ಭಾನುವಾರ, ಜೂಲೈ 5, 2020
27 °C
ಕೋಟಿವೃಕ್ಷ ಅಭಿಯಾನದ ಯಶಸ್ಸಿಗೆ ಶ್ರಮಿಸಲು ಕರೆ

25 ಲಕ್ಷ ಸಸಿ ನೆಡಲು ಸಿದ್ಧತೆ: ವಿಜಯಪುರ ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜೂನ್‌ನಿಂದ ಮುಂಗಾರು ಪ್ರಾರಂಭವಾಗಲಿದ್ದು, ಈ ಬಾರಿ 25 ಲಕ್ಷ ಸಸಿಗಳನ್ನು ನೆಟ್ಟು ಬೆಳಸುವ ಮೂಲಕ ಕೋಟಿ ವೃಕ್ಷ ಅಭಿಯಾನ ಸಂಪೂರ್ಣ ಸಫಲತೆ ಸಾಧಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕೋಟಿ ವೃಕ್ಷ ಅಭಿಯಾನದ ಪೂರ್ವ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 75 ಲಕ್ಷ ಸಸಿಗಳನ್ನು ನೆಡಲಾಗಿದ್ದು, ಈ ವರ್ಷ 25 ಲಕ್ಷ ಸಸಿಗಳನ್ನು ವಿವಿಧ ಪ್ರದೇಶಗಳಲ್ಲಿ ನೆಡುವುದರ ಮೂಲಕ 1 ಕೋಟಿ ಸಸಿಗಳನ್ನು ನೆಡುವ ಕಾರ್ಯ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಭೂತನಾಳ ಕೆರೆಯ ಹತ್ತಿರವಿರುವ ಕರಾಡದೊಡ್ಡಿ ಸೇರಿದಂತೆ ಜಿಲ್ಲೆಯಾದ್ಯಂತ ಈಗಾಗಲೇ 75 ಲಕ್ಷ ಗಿಡಗಳು ಜೀವ ಪಡೆದುಕೊಂಡಿದ್ದು, ಪಕ್ಷಿ ಸಂಕುಲಕ್ಕೆ ಹೆಚ್ಚಿನ ರೀತಿಯ ಆಕರ್ಷಣೆಯಾಗುತ್ತಿದೆ. ಜಿಲ್ಲೆಯಲ್ಲಿ ಅರಣ್ಯವಲಯ ಹೆಚ್ಚತೊಡಗಿದೆ ಎಂದರು.

ಕೆಬಿಜೆಎನ್‍ಎಲ್ ಹಾಗೂ ವಿವಿಧ ನರ್ಸರಿಗಳಿಂದ 8 ಲಕ್ಷ ಸಸಿಗಳನ್ನು ಗುರುತಿಸಿ ಜೂನ್‌ನಲ್ಲಿ ನೆಡುವ ಕಾರ್ಯ ಪ್ರಾರಂಭಿಸಬೇಕು ಹಾಗೂ ಅವುಗಳ ಸೂಕ್ತ ಪೋಷಣೆಯ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಅತಿಕ್ರಮಣಕ್ಕೆ ಒಳಗಾದ ಪ್ರದೇಶ ಹಾಗೂ ಖಾಲಿ ಇರುವ ಜಾಗಗಳನ್ನು  ಗುರುತಿಸಬೇಕು. ಸಸಿಗಳನ್ನು ನೆಡಲು ಸೂಕ್ತ ಪ್ರದೇಶಗಳ ವರದಿಯನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ಎರಡು ದಿನಗಳೊಳಗೆ ನೀಡಬೇಕು ಎಂದು ತಿಳಿಸಿದರು.

ಕೆಬಿಜೆಎನ್‍ಎಲ್‌ನಿಂದ  ಕೃಷ್ಣಾ ನದಿ ತೀರದ ರೈತರಿಗೆ ಸಸಿ ವಿತರಣೆ ಪ್ರಾರಂಭಿಸಬೇಕು  ಹಾಗೂ ವಿವಿಧ ನರ್ಸರಿಗಳು ತಮ್ಮಲ್ಲಿರುವ ಸಸಿಗಳ ಮಾಹಿತಿಯನ್ನು ನೀಡಬೇಕು. ಸರ್ಕಾರಿ ಕಚೇರಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಕಾಲೇಜು ಆವರಣಗಳಲ್ಲಿ ಸಸಿ ನೆಡುವಂತಾಗಬೇಕು ಎಂದು ಸೂಚಿಸಿದರು.

ಭೂತನಾಳದ ಕರಾಡದೊಡ್ಡಿಯಲ್ಲಿ ಇರುವ ಗಿಡಮರಗಳಲ್ಲಿ ವಿವಿಧ ಜಾತಿಯ ಪಕ್ಷಿಗಳು ಆಶ್ರಯ ಪಡೆದಿವೆ. ಜಿಲ್ಲೆಯಲ್ಲಿ ಒಟ್ಟು 285 ವಿವಿಧ ಜಾತಿಯ ಪಕ್ಷಿಗಳಿದ್ದು, ಭೂತನಾಳದ ಸುತ್ತಮುತ್ತಲಿನ ಪ್ರದೇಶದಲ್ಲೆ 185ಕ್ಕೂ ಹೆಚ್ಚಿನ ವಿವಿಧ ಜಾತಿಯ ಪಕ್ಷಿ ಸಂಕುಲ ವಾಸವಾಗಿದೆ ಎಂದು ಹೇಳಿದರು.

ಕರಾಡದೊಡ್ಡಿಯಲ್ಲಿ ಲಾಲ್‍ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯಲ್ಲಿ ಸಸ್ಯ ಸಂಗಮ ಉದ್ಯಾನ ಪ್ರಾರಂಭಿಸುವ ನಿಟ್ಟಿನಲ್ಲಿ ವಿವಿಧ ಜಾತಿಯ ಗಿಡಗಳ ವರದಿಯನ್ನು ಪಡೆಯಲಾಗಿದ್ದು, ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತು ಸಿಇಒ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ವಿಜಯಪುರ ಉಪವಿಭಾಗಾಧಿಕಾರಿ ಗೆಣ್ಣೂರ, ಸಂಗಮೇಶ ಬಿರಾದಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು