ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಜನರ ಸಮಸ್ಯೆಗೆ ಸ್ಪಂದನೆ

ಇಂಡಿ ತಾಲ್ಲೂಕಿನಲ್ಲಿ ಜಿಲ್ಲಾಧಿಕಾರಿಯಿಂದ ಮೂಲಸೌಕರ್ಯಗಳ ಪರಿಶೀಲನೆ
Last Updated 11 ಮೇ 2022, 13:12 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ ಅವರು ಬುಧವಾರ ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡು, ಕುಡಿಯುವ ನೀರು ಪೂರೈಕೆ ಪರಿಸ್ಥಿತಿ ಮತ್ತು ಕೆರೆಗಳ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳ ಬಗ್ಗೆ ಖುದ್ದು ಅವಲೋಕನ ನಡೆಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಅವರೊಂದಿಗೆ ಇಂಡಿ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬಸನಾಳ ಗ್ರಾಮಕ್ಕೆ ಭೇಟಿ ನೀಡಿದ ಡಿಸಿ ಮತ್ತು ಸಿಇಒ ಅವರು,ಅಲ್ಲಿ ನೀರಿಗಾಗಿ ಸಾಲುಗಟ್ಟಿ ನಿಂತಿದ್ದ ಜನರ ಅಹವಾಲು ಆಲಿಸಿದರು.

ಪದೇಪದೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದಲ್ಲಿ ಶಾಶ್ವತ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಪಿಡಿಓ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತಿ ಪ್ರತಿನಿಧಿಗಳು ಸಹಕಾರ ನೀಡಲು ಮನವಿ ಮಾಡಿದರು.

ಬಳಿಕ ಜಿಲ್ಲಾಧಿಕಾರಿ ಅವರು ಹಲಗುಣಕಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಕಾಲೊನಿಗೆ ಭೇಟಿ ನೀಡಿ, ಅಲ್ಲಿನ ಕುಂದುಕೊರತೆಗಳ ಬಗ್ಗೆ ಪರಿಶೀಲಿಸಿದರು. ಕಾಲೊನಿಗೆ ಅಗತ್ಯವಿರುವ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಬಳಿಕ ಬಬಲಾದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ, ಗ್ರಾಮ ಒನ್ ಸೇವೆಗಳು ಗ್ರಾಮೀಣ ಜನರಿಗೆ ಸರಿಯಾಗಿ ತಲುಪುವ ನಿಟ್ಟಿನಲ್ಲಿ ಕೇಂದ್ರವು ಜನತೆಗೆ ಹತ್ತಿರವಾಗಬೇಕು ಎಂದು ಸಲಹೆ ಮಾಡಿದರು.

ನಂತರ ಜಿಲ್ಲಾಧಿಕಾರಿಗಳು ಜನೂನ ಗ್ರಾಮದ ಕೆರೆ ವೀಕ್ಷಣೆ ನಡೆಸಿದರು. ಇದೇ ವೇಳೆ ಹಲಸಂಗಿ ಕೆರೆಯಿಂದ ನೀರು ಲಿಫ್ಟ್ ಆಗುವುದರ ಬಗ್ಗೆ ಕೂಡ‌ ಪರಿವೀಕ್ಷಣೆ ನಡೆಸಿದರು.

ವಿಶೇಷ ಸಭೆ:

ಇಂಡಿ ತಾಲ್ಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿದರು.

ಇಂಡಿ ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ವರದಿಯಾಗಿದ್ದು,‌ ಇದಕ್ಕೆ ವಿಶೇಷ‌ ಗಮನ ಹರಿಸಬೇಕು ಎಂದು ತಹಶೀಲ್ದಾರ್‌, ತಾ.ಪಂ. ಇಓ ಮತ್ತು ಪಿಡಿಓ ಸೇರಿದಂತೆ ತಾಲ್ಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಿಇಓ ನಿರ್ದೇಶನ:

ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್ ಶಿಂಧೆ ಮಾತನಾಡಿ, ನಗರ ಸೇರಿದಂತೆ ಗ್ರಾಮೀಣ ಜನರಿಗೆ ನೀರು ಪೂರೈಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದನ್ನರಿತು ಅಧಿಕಾರಿಗಳು ಯಾವುದೇ ಸಬೂಬು ಹೇಳದೇ ಕಾರ್ಯಪ್ರವೃತ್ತರಾಗಿ ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಇಂಡಿ ತಾಲ್ಲೂಕು ತಹಶೀಲ್ದಾರ್‌ ಸಿ.ಎಸ್.ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT