ಭಾನುವಾರ, ಅಕ್ಟೋಬರ್ 17, 2021
23 °C
ಬಂಜಾರಾ ಹಾಗೂ ಭೋವಿ ವಡ್ಡರ ಸಮಾಜದವರಿಂದ

ಸದಾಶಿವ ವರದಿ ತಿರಸ್ಕರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುದ್ದೇಬಿಹಾಳ: ಬಂಜಾರ, ಬೋವಿ, ಕೊರಚ, ಕೊರಮ ಜಾತಿಯವರನ್ನು ಸಂವಿಧಾನ ನೀಡಿರುವ ಮೀಸಲಾತಿಯಿಂದ ಹೊರಗಿಡುವ ದುರುದ್ದೇಶ ಹೊಂದಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ತಿರಸ್ಕರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ನೇತೃತ್ವದಲ್ಲಿ ವಿವಿಧ ಬೆಂಬಲಿತ ಸಂಘಟನೆಗಳ ಸದಸ್ಯರು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಂಜಾರಾ ಸಮಾಜದ ಕುಲಗುರು ಸಂತ ಸೇವಾಲಾಲ ಮಹಾರಾಜರಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಂಜಾರ ಸಮಾಜದ ಗುರುಗಳಾದ ಕೆಸರಟ್ಟಿಯ ಸೋಮಲಿಂಗ ಮಹಾರಾಜರು ಹಾಗೂ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಹಾದ್ದೂರ್ ರಾಠೋಡ ಅವರ ನೇತೃತ್ವದಲ್ಲಿ ಆಲಮಟ್ಟಿ ರಸ್ತೆಯಲ್ಲಿರುವ ಸೇವಾಲಾಲ ವೃತ್ತದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ತಲುಪಿತು.

ಬಹಿರಂಗ ಸಭೆಯಲ್ಲಿ ಸೋಮಲಿಂಗ ಮಹಾರಾಜರು, ಬಹಾದ್ದೂರ ರಾಠೋಡ, ರಾಜಪಾಲ ಚವ್ಹಾಣ, ಡಾ. ರಾಜೇಂದ್ರ ನಾಯಕ, ಬಸವರಾಜ ಚವ್ಹಾಣ, ಜಿಲ್ಲಾಧ್ಯಕ್ಷ ರಾಜು ಜಾಧವ, ನಾನಪ್ಪ ನಾಯಕ ಮತ್ತಿತರರು ಮಾತನಾಡಿ, ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಬಂಜಾರ, ಬೋವಿ, ಕೊರಚ, ಕೊರಮ ಜಾತಿಯವರ ಮಧ್ಯೆ ಕೆಲವು ಕುತಂತ್ರ ರಾಜಕಾರಣಿಗಳು ದ್ವೇಷ ಬಿತ್ತುವ ಮನೋಭಾವದಿಂದ ನಮ್ಮ ನಡುವೆ ಸಂಘರ್ಷ ಹುಟ್ಟು ಹಾಕುತ್ತಿದ್ದಾರೆ ಎಂದು ಹೇಳಿದರು.

ಈ ಎಲ್ಲ ಸಮುದಾಯಗಳ ಹಿತಾಸಕ್ತಿಯಿಂದ ವರದಿಯನ್ನು ತಿರಸ್ಕರಿಸಬೇಕು. ನಿರ್ಲಕ್ಷ್ಯ ಮಾಡಿದಲ್ಲಿ ರಾಜ್ಯದಾದ್ಯಂತ ಕೋಮು ಸಂಘರ್ಷ ಮತ್ತು ರಕ್ತಪಾತ ಆಗಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಖೂಬಾಸಿಂಗ್ ಚವ್ಹಾಣ, ಎನ್.ಆರ್. ನಾಯಕ, ಚಿದಾನಂದ ಸೀತಿಮನಿ, ರವಿ ನಾಯಕ, ಸಿ.ಎನ್. ಲಮಾಣಿ, ಅಶೋಕ ನಾಯಕ, ಅನೀಲ ನಾಯಕ, ಲಕ್ಷ್ಮಣ ನಾಯಕ, ಎನ್.ಎಸ್.ಚವ್ಹಾಣ, ಡಿ.ಬಿ.ಚವ್ಹಾಣ, ಎಸ್.ಎಂ. ಮೇಲಿಮನಿ, ಭೋವಿ ಸಮಾಜದ ಮುಖಂಡರಾದ ರವಿ ನಾಲತವಾಡ, ಪಾತ್ರೋಟ, ಶೇಖರ ಢವಳಗಿ ಸೇರಿದಂತೆ ಭೋವಿ ವಡ್ಡರ ಸಮಾಜ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಸಮಿತಿ ಸೇರಿ ವಿವಿಧ ಸಂಘಟನೆಗಳ ಸದಸ್ಯರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.