ವಿಜಯಪುರ: ‘ಪ್ರೊ.ಎಚ್.ಟಿ. ಪೋತೆಯವರ ಬರಹಗಳು ಸಮರಸದಿಂದ ಕೂಡಿವೆ. ಕರುಣೆಯಿಂದ ಅಂತಃಕರಣದೆಡೆಗೆ ಕೊಂಡೊಯ್ಯುತ್ತವೆ. ಅವರ ಸಾಹಿತ್ಯ ಬರಹಗಳು ವೈಚಾರಿಕತೆ ಮತ್ತು ತಾತ್ವಿಕತೆಯಿಂದ ಕೂಡಿವೆ’ ಎಂದು ಡಾ. ಚನ್ನಪ್ಪ ಕಟ್ಟಿ ಹೇಳಿದರು.
‘ಸಮ್ಮೇಳನಾಧ್ಯಕ್ಷರ ಸಾಹಿತ್ಯ’ ಕುರಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪೋತೆ ಅವರ ಬರಹಗಳು ಮುಂದಿನ ತಲೆಮಾರಿಗೆ ದಾರಿ ತೋರುತ್ತವೆ. ಜನಪರ ನಂಬಿಕೆಗಳನ್ನು ತುಂಬಾ ಗಟ್ಟಿಯಾಗಿ ಅವರ ಕಥೆಯಲ್ಲಿ ಬರುವ ಪಾತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಅವರು ಚಿಂತಕ, ಸೃಜನಶೀಲ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ’ ಎಂದರು.
‘ಹಂಜಗಿ ಎಂಬ ಪುಟ್ಟ ಹಳ್ಳಿಯಿಂದ ಬುದ್ದನ ಕಡೆಗೆ ಹೊರಟಿದ್ದಾರೆ. ಪೋತೆ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಶುಭ ಹಾರೈಸಿದರು.
ಡಾ. ಮೂದೇನೂರು ನಿಂಗಪ್ಪ, ಡಾ. ಕಿರಣ ಗಾಜನೂರು, ಡಾ. ಶಿವರಾಜ ಬ್ಯಾಡರಹಳ್ಳಿ, ಜಂಬುನಾಥ ಕಂಚ್ಯಾಣಿ, ಜೈನೇಶ ಪ್ರಸಾದ, ದೇವು ಪತ್ತಾರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.