ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಕಾಣದ ಚಿತ್ರ ಮಂದಿರ

ಕೋವಿಡ್‌ ನಿಯಮಾವಳಿ ಪಾಲನೆ ಕಷ್ಟ; ಅಂಜಿದ ಮಾಲೀಕರು
Last Updated 14 ಅಕ್ಟೋಬರ್ 2020, 17:56 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಹಿನ್ನೆಲೆಯಲ್ಲಿ ಏಳು ತಿಂಗಳಿಂದ ಬಾಗಲು ಮುಚ್ಚಿರುವ ಸಿನಿಮಾ ಮಂದಿರಗಳು ಗುರುವಾರದಿಂದ ನಗರ ಸೇರಿದಂತೆ ಜಿಲ್ಲೆಯಲ್ಲಿ ಬಾಗಿಲು ತೆರೆದು, ಚಿತ್ರ ಪ್ರದರ್ಶನ ಮಾಡುತ್ತವೆ ಎಂಬ ಚಿತ್ರ ರಸಿಕರ ಕನಸು ಹುಸಿಯಾಗಿದೆ.

ಹೌದು, ಕೇಂದ್ರ ಸರ್ಕಾರದ ಅನ್‌ಲಾಕ್‌ ಐದರ ಅನ್ವಯ ಅ.15ರಿಂದ ಚಿತ್ರ ಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿದ್ದರೂ ಸಹ ಸದ್ಯಕ್ಕೆ ಸಿನಿಮಾ ಪ್ರದರ್ಶನ ಆರಂಭಿಸದಿರಲು ಜಿಲ್ಲೆಯ ಸಿನಿಮಾ ಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ.

‘ಕೊರೊನಾ ಅಬ್ಬರಿಸುತ್ತಿರುವ ಈ ಸಂದರ್ಭದಲ್ಲಿ ಪ್ರೇಕ್ಷಕರು ಈ ಹಿಂದಿನಂತೆ ನಿರ್ಭೀತಿಯಿಂದ ಸಿನಿಮಾ ಮಂದಿರಗಳತ್ತ ಮುಖ ಮಾಡುವುದು ಅನುಮಾನವಾಗಿರುವುದರಿಂದ ಸದ್ಯಕ್ಕೆ ಚಿತ್ರ ಪ್ರದರ್ಶನ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ’ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಉಪಾಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಬಾಳು ಜೋಶಿ(ಎಂ.ಬಿ.ಜೋಶಿ) ‘ಪ್ರಜಾವಾಣಿ’ಗೆ ಖಚಿತ ಪಡಿಸಿದರು.

ಈಗಾಗಲೇ ಕೊರೊನಾ ಲಾಕ್‌ಡೌನ್‌ ಪರಿಣಾಮ ಸಾಕಷ್ಟು ನಷ್ಟ ಅನುಭವಿಸಿದ್ದು, ಚಿತ್ರ ಮಂದಿರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಕೊಡಲೂ ಆಗದೆ ಸಮಸ್ಯೆ ಅನುಭವಿಸುತ್ತಿದ್ದು, ಇಂತಹ ಹೊತ್ತಿನಲ್ಲಿ ಚಿತ್ರ ಮಂದಿರ ತೆರೆದರೆ ಪ್ರೇಕ್ಷಕರೂ ಬಾರದೆ ಮತ್ತಷ್ಟು ನಷ್ಟ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದರು.

ಆಸ್ಪತ್ರೆಯಂತಾಗುತ್ತವೆ:ಕೋವಿಡ್‌ ನಿಯಮಾವಳಿಗಳನ್ನು ಕಡ್ಡಾಯ ಮಾಡಿರುವುದರಿಂದ ಸಿನಿಮಾ ಮಂದಿರಗಳಲ್ಲಿ ಅವುಗಳ ಪಾಲನೆ ಮಾಡುವುದು ಕಷ್ಟಕರವಾಗುತ್ತದೆ. ಚಿತ್ರ ಮಂದಿರದ ಪ್ರತಿಯೊಬ್ಬ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಬೇಕು, ಪ್ರೇಕ್ಷಕರ ಮೊಬೈಲ್‌ ಸಂಖ್ಯೆ, ವಿಳಾಸ ಪಡೆಯಬೇಕು, ಪ್ರತಿ ಪ್ರೇಕ್ಷಕರಿಗೂ ಸ್ಯಾನಿಟೈಜ್‌ ಮಾಡಬೇಕು, ಮಾಸ್ಕ್‌ ಕಡ್ಡಾಯ ಮಾಡಬೇಕು, ಆನ್‌ಲೈನ್‌ ಟಿಕೆಟ್‌ ನೀಡಬೇಕು, ಸೀಟುಗಳ ನಡುವೆ ಅಂತರ ಇರಬೇಕು, ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂಬ ನಿಯಮಗಳನ್ನು ಪಾಲಿಸಿದರೆ ಇದು ಸಿನಿಮಾ ಮಂದಿರವಲ್ಲ ಆಸ್ಪತ್ರೆಯಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಒಂದು ವೇಳೆ ಪ್ರೇಕ್ಷಕರಲ್ಲಿ ಯಾರಿಗಾದರೂ ಕೋವಿಡ್‌ ಪಾಸಿಟಿವ್‌ ಬಂದರೆ, ಅವರು ಸಿನಿಮಾ ಮಂದಿರದಲ್ಲಿ ಬಂದಿರಬಹುದು ಎಂದು ಹೇಳಿದರೆ, ಅಂದು ಸಿನಿಮಾ ನೋಡಿದವರೆಲ್ಲರೂ ಕ್ವಾರಂಟೈನ್‌ ಆಗಬೇಕು. ಅಲ್ಲದೇ, ಸಿನಿಮಾ ಮಂದಿರಗಳ ಸಿಬ್ಬಂದಿಯೂ ಕ್ವಾರಂಟೈನ್‌ ಆಗಬೇಕಾಗುತ್ತದೆ. ಇದು ಸಿನಿಮಾ ಮಂದರಗಳ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದರು.

ಪ್ರತಿ ಷೋ ಮುಗಿದ ಬಳಿಕ ಸ್ಯಾನಿಟೈಜ್‌ ಮಾಡಬೇಕು ಎಂಬ ನಿಯಮಾವಳಿ ಇದೆ. ಈ ಪ್ರಕಾರ ಮಾಡಿದರೆ ಖರ್ಚು ಹೆಚ್ಚಾಗಲಿದೆ. ಸಿನಿಮಾ ಮಂದಿರ ನಡೆಸುವುದು ಕಷ್ಟವಾಗುತ್ತದೆ ಎಂದು ಹೇಳಿದರು.

ಶುಲ್ಕ ಹೆಚ್ಚಳ:ಸಿನಿಮಾ ಮಂದಿರಗಳ ಮೂರು ವರ್ಷಗಳ ಪರವಾನಗಿ ನವೀಕರಣ ಶುಲ್ಕವನ್ನು ₹ 5 ಸಾವಿರದಿಂದ ₹1.25 ಲಕ್ಷಕ್ಕೆ ಏರಿಸಲಾಗಿದೆ. ಈಗಾಗಲೇ ಸಿನಿಮಾ ಮಂದಿರಗಳು ನಷ್ಟದಲ್ಲಿವೆ. ಈ ಶುಲ್ಕ ಏರಿಕೆಯಾಗಿರುವುದರಿಂದ ಮತ್ತಷ್ಟು ಕಷ್ಟವಾಗಿದೆ ಎಂದು ಹೇಳಿದರು.

ಸಿನಿಮಾ ಮಂದಿರಗಳಿಗೆವಿದ್ಯುತ್‌ ಶುಲ್ಕವನ್ನು ವಾಣಿಜ್ಯ ದರ ನಿಗದಿ ಪಡಿಸಲಾಗಿದೆ. ಇದು ಹೊರೆಯಾಗಿದ್ದು, ಕೈಗಾರಿಕೆ ಎಂದು ಪರಿಗಣಿಸಿ, ಹೊರೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಲದೇ, ಸದ್ಯ ಯಾವುದೇ ಹೊಸ ಚಿತ್ರಗಳು ತೆರೆ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಿನಿಮಾ ಮಂದಿರ ಬಾಗಿಲು ತೆರೆದರೆ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಜಿಲ್ಲೆಯಲ್ಲಿವೆ 16ಕ್ಕೂ ಅಧಿಕ ಚಿತ್ರ ಮಂದಿರ

ವಿಜಯಪುರ ನಗರದಲ್ಲಿ ಜಯಶ್ರೀ, ಲಕ್ಷ್ಮಿ, ಆಲಂಕಾರ್‌, ಡ್ರೀಮ್‌ ಲ್ಯಾಂಡ್‌, ಅಪ್ಸರಾ, ಅಮೀರಾ ಸೇರಿದಂತೆ ಆರು, ಇಂಡಿಯಲ್ಲಿ ಎರಡು, ಸಿಂದಗಿ ಮೂರು, ಆಲಮೇಲ, ಮುದ್ದೇಬಿಹಾಳ, ತಾಳಿಕೋಟೆ, ಚಡಚಣ ಮತ್ತು ಹೂವಿನ ಹಿಪ್ಪರಗಿಯಲ್ಲಿ ತಲಾ ಒಂದರಂತೆ ಜಿಲ್ಲೆಯ 16ಕ್ಕೂ ಅಧಿಕ ಚಿತ್ರ ಮಂದಿರಗಳಿದ್ದು, 100ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್‌ ಲಾಕ್‌ಡೌನ್‌ನಿಂದ ಬಾಗಿಲು ಮುಚ್ಚಿರುವುದರಿಂದ ಸಿಬ್ಬಂದಿ ಕೆಲಸ ಕಳೆದುಕೊಂಡು ಸಮಸ್ಯೆ ಎದುರಿಸುತ್ತಿದ್ದಾರೆ.

****

ಕೋವಿಡ್‌ ಹಾವಳಿ ಹೆಚ್ಚಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿಮುಂದಿನ ಜನವರಿ ವರೆಗೆ ಸಿನಿಮಾ ಮಂದಿರಗಳನ್ನು ಜಿಲ್ಲೆಯಲ್ಲಿ ತೆರೆಯದಿರಲು ನಿರ್ಧರಿಸಲಾಗಿದೆ

- ಬಾಳು ಜೋಶಿ,ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರದರ್ಶನಕರ ಮಹಾಮಂಡಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT