ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಸೋಲುವ ಭಯದಲ್ಲಿ ಸೀರೆ ಹಂಚಿಕೆ: ವಿಜುಗೌಡ

ಬಬಲೇಶ್ವರದಲ್ಲಿ ‘ಪ್ರಜಾಧ್ವನಿ’ ಸಮಾವೇಶ ಹಿನ್ನೆಲೆ ಸೀರೆ, ಮೊಬೈಲ್‌ ಹಂಚಿಕೆ
Last Updated 20 ಫೆಬ್ರುವರಿ 2023, 16:00 IST
ಅಕ್ಷರ ಗಾತ್ರ

ವಿಜಯಪುರ: ಬಬಲೇಶ್ವರ ಕ್ಷೇತ್ರದ ಹಾಲಿ ಶಾಸಕರು ಸೋಲುವ ಭೀತಿಯಲ್ಲಿ ಮತದಾರರಿಗೆ ಸೀರೆ, ಮೊಬೈಲ್‌ ಹಂಚುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಬಲೇಶ್ವರದಲ್ಲಿ ನಡೆಯಲಿರುವ ಪ್ರಜಾಧ್ವನಿ ಸಮಾವೇಶಕ್ಕೆ ಜನ ಸೇರುವುದಿಲ್ಲ ಎಂಬುದು ಕಾಂಗ್ರೆಸ್‌ನವರಿಗೆ ಮನವರಿಕೆಯಾಗಿದೆ. ಹೀಗಾಗಿ ಜನರಿಗೆ ಆಮಿಷ ಒಡ್ಡಿ ಸಮಾವೇಶಕ್ಕೆ ಆಹ್ವಾನಿಸತೊಡಗಿದ್ದಾರೆ ಎಂದರು.

ಸೀರೆ, ಮೊಬೈಲ್‌, ಹಣ ಸೇರಿದಂತೆ ಎಷ್ಟೇ ಆಸೆ, ಆಮಿಷ ಒಡ್ಡಿದರೂ, ತಿಮ್ಮರಲಾಗ ಹೊಡೆದರೂ ಕ್ಷೇತ್ರದ ಜನ ಒಳಗಾಗುವುದಿಲ್ಲ. ಈ ಬಾರಿ ಮತದಾರರು ನನ್ನ ಮತ್ತು ಬಿಜೆಪಿ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕ್ಷೇತ್ರದ ಮತದಾರರು ಈ ಬಾರಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದರು.

ಕಳೆದ ಐದು ವರ್ಷದಲ್ಲಿ ‘ಆಧುನಿಕ ಭಗೀರಥ’ ಕ್ಷೇತ್ರದ ಗ್ರಾಮಗಳಿಗೆ ಒಂದು ದಿನವೂ ಬಂದಿಲ್ಲ. ಕೋವಿಡ್‌ ಸಂದರ್ಭದಲ್ಲೂ ಜನರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ, ಕ್ಷೇತ್ರದಲ್ಲಿ ಯಾವೊಂದು ರಸ್ತೆಯೂ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ದೂರಿದರು.

ಕ್ಷೇತ್ರದಲ್ಲಿ 15 ವರ್ಷಗಳಿಂದ ಅಧಿಕಾರ ಇಲ್ಲದೇ ಇದ್ದರೂ ಜನರಿಗೆ ಕೈಲಾದ ಸೇವೆ ಸಲ್ಲಿಸಿದ್ದೇನೆ. ಬೀಜ ನಿಗಮದ ಅಧ್ಯಕ್ಷನಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದರು.

ಕ್ಷೇತ್ರದಲ್ಲಿ ಅದು ಮಾಡಿದ್ದೇನೆ, ಇದು ಮಾಡಿದ್ದೇನೆ ಎನ್ನುವವರು ಸೀರೆ, ಮೊಬೈಲ್‌ ಹಂಚುವಂತ ಸಣ್ಣ ಕೆಲಸ ಏಕೆ ಮಾಡುತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ಜನರು ಸಮಾವೇಶಕ್ಕೆ ಬರುವಂತೆ ಮಾಡಬೇಕು ಎಂದು ಹೇಳಿದರು.

₹ 9 ಸಾವಿರ ಮೊತ್ತದ ಮನೆ ಬಳಕೆ ಹಿಟ್ಟಿನಗಿರಣಿಯನ್ನು ಮತದಾರರಿಗೆ ತಮ್ಮ ಹಿಂಬಾಲಕರ ಮೂಲಕ ₹ 12 ಸಾವಿರಕ್ಕೆ ಮಾರಿಕೊಳ್ಳುತ್ತಿದ್ದಾರೆ. ಅಲ್ಲದೇ, ರಿಯಾಯಿತಿ ದರದ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣೆ ಸಂದರ್ಭದಲ್ಲಿ ನಮ್ಮ ರಾಜ್ಯ, ರಾಷ್ಟ್ರ ನಾಯಕರು ಬಬಲೇಶ್ವರಕ್ಕೆ ಬರಲಿದ್ದಾರೆ. ಸಮಾವೇಶಕ್ಕೆ ಬರುವಂತೆ ಜನರಿಗೆ ನಾವು ಯಾವುದೇ ಆಸೆ, ಆಮಿಷ ಒಡ್ಡುವುದಿಲ್ಲ, ಹಾಗೆಯೇ ಬರಲಿದ್ದಾರೆ ಎಂದರು.

ಟಿಕೆಟ್‌ ಖಚಿತ: ಈಗಾಗಲೇ ಪಕ್ಷದಿಂದ ಕ್ಷೇತ್ರದಲ್ಲಿ ಸಮೀಕ್ಷೆ ನಡೆದಿದೆ. ಶೀಘ್ರದಲ್ಲೇ ಟಿಕೆಟ್ ಘೋಷಣೆ ಮಾಡಲಿದ್ದಾರೆ. ನನಗೆ ಟಿಕೆಟ್‌ ಸಿಗುವ ನಿರೀಕ್ಷೆ ಇದೆ. ಕ್ಷೇತ್ರದ ಮತದಾರರು ಈ ಬಾರಿ ಬಿಜೆಪಿಗೆ ನೂರಕ್ಕೆ ನೂರು ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

***

ಯಾವುದೇ ಆಸೆ, ಆಮಿಷ ತೋರದೇ ಈ ಬಾರಿಯ ಚುನಾವಣೆಯಲ್ಲಿ ತಮ್ಮ ತಾಕತ್ತು ತೋರಿಸಲಿ, ನೀರಾವರಿ ಹರಿಕಾರ ಎಂಬುದು ಸಾಬೀತು ಪಡಿಸಲಿ.
–ವಿಜುಗೌಡ ಪಾಟೀಲ, ಅಧ್ಯಕ್ಷ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT