಂದು ವಿಚಕ್ಷಣ ದಳ ರಚಿಸಿದೆ. ಈ ತಂಡವು ನಿಡಗುಂದಿ ತಾಲ್ಲೂಕಿನ ಗೊಳಸಂಗಿಯಲ್ಲಿ ತಪಾಸಣೆ ಮಾಡಿ, ಲೈಸನ್ಸ್‌ ಇಲ್ಲದೇ ಕೀಟ ನಾಶಕ ಮಾರಾಟ ಮಾಡುತ್ತಿದ್ದ ಅಂಗಡಿಗೆ ಬೀಗ ಹಾಕಿ ₹ 67 ಸಾವಿರ ಮೊತ್ತದ ಕೀಟನಾಶಕವನ್ನು ಜಪ್ತಿ ಮಾಡಿದೆ.

ಮಳೆ–ಬೆಳೆ ನಿರೀಕ್ಷೆ:

ಈಗಾಗಲೇ ಹದ ಮಳೆಯಾಗಿರುವುದರಿಂದ ಹೊಲವನ್ನು ಹಸನು ಮಾಡಿಕೊಂಡಿರುವ ಜಿಲ್ಲೆಯ ರೈತ ಸಮುದಾಯ ಈ ಬಾರಿ ಉತ್ತಮ ಮಳೆ–ಬೆಳೆಯ ನಿರೀಕ್ಷೆಯಲ್ಲಿದೆ.

****

ಸಿರಿಧಾನ್ಯ ಬೀಜಗಳ ಕೊರತೆ

ನಾಲತವಾಡ: ನಾಗರಿಕರಲ್ಲಿ ಹೆಚ್ಚಿದ ಆರೋಗ್ಯ ಕಾಳಜಿ ಮತ್ತು ಆಹಾರ ತಜ್ಞರು ಮೂಡಿಸಿದ ಅರಿವಿನಿಂದಾಗಿ ದಶಕದಿಂದ ಈಚೆಗೆ ನವಣೆ, ಸಾಮೆ, ಹಾರಕ, ಸಜ್ಜೆ, ಕೊರಲೆ, ಬರಗು ಮತ್ತು ಊದಲು ಮತ್ತಿತರ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಬಿತ್ತಲು ಸಕಾಲಕ್ಕೆ ರೈತರಿಗೆ ಸಿರಿಧಾನ್ಯ ಬೀಜಗಳ ಕೊರತೆ ಎದ್ದು ಕಾಣುತ್ತದೆ,ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಿದರೆ ಕೃಷಿ ಇಲಾಖೆಯು ಮೇಲಧಿಕಾರಿಗಳನ್ನು ಸಂಪರ್ಕಿಸಲು ಹೇಳುತ್ತಾರೆ, ಮೇಲಾಧಿಕಾರಿಗಳು ವಿಶ್ವವಿದ್ಯಾಲಯದ ತಜ್ಞರನ್ನು ಸಂಪರ್ಕಿಸಲು ಹೇಳುತ್ತಾರೆ. ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಸಾಂಪ್ರದಾಯಕ ಬೀಜಗಳ ಹೊರತು ಬೇರೆ ರೀತಿಯ ಬೀಜಗಳು ಸಿಗುತ್ತಿಲ್ಲ, ಸಂಕರಣ ತಳಿಯ ಹೆಸರು, ಉದ್ದು, ಅಲಸಂದೆ ಬೀಜಗಳಿಗೂ ಭಾರೀ ಬೇಡಿಕೆ ಇದೆ. ಅವುಗಳ ಕೊರತೆಯೂ ಎದ್ದುಕಾಣುತ್ತಿದೆ.

ಯಾವ ರೈತರಿಗೆ ಯಾವ ಬೀಜ, ಎಷ್ಟು ಬೇಕು ಎಂದು ಇಲಾಖೆ ಮುಂಚಿತವಾಗಿ ದಾಖಲಿಸಿಕೊಳ್ಳಬೇಕು ಎಂಬುದೇ ರೈತರ ಆಗ್ರಹ. ಪ್ರತಿ ವರ್ಷ ಬಿತ್ತುವ ತೊಗರಿ, ಸಜ್ಜೆಗೆ ಬರವಿಲ್ಲ, ಉಳಿದ ಧಾನ್ಯಗಳು ಸಿಗುತ್ತಿಲ್ಲ.

****

ಸಿಂದಗಿಯಲ್ಲಿ ಕಳಪೆ ಬೀಜ ಮಾರಾಟ?

ಸಿಂದಗಿ: ಈ ಭಾಗದಲ್ಲಿ ಹದವಾದ ಮಳೆ ಸುರಿದಿಲ್ಲ. ಬಿತ್ತನೆ ಮಾಡುವಷ್ಟು ಭೂಮಿ ಹಸಿಯಾಗಿಲ್ಲ. ಜೂನ್ 7 ಮೃಗಶಿರ ಮಳೆ ಪ್ರವೇಶದ ನಂತರವೇ ಬಿತ್ತನೆಯ ಲಕ್ಷಣಗಳು ಕಂಡು ಬರುತ್ತದೆ.
ಇನ್ನೂ ಬಿತ್ತನೆಯ ಬೀಜ ಮಾರಾಟ ಪ್ರಾರಂಭಗೊಂಡಿಲ್ಲ.

‘ಸಿಂದಗಿ ಭಾಗದಲ್ಲಿ ಹೈದರಾಬಾದ್‌ ಮೂಲದ ಶಹಾಪೂರದಿಂದ ಕಳಪೆ ಬೀಜ ಬರುತ್ತದೆ. ಕಳಪೆ ಎಂದು ಸ್ವತ: ಕೃಷಿ ಅಧಿಕಾರಿಗಳೇ ಗುರುತಿಸಲಾಗದ ರೀತಿಯಲ್ಲಿ ಮೂಲ ಬೀಜದ ರೀತಿಯಲ್ಲಿ ಪ್ಯಾಕಿಂಗ್ ಮಾಡಲಾಗಿರುತ್ತದೆ. ಅದರಲ್ಲೂ ಹತ್ತಿ ಮತ್ತು ಮೆಣಸಿನ ಬೆಳೆ ಕಳಪೆ ಬೀಜ ಮಾರಾಟ ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದಾಗಿದೆ. ಇಂಥ ಭಯಾನಕ ಜಾಲವೊಂದು ಈ ಭಾಗದಲ್ಲಿ ಇದೆ.

ಈ ಕುರಿತು ಕೃಷಿ ಇಲಾಖೆ ಮೇಲಧಿಕಾರಿಗಳು ಅತ್ಯಂತ ಪಾರದರ್ಶಕ ತನಿಖೆ ಮೂಲಕ ಕಳಪೆ ಬೀಜ ಮಾರಾಟ ಜಾಲವನ್ನು ಪತ್ತೆ ಹಚ್ಚುವಂತೆ ಪ್ರಗತಿ ಪರ ರೈತರೊಬ್ಬರು ಒತ್ತಾಯಿಸಿದ್ದಾರೆ.

***

ರಸಗೊಬ್ಬರ ಮಾರಾಟಗಾರರಿಗೆ ಸೂಚನೆ

ವಿಜಯಪುರ: ರಸಗೊಬ್ಬರ ಪೂರೈಕೆದಾರರು ಹಾಗೂ ಮಾರಾಟಗಾರರು ಕೃತಕವಾಗಿ ರಸಗೊಬ್ಬರ ಕೊರತೆಯನ್ನು ಸೃಷ್ಟಿಸಬಾರದು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ವಿಲಿಯಂ ರಾಜಶೇಖರ್‌ ಸೂಚನೆ ನೀಡಿದ್ದಾರೆ.

ನಿಗದಿತ ದರಕ್ಕೆ ರಸಗೊಬ್ಬರ ಮಾರಾಟ ಮಾಡಬೇಕು, ರಸಗೊಬ್ಬರಗಳನ್ನು ವಿತರಿಸುವಾಗ ಕಡ್ಡಾಯವಾಗಿ ಪಾಯಿಂಟ್‌ ಆಫ್‌ ಸೇಲ್‌ ಮಷಿನ್‌ ಬಳಸಬೇಕು. ರಸಗೊಬ್ಬರದ ಭೌತಿಕ ದಾಸ್ತಾನಿಗೂ ಹಾಗೂ ಪಾಯಿಂಟ್‌ ಆಫ್‌ ಸೇಲ್‌ ಮಷಿನ್‌ ದಾಸ್ತಾನಿಗೂ ಹೊಂದಾಣಿಕೆ ಇರಬೇಕು ಎಂದು ತಿಳಿಸಿದ್ದಾರೆ.

ರೈತರು ಕೇಳಿದ ರಸಗೊಬ್ಬರಗಳನ್ನು ಮಾತ್ರ ಅವರಿಗೆ ನೀಡಬೇಕು. ಅದರ ಜೊತೆ ಇತರೆ ರಸಗೊಬ್ಬರ,ಪರಿಕರಗಳನ್ನು ಖರೀದಿಸಲು ಒತ್ತಾಯಸಬಾರದು ಹಾಗೂ ರೈತರಿಂದ ದೂರುಗಳು ಬಂದಲ್ಲಿ ರಸಗೊಬ್ಬರಗಳ ಕಾನೂನು ಪ್ರಕಾರ ಸೂಕ್ತ ಕ್ರಮಕೈಗಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

***

ರೈತರು ಅಧಿಕೃತ ಮಾರಾಟಗಾರರ ಬಳಿ ಬೀಜ, ಗೊಬ್ಬರ, ಔಷಧ ಖರೀದಿಸಬೇಕು. ಕಡ್ಡಾಯವಾಗಿ  ಬಿಲ್‌ ತೆಗೆದುಕೊಳ್ಳಬೇಕು. ಅಂತರ್‌ ಬೆಳೆ ಬೆಳೆಯಲು ಮತ್ತು ಬೆಳೆ ವಿಮೆ ಮಾಡಿಸಲು ಆದ್ಯತೆ ನೀಡಬೇಕು

–ಡಾ.ವಿಲಿಯಂ ರಾಜಶೇಖರ್‌

ಜಂಟಿ ಕೃಷಿ ನಿರ್ದೇಶಕ, ವಿಜಯಪುರ

****

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಮಹಾಂತೇಶ ವೀ.ನೂಲಿನವರ, ಶಾಂತೂ ಹಿರೇಮಠ, ಶರಣಬಸಪ್ಪ ಶಿ.ಗಡೇದ, ಅಮರನಾಥ ಹಿರೇಮಠ,ಎ.ಸಿ.ಪಾಟೀಲ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು