ಮುದ್ದೇಬಿಹಾಳ: ಗ್ರಾಮೀಣ ಭಾಗದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಸ್ವಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶಕ್ಕೆ ತಾಲ್ಲೂಕು ಪಂಚಾಯ್ತಿಯಿಂದ ಪಟ್ಟಣದಲ್ಲಿ ನಿರ್ಮಿಸಿರುವ ಮಳಿಗೆಗಳು ಅಕ್ರಮ ಚಟುವಟಿಕೆಗಳಿಗೆ ತಾಣವಾಗಿ ಪರಿವರ್ತನೆಯಾಗಿವೆ.
ಪಟ್ಟಣದ ಲಕ್ಷ್ಮಿ ಚಿತ್ರಮಂದಿರದ ಎದುರಿಗೆ ಮುದ್ದೇಬಿಹಾಳದಿಂದ ತಂಗಡಗಿಗೆ ಹೋಗುವ ರಸ್ತೆಯ ಬಲಭಾಗದ ಒಳಾಂಗಣದಲ್ಲಿ ಕಳೆದ ಹದಿಮೂರು ವರ್ಷಗಳಿಂದ ಮಳಿಗೆಗಳು ಹರಾಜು ಆಗದೇ ಪಾಳುಬಿದ್ದಿದ್ದು, ಕುಡುಕರು, ಪುಂಡಪೋಕರಿಗಳಿಗೆ ಅಕ್ರಮ ಚಟುವಟಿಕೆ ನಡೆಯಲು ಹೇಳಿ ಮಾಡಿಸಿದ ತಾಣವಾಗಿ ಮಾರ್ಪಟ್ಟಿದೆ.
ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಯೋಜನೆಯಡಿ 2010-11ನೇ ಸಾಲಿನಲ್ಲಿ ನಿರ್ಮಿಸಲಾಗಿರುವ 16 ಮಳಿಗೆಗಳನ್ನು ಹರಾಜು ಮಾಡದೇ ಹಾಗೆ ಬಿಡಲಾಗಿದೆ. ತಾಲ್ಲೂಕು ಪಂಚಾಯ್ತಿ ಈ ಮಳಿಗೆಗಳ ಸ್ಥಿತಿಗತಿಯ ಬಗ್ಗೆ ಕಡತ ತೆಗೆದು ನೋಡುವ ಗೋಜಿಗೂ ಹೋಗಿಲ್ಲ. ಸರ್ಕಾರದ ಅನುದಾನ ವ್ಯರ್ಥವಾಗಿ ಪೋಲಾಗುತ್ತಿದೆ.
ಒಂದು ಸಂಘಕ್ಕೆ ಅಥವಾ ಒಕ್ಕೂಟಕ್ಕೆ ಒಂದು ಮಳಿಗೆಯನ್ನು ಹಂಚಿಕೆ ಮಾಡಲು ಪಟ್ಟಣದ ವ್ಯಾಪ್ತಿಯಲ್ಲಿ 16 ಮಳಿಗೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಮಳಿಗೆಗೆ ಕೇವಲ ₹1,413 ಬಾಡಿಗೆ ನಿಗದಿಪಡಿಸಲಾಗಿತ್ತು.
2018ರಲ್ಲಿ ನಾನು ಹಾಕಿದ್ದ ಮಾಹಿತಿ ಹಕ್ಕು ಅರ್ಜಿಗೆ ಪ್ರತಿಕ್ರಿಯಿಸಿದ್ದ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು, ಮಳಿಗೆಗಳ ಕುರಿತು ಮಾಹಿತಿ ಇಲ್ಲ ಎಂದು ತಿಳಿಸಿದ್ದರು. ಮಳಿಗೆಗಳ ಕುರಿತು ಕಚೇರಿಯಲ್ಲಿ ಮಾಹಿತಿಯೇ ಇಲ್ಲವೇ? ಮಳಿಗೆ ಹರಾಜು ಮಾಡದೇ ಅಧಿಕಾರಿಗಳು ಪಂಚಾಯತ್ ರಾಜ್ ಕಾಯಿದೆ ಉಲ್ಲಂಘನೆ ಮಾಡಿದ್ದಾರೆ. ಇಲಾಖೆ ತನಿಖೆ ನಡೆಸಿ ತಪ್ಪು ಮಾಡಿದ ಅಧಿಕಾರಿಗಳಿಂದ ಹಣ ವಸೂಲಿ ಮಾಡಿ ಮಳಿಗೆಗಳ ಹರಾಜಿಗೆ ಕ್ರಮ ಜರುಗಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ಟಿ.ಎಂ. ಕರಜಗಿ ಆಗ್ರಹಿಸಿದರು.
ಹರಾಜು ಪ್ರಕ್ರಿಯೆ
ಶೀಘ್ರ ಮಳಿಗೆ ಹರಾಜು ಕುರಿತು ತಾಲ್ಲೂಕು ಪಂಚಾಯ್ತಿಯಿಂದ 2020ರಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷರು ಸದಸ್ಯರ ನಿರ್ಣಯದ ಮೇರೆಗೆ ಮಳಿಗೆಗಳ ಬಾಡಿಗೆ ಹೆಚ್ಚಿಸಿ ಹರಾಜು ಪ್ರಕ್ರಿಯೆ ನಡೆಸಲು ಉದ್ದೇಶಿಸಿದ್ದರಿಂದ ಹರಾಜು ಪ್ರಕ್ರಿಯೆ ಮುಂದೂಡಲಾಗಿತ್ತು. ನಂತರ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದಿದ್ದರಿಂದ ಮಳಿಗೆಗಳ ಹರಾಜು ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಸಣ್ಣಪುಟ್ಟ ರಿಪೇರಿ ಮಾಡಿಸಿ ಹರಾಜು ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಯುವರಾಜ ಹನಗಂಡಿ ತಾ.ಪಂ. ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.