ಭಾನುವಾರ, ಜುಲೈ 25, 2021
28 °C

ತಳವಾರ-ಪರಿವಾರಕ್ಕೆ ಎಸ್‍ಟಿ ಪ್ರಮಾಣ ಪತ್ರ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ತಳವಾರ-ಪರಿವಾರ ಸಮುದಾಯಕ್ಕೆ ಎಸ್‍ಟಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಅನವಶ್ಯಕ ಗೊಂದಲ ಸೃಷ್ಠಿಸುತ್ತಿರುವುದು ಖಂಡನೀಯ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ  ಆದೇಶದಲ್ಲಿ ತಳವಾರ ಮತ್ತು ಪರಿವಾರ ಎಂಬುದು ಪ್ರತ್ಯೇಕ ಜಾತಿ ಎಂದು ಎಲ್ಲೂ ಪರಿಗಣಿಸಿಲ್ಲ. ಅದೊಂದು ಪರ್ಯಾಯ ಪದ ಎಂದು ಸ್ಪಷ್ಟವಾಗಿ ತಿಳಿಸಿದರೂ ಅಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ತಲೆತಲಾಂತರದಿಂದ ಬಂದ ತಳವಾರ ಪದ ಒಂದೇ ಇದ್ದು, ಅದರಲ್ಲಿ ಬೇರೆ ಬೇರೆ ಜಾತಿಗಳು ಸೇರಿಕೊಂಡಿಲ್ಲ. ಕೆಲವರು ವಾಲ್ಮೀಕಿ ತಳವಾರ, ಅಂಬಿಗರ ತಳವಾರ ಎಂದು ಗೊಂದಲ ಸೃಷ್ಠಿಸುತ್ತಿದ್ದಾರೆ. ವಾಸ್ತವದಲ್ಲಿ ಅಂಬಿಗರಿಗೂ ತಳವಾರರಿಗೂ ಯಾವುದೇ ರೀತಿ ಸಂಬಂಧವಿಲ್ಲ. ಅಂಬಿಗರ ಚೌಡಯ್ಯ ನಿಗಮದಲ್ಲೂ ತಳವಾರ ಪದ ಇಲ್ಲ. ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಕಳುಹಿಸಲಾದ ಪರ್ಯಾಯ ಪದಗಳ ಪಟ್ಟಿಯಲ್ಲೂ ತಳವಾರ ಇಲ್ಲ. ಹೀಗಾಗಿ ರಾಜ್ಯದ್ಯಂತ ಇರುವುದೊಂದೇ ತಳವಾರ ಅದು ಹಿಂದು ತಳವಾರ ಎಂದು ಸುಣಗಾರ ಸ್ಪಷ್ಟಪಡಿಸಿದರು.

ಸದ್ಯ ರಾಜ್ಯದಲ್ಲಿ 8 ಲಕ್ಷ ತಳವಾರ ಮತ್ತು 2 ಲಕ್ಷ ಪರಿವಾರ ಸಮುದಾಯದವರಿದ್ದಾರೆ. ಬಿಜೆಪಿ ಸರ್ಕಾರದ ಕ್ರಮದಿಂದ ಸಂತಸಗೊಂಡಿದ್ದ ಈ ಎಲ್ಲ ಸಮುದಾಯ ಇದೀಗ ಅಸಮಾಧಾನಗೊಂಡಿದ್ದಾರೆ ಎಂದರು.

ಸಂಸದ ಪ್ರತಾಪ ಸಿಂಹ ಹಾಗೂ ಸಚಿವ ಶ್ರೀರಾಮುಲು ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅದರಲ್ಲಿ ತಳವಾರ ಮತ್ತು ಪರಿವಾರ ಸಮುದಾಯದ ದಾಖಲೆ ಆಧರಿಸಿ ಜಾತಿ ಪ್ರಮಾಣ ಪತ್ರ ನೀಡಲು ತಿಳಿಸಿದ್ದಾರೆ. ಮಾತ್ರವಲ್ಲ, ರಾಜ್ಯದಲ್ಲಿರುವ ಎಲ್ಲ ತಳವಾರರಿಗೂ ಈ ಸರ್ಕಾರದ ಆದೇಶ ಅನ್ವಯವಾಗಲಿದೆ. ಅಧಿಕಾರಿಗಳು ಅನವಶ್ಯಕ ಗೊಂದಲ ಸೃಷ್ಠಿಸಿ ಸರ್ಕಾರಕ್ಕೆ ಕಪ್ಪು ಮಸಿ ಬಳಿಯಬಾರದೆಂದು ತಿಳಿಸಿದ್ದರೂ ಅಧಿಕಾರಿ ವರ್ಗ ಸ್ಪಂದಿಸುತ್ತಿಲ್ಲ ಎಂದರು.

ವಾಲ್ಮೀಕಿ ಪೀಠದ ಜಗದ್ಗುರುಗಳು ಸಹ ಈ ಬಗ್ಗೆ ಸ್ಪಷ್ಟಣೆ ನೀಡಿದ್ದು, ಅದನ್ನಾಧರಿಸಿ ತಳವಾರ ಸಮುದಾಯಕ್ಕೆ ಎಸ್‍ಟಿ ಪ್ರಮಾಣ ಪತ್ರ ನೀಡಬೇಕು ಎಂದು ಹೇಳಿದರು.

ಹೋರಾಟದ ಎಚ್ಚರಿಕೆ: ಸರ್ಕಾರದ ನಿರ್ದೇಶನಾನುಸಾರ ಈ ಮೊದಲು ಅಟಲ್‍ಜಿ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ ತಳವಾರ-ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲಾಗಿತ್ತು. ಇದೀಗ ಮತ್ತೆ ಪ್ರವರ್ಗ-1ಕ್ಕೆ ಸೇರ್ಪಡೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕೂಡಲೇ ರಾಜ್ಯ ಸರ್ಕಾರ ಅಧಿಕಾರಿ ವರ್ಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿರುವ 10 ಲಕ್ಷ ತಳವಾರ-ಪರಿವಾರ ಸಮುದಾಯದವರು ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಸುಣಗಾರ ಎಚ್ಚರಿಸಿದರು.

ಮುಖಂಡರಾದ ರವಿಗೌಡ ಪಾಟೀಲ ಧೂಳಖೇಡ, ಶಿವಾಜಿ ಮೆಟಗಾರ, ಸುರೇಶಗೌಡ ಪಾಟೀಲ, ಶರಣಪ್ಪ ಕಣಮೇಶ್ವರ, ಶಿವಾಜಿ ಮೆಟಗಾರ, ಧರ್ಮರಾಜ ವಾಲೀಕಾರ, ಸಾಹೇಬಗೌಡ ಬಿರಾದಾರ, ಅಂಬಣ್ಣ ನಾಟಿಕಾರ, ಭಿಮಣ್ಣ ಕವಲಗಿ, ಪ್ರಕಾಶ ಸೊನ್ನದ, ಮಲ್ಲು ತಳವಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.