ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ

ಬಸವೇಶ್ವರ ವೃತ್ತದಲ್ಲಿ ಸಿಲಿಂಡರ್‌ ಪ್ರತಿಕೃತಿ ದಹಿಸಿದ ಎಸ್.ಯು.ಸಿ.ಐ ಕಾರ್ಯಕರ್ತರು
Last Updated 9 ಮೇ 2022, 11:29 IST
ಅಕ್ಷರ ಗಾತ್ರ

ವಿಜಯಪುರ:ಅಡುಗೆ ಅನಿಲ(ಎಲ್‌ಪಿಜಿ ಸಿಲಿಂಡರ್‌) ದರ ಹೆಚ್ಚಳ ಖಂಡಿಸಿನಗರದ ಬಸವೇಶ್ವರ ವೃತ್ತದ ಬಳಿ ಎಸ್.ಯು.ಸಿ.ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಕೆಂದ್ರ ಸರ್ಕಾರವು ಮೇಲಿಂದ ಮೇಲೆ ಅಡುಗೆ ಅನಿಲ ದರವನ್ನು ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ. ಸರ್ಕಾರದ ಇಂತಹ ಜನವಿರೋಧಿ ನೀತಿಗಳ ವಿರುದ್ಧ ಜನತೆ ಪ್ರಬಲ ಹೋರಾಟ ನಡೆಸಬೇಕು ಎಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನ್‍ರೆಡ್ಡಿ ಹೇಳಿದರು.

ಈಗಾಗಲೇ ₹ 1ಒಂದು ಸಾವಿರ ಇರುವ ಎಲ್‍ಪಿಜಿ ಸಿಲಿಂಡರ್ ಬೆಲೆ ಈಗ ₹ 50ರಷ್ಟು ಹೆಚ್ಚಿಸಿರುವುದರಿಂದ ಒಂದು ಸಿಲಿಂಡರ್ ಬೆಲೆ ₹1050ಕ್ಕೆ ತಲುಪಿದ್ದು, ಜನ ಸಾಮಾನ್ಯರಿಗೆ ಕಷ್ಟವಾಗಿದೆ ಎಂದರು.

ದರ ಏರಿಕೆ ಜನಸಾಮಾನ್ಯರ ತಿಂಗಳ ಕರ್ಚಿನ ಬಹುಪಾಲನ್ನು ಹೆಚ್ಚಿಸುತ್ತದೆ. ಉಜ್ವಲ ಯೋಜನೆಯ ಹೆಸರಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡಿದ ಸರ್ಕಾರ ಸಾಂಪ್ರದಾಯಿಕ ಹಾಗೂ ವೆಚ್ಚ ರಹಿತ ಉರುವಲು ಬಳಕೆಯನ್ನು ನಾಶ ಮಾಡಿ, ಅನಿವಾರ್ಯವಾಗಿ ಬಡವರೂ ಅಡಿಗೆ ಮಾಡಲು ಎಲ್‍ಪಿಜಿ ಸಿಲಿಂಡರ್ ಬಳಸುವಂತೆ ಮಾಡಲಾಯಿತು. ಆದರೆ, ಈಗ ಕೊರೊನಾ ಹೊಡೆತಕ್ಕೆ ಸಿಲುಕಿ ನರಳುತ್ತಿರುವ ಜನತೆಯ ಮೇಲೆ ಸರ್ಕಾರ ಬೆಲೆ ಏರಿಕೆಯ ಭಾರ ಹೇರುತ್ತಿದೆ. ಬಂಡವಾಳಿಗರ ಸೇವೆ ಮಾಡುವ ನಮ್ಮ ಆಳ್ವಿಕರು, ಅವರ ಲಾಭ ಹೆಚ್ಚಿಸಲು ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಬಿಜೆಪಿ ಸರ್ಕಾರ ಕಳೆದ 7 ವರ್ಷಗಳಲ್ಲಿ ಕಾರ್ಪೊರೇಟ್ ಮನೆತನಗಳ ₹10.7 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಶೇ 33ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ 22ಕ್ಕೆ ಇಳಿಸಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಂಡವಾಳಶಾಹಿ ಪರ ನೀತಿಗಳನ್ನೇ ಬಿಜೆಪಿ ಸರ್ಕಾರ ಇನ್ನಷ್ಟು ವೇಗವಾಗಿ ಮುಂದುವರೆಸುತ್ತಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ ಎಂದರು.

ಹಿರಿಯ ಹೋರಾಟಗಾರ ಅಪ್ಪಾಸಾಹೇಬ ಯರನಾಳ ಮಾತನಾಡಿ, ಆರ್ಥಿಕ ಹಿಂಜರಿತ, ಕೊರೊನಾದಿಂದಾಗಿ ಕೋಟ್ಯಾಂತರ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ಮೂಲಭೂತ ಅವಶ್ಯಕತೆಯಾದ ಎಲ್‍ಪಿಜಿ ದರವನ್ನು ಏರಿಸಿ ಜನಸಾಮಾನ್ಯರು ಅರೆಹೊಟ್ಟೆಯಲ್ಲಿ ಬದುಕುವಂತೆ ಮಾಡ ಹೊರಟಿರುವ ಸರ್ಕಾರದ ಈ ನಿರ್ಧಾರ ನಾಚಿಕೆಗೇಡಿತನದ್ದಾಗಿದೆ. ಇಂತಹ ಸಮಸ್ಯೆಗಳ ವಿರುದ್ಧ ಜನತೆ ಹೋರಾಟಕ್ಕೆ ಸಜ್ಜಾಗಬೇಕು ಎಂದು ಹೇಳಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದಲಿಂಗ ಬಾಗೇವಾಡಿ, ಎಸ್‍ಯುಸಿಐ(ಸಿ)ನ ಜಿಲ್ಲಾ ಸಮಿತಿ ಸದಸ್ಯರಾದ ಬಾಳು ಜೇವೂರ, ಮಲ್ಲಿಕಾರ್ಜುನ ಎಚ್.ಟಿ, ಸಂಘಟನಾಕಾರರಾದ ಕಾವೇರಿ, ದೀಪಾ, ಗೀತಾ ಹೆಚ್, ಶಿವರಂಜನಿ, ಅನುರಾಗ ಸಾಳುಂಕೆ, ದಸ್ತಗೀರ ಉಕ್ಕಲಿ, ಸುಲೋಚನಾ ತಿವಾರಿ ಮಹಾದೇವ ಲಿಗಾಡೆ ಮುಂತಾವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

***

ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಈಗಾಗಲೇ ಗಗನಕ್ಕೇರಿದ್ದು, ಜನಸಾಮಾನ್ಯರು, ಕಾರ್ಮಿಕರು ಜೀವನ ನಡೆಸುವುದೇ ದುಸ್ತರವಾಗಿದೆ

–ವಿ.ಎ. ಪಾಟೀಲ, ಮುಖಂಡ,ಎಸ್.ಯು.ಸಿ.ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT