ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ನಗರ ವಿಧಾನಸಭೆ ಕ್ಷೇತ್ರ: ಹಿಂದು, ಮುಸ್ಲಿಮರಿಗೂ ಪ್ರಾತಿನಿಧ್ಯ

ವಿಜಯಪುರ ನಗರ ವಿಧಾನಸಭೆ ಕ್ಷೇತ್ರ
Last Updated 15 ಏಪ್ರಿಲ್ 2023, 13:26 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸ ವೈಶಿಷ್ಟಪೂರ್ಣವಾಗಿದೆ. ಕಾಂಗ್ರೆಸ್‌, ಬಿಜೆಪಿ, ಜೆಎನ್‌ಪಿ ಮತ್ತು ಪಕ್ಷೇತರರಿಗೂ ಕ್ಷೇತ್ರದ ಮತದಾರ ಮಣೆ ಹಾಕಿದ್ದಾರೆ. ಅಷ್ಟೇ ಅಲ್ಲ, ಹಿಂದೂ, ಮುಸ್ಲಿಮರಿಗೂ ಪ್ರಾತಿನಿಧ್ಯ ನೀಡಿರುವುದು ವಿಶೇಷ.

ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಪ್ರಾಬಲ್ಯ ಇದ್ದರೂ ಕೂಡ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿ ಆಯ್ಕೆಯಾಗಿರುವುದು ಕ್ಷೇತ್ರದ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಇದುವರೆಗೆ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ ಮುಸ್ಲಿಂ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬೇರಾವ ಪಕ್ಷವೂ ಮುಸ್ಲಿಮರಿಗೆ ಅವಕಾಶ ಕಲ್ಪಿಸಿಲ್ಲ.

1957ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಗುಮ್ಮಟನಗರಿಯ ಜನರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಬದಲು ಪಕ್ಷೇತರ ಅಭ್ಯರ್ಥಿ ಸರ್ದಾರ್ ಬಸವರಾಜ ನಾಗೂರ ಅವರಿಗೆ ಶಾಸಕ ಪಟ್ಟ ಕಟ್ಟುವ ಮೂಲಕ ರಾಜ್ಯದ ಗಮನ ಸೆಳೆದಿತ್ತು.

ಇದುವರೆಗೆ ಕಾಂಗ್ರೆಸ್ ಪಕ್ಷ ವಿಜಯಪುರ ಕ್ಷೇತ್ರದಲ್ಲಿ ಏಳು ಬಾರಿ ಜಯಗಳಿಸಿದೆ. ಬಿಜೆಪಿ ಐದು ಬಾರಿ, ಜೆಎನ್‌ಪಿ ಒಂದು ಬಾರಿ ಖಾತೆ ತೆರೆದಿದೆ. ಪಕ್ಷೇತರರು ಸಹ ಒಂದು ಬಾರಿ ಆಯ್ಕೆಯಾಗಿದ್ದಾರೆ.

ಈ ಕ್ಷೇತ್ರದಿಂದ ರೇವಣಸಿದ್ಧ ಶರಣಪ್ಪ ನಾವದಗಿ ಕಾಂಗ್ರೆಸಿನ ಪ್ರಥಮ ಶಾಸಕರಾದರೇ, ಚಂದ್ರಶೇಖರ ಗಚ್ಚಿನಮಠ ಬಿಜೆಪಿಗೆ ಮೊದಲ ಬಾರಿಗೆ ಗುಮ್ಮಟನಗರಿಯಲ್ಲಿ ಖಾತೆ ತೆರೆದರು.

ಎಂ.ಎಲ್. ಉಸ್ತಾದ ಮೂರು ಬಾರಿ ಹಾಗೂ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತು ಬಸನಗೌಡ ಪಾಟೀಲ ಯತ್ನಾಳ ತಲಾ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಸರ್ದಾರ್ ನಾಗೂರ, ಬಿ.ಎಂ.ಪಾಟೀಲ, ಕೆ.ಟಿ. ರಾಠೋಡ ವಿಜಯಪುರ ನಗರ ಪ್ರತಿನಿಧಿಸಿದ ಶಾಸಕರಲ್ಲಿ ಪ್ರಮುಖರು.

1994ರಲ್ಲಿ ಈ ಕ್ಷೇತ್ರದ ಶಾಸಕರಾಗುವ ಮೂಲಕ ರಾಜಕೀಯ ಭವಿಷ್ಯ ಕಲ್ಪಿಸಿಕೊಂಡ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ 1999 ರ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಲೋಕಸಭೆಗೆ ಸ್ಪರ್ಧಿಸಿದರು. ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡರಾದರೂ ಯಶಸ್ಸು ಅವರಿಗೆ ಲಭಿಸಲಿಲ್ಲ. ಆದರೆ, 2004ರ ಚುನಾವಣೆಯಲ್ಲಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ 70,001 ಮತ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗಿನ ಚುನಾವಣೆಯಲ್ಲಿ ಬೆರಳಣಿಕೆಯಷ್ಟು ಮಹಿಳೆಯರು ಸ್ಪರ್ಧೆ ಮಾಡಿದ್ದಾರೆ. ಆದರೆ, ಯಾರಿಬ್ಬರೂ ಜಯಗಳಿಸಿಲ್ಲ. 1983ರಲ್ಲಿ ಸುಧಾಬಾಯಿ ವಿಷ್ಣುಪಂಥ ಪಾಠಕ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ನಂತರ 1985 ಮತ್ತು 1994ರ ಚುನಾವಣೆಯಲ್ಲಿ ನಜ್ಮಾ ಬಾಂಗಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. 2008 ರಲ್ಲಿ ಜರೀಜ್ ಫೈರೋಜ್ ಶೇಖ್, 2013 ರಲ್ಲಿ ನಿರ್ಮಲಾ ಅರಕೇರಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರೂ ಕೂಡ ಇದುವರೆಗೆ ಯಾರೊಬ್ಬರೂ ಆಯ್ಕೆಯಾಗಿಲ್ಲ.

ಪಟ್ಟಿ

ವಿಜಯಪುರ ನಗರ ಕ್ಷೇತ್ರ ಪ್ರತಿನಿಧಿಸಿದ ಶಾಸಕರು

ವರ್ಷ;ಆಯ್ಕೆಯಾದ ಶಾಸಕರು;ಪಕ್ಷ

1957;ಡಾ.ಸರ್ದಾರ್‌ ಬಸವರಾಜ ನಾಗೂರ;ಪಕ್ಷೇತರ
1962;ಆರ್‌.ಎಸ್‌. ನಾವದಗಿ;ಕಾಂಗ್ರೆಸ್
1967;ಬಿ.ಎಂ. ಪಾಟೀಲ;ಕಾಂಗ್ರೆಸ್
1972;ಕೆ.ಟಿ. ರಾಠೋಡ;ಕಾಂಗ್ರೆಸ್
1978;ಎಸ್‌.ಎಚ್‌.ಎಸ್. ಭಕ್ಷಿ;ಜೆಎನ್‌ಪಿ
1983;ಚಂದ್ರಶೇಖರ ಗಚ್ಚಿನಮಠ;ಬಿಜೆಪಿ
1985;ಎಂ.ಎಲ್. ಉಸ್ತಾದ;ಕಾಂಗ್ರೆಸ್
1989;ಎಂ.ಎಲ್. ಉಸ್ತಾದ;ಕಾಂಗ್ರೆಸ್
1994;ಬಸನಗೌಡ ಪಾಟೀಳ ಯತ್ನಾಳ;ಬಿಜೆಪಿ
1999;ಎಂ.ಎಲ್. ಉಸ್ತಾದ;ಕಾಂಗ್ರೆಸ್
2004;ಅಪ್ಪಾಸಾಹೇಬ ಪಟ್ಟಣಶೆಟ್ಟಿ;ಬಿಜೆಪಿ
2008;ಅಪ್ಪಾಸಾಹೇಬ ಪಟ್ಟಣಶೆಟ್ಟಿ;ಬಿಜೆಪಿ
2013;ಡಾ.ಮಕ್ಬೂಲ್ ಬಾಗವಾನ;ಕಾಂಗ್ರೆಸ್
2018;ಬಸನಗೌಡ ಪಾಟೀಲ ಯತ್ನಾಳ;ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT