ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರ ಉದ್ಘಾಟನೆ ಸಂದರ್ಭ ಶ್ರೀಕಾಂತ ಬಂಧನ ತಪ್ಪು ಸಂದೇಶ ಕೊಡುತ್ತದೆ: ಪೇಜಾವರ ಶ್ರೀ

Published 4 ಜನವರಿ 2024, 7:03 IST
Last Updated 4 ಜನವರಿ 2024, 7:03 IST
ಅಕ್ಷರ ಗಾತ್ರ

ವಿಜಯಪುರ: ‘ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ತಪ್ಪಿತಸ್ಥನಾಗಿದ್ದರೆ ಶಿಕ್ಷಿಸುವುದು ತಪ್ಪಲ್ಲ. ಆದರೆ, ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬಂಧಿಸಿರುವುದು ತಪ್ಪು ಸಂದೇಶ ಕೊಡುತ್ತಿದೆ. ಈ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕಿತ್ತು’ ಎಂದು ಉಡುಪಿ ಪೇಜಾವರಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀ ಹೇಳಿದರು.

ಇಲ್ಲಿನ ಜ್ಞಾನ ಯೋಗಾಶ್ರಮಕ್ಕೆ ಗುರುವಾರ ಭೇಟಿ ನೀಡಿ ಸಿದ್ದೇಶ್ವರ ಶ್ರೀಗಳಿಗೆ ನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

₹10 ಕೋಟಿ ಧನ ಸಂಗ್ರಹಿಸಿ ರಾಮ ಮಂದಿರಕ್ಕೆ ಕೊಟ್ಟಿದ್ದೇವೆ. ಆದರೂ ನಮಗೆ ಆಹ್ವಾನ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ‘ದೊಡ್ಡ ಮೊತ್ತದ ದೇಣಿಗೆ ಕೊಟ್ಟವರು ಬಹಳ ಮಂದಿ ಇದ್ದಾರೆ. ಅಷ್ಟು ಮಂದಿಯನ್ನು ಕರೆದು ಕೂಡಿಸುವ ವ್ಯವಸ್ಥೆ ಅಲ್ಲಿ ಇಲ್ಲ‌. ಕೆಲವರನ್ನು ಕರೆದರೆ ಮಾತ್ರ ಕಾರ್ಯಕ್ರಮ ನಡೆಸಲು ಸಾಧ್ಯ ಆಗಲಿದೆ. ಆ ದಿನ ಬರಲು ಅವಕಾಶ ಸಿಗದವರಿಗೆ ಮುಂದಿನ ದಿನ ಬರಲಿಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಇದೆ’ ಎಂದು ಹೇಳಿದರು.

‘ವಿಶ್ವ ಹಿಂದೂ ಪರಿಷತ್ ಹಿರಿಯ ಸದಸ್ಯರಿಗೂ ಅಂದು ಬರಬೇಡಿ ಎನ್ನುವ ಸಂದೇಶ ಇದೆ. ಮುಂದಿನ ದಿನಗಳಲ್ಲಿ ಬನ್ನಿ ಎಂದು ತಿಳಿಸಲಾಗಿದೆ’ ಎಂದರು.

ಗೋಧ್ರಾ ಮಾದರಿಯ ಘಟನೆ ಮರುಕಳಿಸಬಹುದು ಎಂಬ ಬಿ. ಕೆ. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ‘ಈ ರೀತಿ ಹೇಳಿಕೆ ನೀಡುವವರೇ ನಿಜವಾದ ಭಯೋತ್ಪಾದಕರು. ಹೇಳಿಕೆ‌ಗಳ ಮೂಲಕ ಭಯೋತ್ಪಾದನೆ ಮಾಡಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇವರು ಏಕೆ ನೇರವಾಗಿ ಪೊಲೀಸ್ ಇಲಾಖೆಗೆ ಈ ಕುರಿತು ಮಾಹಿತಿ ನೀಡಿಲ್ಲ? ಇವರು ಯಾರನ್ನ ರಕ್ಷಣೆ ಮಾಡ್ತಿದ್ದಾರೆ? ಕೇಳಿದರೆ ಹೇಳುವೆ ಅನ್ನೋದು ವಿಧ್ವಂಸಕ ಕೃತ್ಯ ನಡೆಯಲಿ ಎಂದ ಹಾಗಲ್ಲವೇ? ಇವರು ವಿಧ್ವಂಸಕ ಕೃತ್ಯ ನಡೆಸುವವರನ್ನ ರಕ್ಷಣೆ ಮಾಡ್ತಿದ್ದಾರಾ?’ ಎಂದು ಪೇಜಾವರ ಶ್ರೀ ಪ್ರಶ್ನಿಸಿದರು.

‘ಜವಾಬ್ದಾರಿ ಸ್ಥಾನದಲ್ಲಿ‌ ಇರುವವರು ಈ ರೀತಿ ಮಾತನಾಡಬಾರದು. ರಾಮ ಭಕ್ತರನ್ನು ಹೆದರಿಸುವ ನೆಪದಲ್ಲಿ, ಇಡೀ ದೇಶವನ್ನೇ ಹೆದರಿಸುತ್ತಿದ್ದಾರೆ. ಕೃತ್ಯ ನಡೆದರೆ ರಾಮಭಕ್ತರ ಮೇಲಷ್ಟೇ ಅಲ್ಲ, ಎಲ್ಲರ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

‘ಶ್ರೀರಾಮ ಮಂದಿರ ವ್ಯಾಜ್ಯ ಹುಟ್ಟಿಕೊಂಡಿದ್ದು 500 ವರ್ಷಗಳ ಹಿಂದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಯಿತು. ದೇಶದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಆಡಳಿತ ಮಾಡಿದ್ದು ಯಾರು’ ಎಂದು ಪ್ರಶ್ನಿಸಿದರು.

‘ಶ್ರೀರಾಮ ಮಂದಿರ ಮಾಡಿಕೊಡಿ ಎಂದು ಅವರ ಬಳಿ ಹಲವಾರು ಬಾರಿ ಕೇಳಲಾಗಿತ್ತು‌ ಆದರೆ, ಮಾಡಿಕೊಡಲಿಲ್ಲ’ ಎಂದರು.

ಲೋಕಸಭಾ ಚುನಾವಣೆ ಹಿನ್ನೆಲೆಯಾಗಿ ಶ್ರೀರಾಮ ಮಂದಿರ ಉದ್ಘಾಟನೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಲೋಕಸಭೆ, ವಿಧಾನಸಭಾ ಚುನಾವಣೆ ಇರಬಹುದು. ಆದರೆ, ಅವುಗಳ ಅಧಿಕಾರ ಅವಧಿ ಐದು ವರ್ಷ ಮಾತ್ರ. ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಮಮಂದಿರ ಉದ್ಘಾಟನೆ ಮಾಡುತ್ತಾರೆ ಎಂಬ ಮಾತನ್ನು ತಪ್ಪಿಸಿಕೊಳ್ಳುವ ಸಮಯ ಯಾವಾಗ ಹೇಳಿ’ ಎಂದರು.

‘ಮಂದಿರ ನಿರ್ಮಾಣವನ್ನು ಯಾವುದೇ ಪರಿಸ್ಥಿತಿಯಲ್ಲಿ ತಡೆಯಬೇಕೆಂಬ ಹುನ್ನಾರ ಇದು. ಇದರಲ್ಲಿ ಯಾವುದೇ ಹುರುಳಿಲ್ಲ’ ಎಂದ ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT