ಗುರುವಾರ , ಆಗಸ್ಟ್ 18, 2022
25 °C
ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ರೌಡಿಗಳ ಪರೇಡ್

'ಮೂಳೆ ಮುರಿಬೇಕಾ ಹುಷಾರ್': ರೌಡಿ ಶೀಟರ್‌ಗಳಿಗೆ ಎಸ್‌ಪಿ ಖಡಕ್ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದೀಯಾ...? ಹಿಂದಿನ ಎಲ್ಲ ಚಟುವಟಿಕೆ ಬಿಟ್ಟಿದ್ದಿಯೋ, ಇಲ್ಲವೋ? ಯಾರಿಗಾದರೂ ತೊಂದರೆ ನೀಡಿದ್ದು ಗೊತ್ತಾದರೆ ನಿನ್ನ ಮೂಳೆ ಮುರಿಯಬೇಕಾಗುತ್ತದೆ ಹುಷಾರ್ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್‌ ಅವರು ರೌಡಿ ಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ರೌಡಿ ಪರೇಡ್ ನಡೆಸಿದರು. ಈ ಸಂದರ್ಭದಲ್ಲಿ ಅಶಿಸ್ತು ತೋರಿದ ಕೆಲ ರೌಡಿಗಳಿಗೆ ಕಪಾಳಕ್ಕೆ ಬಿಗಿದು ಎಚ್ಚರಿಕೆ ನೀಡಿದರು.

ನೀವು ಬಾಲ ಬಿಚ್ಚುವ ಹಾಗೇಯೇ ಇಲ್ಲ... ನೀವು ‌ಮುದುಡಿದ ಬೆಕ್ಕಿನ ರೀತಿಯಲ್ಲಿ ಇರಿ...ಬಾಲ ಬಿಚ್ಚಿದರೆ ಹುಷಾರ್...ಒಳ್ಳೆಯ ಜೀವನ‌ ನಡೆಸಿ ಯಾವುದೇ ಪ್ರಕರಣದಲ್ಲಿ ಹೆಸರು ಕೇಳಿ ಬರುವಂತಿಲ್ಲ...ಯಾರಿಗೂ ಹೆದರಿಸುವಂತಿಲ್ಲ... ಇನ್ನು ಮುಂದೆ ಒಂದೇ ಒಂದು ಕೇಸ್ ನಲ್ಲಿ ನಿಮ್ಮ ಹೆಸರು ತಳುಕು ಹಾಕಿಕೊಂಡರೆ ನೆಟ್ಟಗಿರುವುದಿಲ್ಲ ಎಂದರು‌.

ಅಕ್ರಮ ಶಸ್ತಾಸ್ತ್ರ ಮೊದಲಾದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಬೆವರಿಳಿಸಿದರು. ಎಲ್ಲಿಂದ ಗನ್ ತರುತ್ತೀಯಾ? ಈಗಲೂ ಈ ದಂಧೆ ಮುಂದುವರೆಸಿದ್ದೀಯಾ? ಈಗಲೂ ಗನ್ ಇಟ್ಟುಕೊಂಡಿದ್ದೀಯಾ? ಇದನ್ನೆಲ್ಲವನ್ನೂ ಬಿಟ್ಟು ಸರಿಯಾಗಿ ಇರು ಎಂದು ಎಚ್ಚರಿಕೆ ನೀಡಿದರು.

ಅಕ್ರಮ ದಂದೆಗಳನ್ನು ಬಿಟ್ಟು ಉತ್ತಮವಾಗಿ ಬದುಕಿ, ದುಡಿದು ತಿನ್ನಿ ಎಂದು ಕಿವಿಮಾತು ಹೇಳಿದರು.

ಎರಡು ಗಂಟೆಗಳಿಗೂ ಅಧಿಕ ಕಾಲ ರೌಡಿ ಶೀಟರ್‌ಗಳನ್ನು ವಿಚಾರಣೆ ನಡೆಸಿ, ಅವರ ಮೇಲೆ ದಾಖಲಾಗಿರುವ ಪ್ರಕರಣ, ಅವರ ಪ್ರಸ್ತುತ ಚಲನವಲನಗಳ ಬಗ್ಗೆ ಆಯಾ ಠಾಣೆಯ ಪೊಲೀಸ್ ಅಧಿಕಾರಿಗಳ ಮೂಲಕ ಮಾಹಿತಿ ಪಡೆದುಕೊಂಡರು.

ವಿಜಯಪುರ ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ವಿಜಯಪುರ ಗಾಂಧಿಚೌಕ, ಗೋಳಗುಮ್ಮಟ, ಆದರ್ಶನಗರ, ಜಲನಗರ, ಎಪಿಎಂಸಿ, ವಿಜಯಪುರ ಗ್ರಾಮೀಣ, ಬಬಲೇಶ್ವರ, ತಿಕೋಟಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 91 ಜನ‌ ರೌಡಿ ಶೀಟರ್‌ಗಳಿಗೆ ವಿಚಾರಣೆ ನಡೆಸಿ, ಎಚ್ಚರ ನೀಡಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಅರಸಿದ್ದಿ, ಅಧಿಕಾರಿಗಳಾದ ರವೀಂದ್ರ ನಾಯ್ಕೋಡಿ, ನಚಿಕೇತ ಜನಗೌಡರ, ರಮೇಶ ಅವಜಿ, ಸಿ.ಬಿ. ಬಾಗೇವಾಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು