ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಕನ್ನಡ ಸಾಹಿತ್ಯದ ಕಿರೀಟ: ಚಂದ್ರಶೇಖರ ಇಟಗಿ

ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಇಟಗಿ ಅಭಿಮತ
ಶಂಕರ ಈ.ಹೆಬ್ಬಾಳ
Published 5 ಫೆಬ್ರುವರಿ 2024, 6:49 IST
Last Updated 5 ಫೆಬ್ರುವರಿ 2024, 6:49 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ‘ಕನ್ನಡ ಸಾಹಿತ್ಯ ಸರಸ್ವತಿಗೆ ಬಸವಾದಿ ಶರಣರ ವಚನ ಸಾಹಿತ್ಯ ಕಿರೀಟವಿದ್ದಂತೆ. ವಚನಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ, ನೈತಿಕ ಮೊದಲಾದ ಚಿಂತನೆಗಳು ಮುಕ್ತವಾಗಿವೆ. ಸಮಾನತೆ, ಸಮ ಸಮಾಜದ ಕಲ್ಪನೆ, ವಿಶ್ವ ಬಂಧುತ್ವದ ಸಂದೇಶವಿದೆ’ ಎಂದು ತಾಲ್ಲೂಕು ಮೂರನೇ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಇಟಗಿ ಹೇಳಿದರು.

ಶರಣ ಸಾಹಿತ್ಯ ಪರಿಷತ್ತು, ಬಸವ ಮಹಾಮನೆ ಸಮಿತಿ, ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಏಪಿಎಂಸಿ ಆವರಣದಲ್ಲಿರುವ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಮೂರನೇ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಜಡವಸ್ತುಗಳ ಆರಾಧನೆ ಲಿಂಗನಿಷ್ಠೆಯನ್ನು ಉದಾಸೀನ ಮಾಡುತ್ತದೆ. ಶರಣರದ್ದು ಜಡ ಸಂಸ್ಕೃತಿಯಲ್ಲ. ಜಂಗಮ ಸಂಸ್ಕೃತಿಯಾಗಿದೆ’ ಎಂದ ಅವರು ‘ಗೃಹ ಪ್ರವೇಶ ಸಂದರ್ಭದಲ್ಲಿ ಹೋಮ ಹವನ, ಯಜ್ಞ ಯಾಗ ಮಾಡುವುದು ಶರಣ ಸಂಸ್ಕೃತಿಗೆ ಸಲ್ಲದವು. ಅತ್ಯಂತ ಸರಳವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶರಣರ ವಚನ ಪಠಣ ಪಾರಾಯಣಗೈದು ಪ್ರಸಾದ ವಿತರಿಸುವುದು ಶರಣ ಸಂಸ್ಕೃತಿ’ ಎಂದರು.

‘ಲಿಂಗಾಯತರೇ ಶರಣ ಸಂಸ್ಕೃತಿಯನ್ನು ಮರೆಯುತ್ತಿರುವುದು ಕಳವಳಕಾರಿ ವಿಷಯ. ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿಗಳಂತವು ಮರೆಯಾಗುತ್ತಿವೆ. ಅನ್ಯಾಚಾರ ಮಿಥ್ಯಾಚಾರಗಳು ಲಿಂಗಾಯತರಲ್ಲಿ ಮನೆ ಮಾಡುತ್ತಿವೆ. ಲಿಂಗಾಯತರು ಹೋಗದ ಆರಾಧಿಸದ ಗುಡಿ ಗುಂಡಾರಗಳಿಲ್ಲ. ಮುಳಿಗೇಳುವ ತೀರ್ಥಕ್ಷೇತ್ರಗಳಿಲ್ಲ. ಅನ್ಯದೈವಕ್ಕೇರಗಿ ಉರುಳು ಸೇವೆಗೈಯ್ಯುವುದು ಹರಕೆ ಸಲ್ಲಿಸುವುದು ಸಾಮಾನ್ಯವಾಗಿದೆ. ಲಿಂಗಾಯತರಲ್ಲಿ ಜಾಗೃತಿ ಮೂಡಿಸಿ ಶರಣ ಸಂಸ್ಕೃತಿಯನ್ನು ಬಿಂಬಿಸುವ ಮಠಾಧೀಶರೆ ಲಕ್ಷದೀಪೋತ್ಸವ, ಜಾತ್ರೆ, ತೇರಿನ ಸಂತೆಯಲ್ಲಿ ಮುಳುಗಿ ಹೋಗಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಲಿಂಗಾಯತ ಸಂಸ್ಕೃತಿ ಅಳಿವಿನ ಅಂಚಿಗೆ ಬಂದು ನಿಲ್ಲುವ ಕಾಲ ದೂರವಿಲ್ಲ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಮಾತನಾಡಿ, ‘ಜಾಗತೀಕರಣದ ಯುಗದಲ್ಲಿದ್ದು ಜಾತಿಯನ್ನು ಅಳಿಸುವ ಬದಲು ಪ್ರೋತ್ಸಾಹಿಸುವ ಕಾರ್ಯಾಗುತ್ತಿದೆ. ಇಂದಿಗೂ ಅಂತರಜಾತಿ ವಿವಾಹಕ್ಕೆ ವಿರೋಧವಿದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅಂತರಜಾತಿ ವಿವಾಹ ಮಾಡಿ ಸಮಾನತೆಯ ಸಂದೇಶ ಸಾರಿದ್ದರು’ ಎಂದರು.

ಬೆಳಿಗ್ಗೆ ರಾಷ್ಟ್ರಧ್ವಜಾರೋಹಣವನ್ನು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್.ಮದರಿ ನೆರವೇರಿಸಿದರು. ಪರಿಷತ್ತಿನ ಧ್ವಜಾರೋಹಣವನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ ಮಾಡಿದರು. ಬಸವೇಶ್ವರ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಇಟಗಿ ದಂಪತಿಯ ಮೆರವಣಿಗೆ ನಡೆಸಲಾಯಿತು.

ಮುದ್ದೇಬಿಹಾಳದ ಮೂರನೇ ತಾಲ್ಲೂಕು ಶರಣ ಸಾಹಿತ್ಯಸಮ್ಮೇಳನದಲ್ಲಿ ಭಾಗಿಯಾಗಿದ್ದ ಜನಸ್ತೋಮ.
ಮುದ್ದೇಬಿಹಾಳದ ಮೂರನೇ ತಾಲ್ಲೂಕು ಶರಣ ಸಾಹಿತ್ಯಸಮ್ಮೇಳನದಲ್ಲಿ ಭಾಗಿಯಾಗಿದ್ದ ಜನಸ್ತೋಮ.

ಶಸಾಪ ಜಿಲ್ಲಾ ಘಟಕದ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ಕೋಳೂರು ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಆರ್.ಜಿ.ಕಿತ್ತೂರ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಹಿಂದಿನ ಸಮ್ಮೇಳನಾಧ್ಯಕ್ಷ ಶಿವಣ್ಣ ಶರಣರು ಗುಡಗುಂಟಿ, ಮುಖಂಡ ಶಿವಶಂಕರಗೌಡ ಹಿರೇಗೌಡರ, ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಜೋದಾಬ ಬೀಳಗಿ ರಚಿಸಿದ ‘ಅರಿವೇ ಗುರು’ ಕವನ ಸಂಕಲನ, ನಿವೃತ್ತ ಶಿಕ್ಷಕ ಎಸ್.ಎ.ಬೇವಿನಗಿಡದ ರಚಿಸಿದ ‘ಮಹಾಸಂಗಮ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ಎಂ.ಬಿ.ಗುಡಗುಂಟಿ, ಸಿದ್ಧನಗೌಡ ಬಿಜ್ಜೂರ ನಿರೂಪಿಸಿದರು. ಎಂ.ಬಿ.ಪಾಟೀಲ್ ವಂದಿಸಿದರು.

ಮುದ್ದೇಬಿಹಾಳದಲ್ಲಿ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಇಟಗಿ ಅವರನ್ನು ಸನ್ಮಾನಿಸಲಾಯಿತು
ಮುದ್ದೇಬಿಹಾಳದಲ್ಲಿ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಇಟಗಿ ಅವರನ್ನು ಸನ್ಮಾನಿಸಲಾಯಿತು
ಕೂಡಲಸಂಗಮದಲ್ಲಿ ವಚನ ವಿವಿ ಸ್ಥಾಪಿಸಿ
ಭಾರತ ಬಸವ ಭಾರತವಾಗಲೆಂದು ಆಶಿಸಿದ ಸಂಗೀತ ನಿರ್ದೇಶಕ ಹಂಸಲೇಖ ಅವರ ನುಡಿಯನ್ನು ಬೆಂಬಲಿಸಬೇಕು. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಕರ್ನಾಟಕ ಸರ್ಕಾರಕ್ಕೆ ಅಭಿನಂದಿಸುವೆ. ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸಿದಂತೆ ಕೂಡಲಸಂಗಮದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಇಟಗಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT