ಗುರುವಾರ , ಜೂನ್ 17, 2021
21 °C
₹5 ಸಾವಿರ ಮೊತ್ತದ ಉಚಿತ ಸ್ಮಾರ್ಟ್‌ ಕಾರ್ಡ್‌ ವಿತರಣೆ

ಆಶಾ, ಆರೋಗ್ಯ ಸಿಬ್ಬಂದಿಗೆ ಯತ್ನಾಳ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರ ಪ್ರದೇಶದ ಆಶಾ ಕಾರ್ಯಕರ್ತೆಯರಿಗೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ₹ 5 ಸಾವಿರ ಮೊತ್ತದ ಸ್ಮಾರ್ಟ್‌ಕಾರ್ಡ್‌ ಅನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿತರಿಸಿದರು.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಮಾರ್ಟ್‌ ಕಾರ್ಡ್‌ ವಿತರಿಸಿ ಮಾತನಾಡಿದ ಅವರು, ಕೋವಿಡ್‌ ಎರಡನೇ ಅಲೆಯಲ್ಲಿ ಸಾಕಷ್ಟು ಜನರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳಿಗೆ ಪ್ರಾಣವಾಯು, ವೆಂಟಿಲೇಟರ್ ಮೇಲೆ ಅವಲಂಬಿತರಾಗಿ ಹೋರಾಡುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸಹ ಜೀವದ ಭಯ ತೊರೆದು ನಗರ ಪ್ರದೇಶದಲ್ಲಿ ಕೋವಿಡ್ ಲಸಿಕೆಯನ್ನು ಹಾಕುತ್ತಿರುವ ಆಶಾ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಉತ್ತೇಜನ ನೀಡುವ ಸಲುವಾಗಿ ಸ್ಮಾರ್ಟ್‌ಕಾರ್ಡ್‌ ಅನ್ನು ಸ್ವಂತ ಖರ್ಚಿನಿಂದ ನೀಡುತ್ತಿರುವುದಾಗಿ ಹೇಳಿದರು.

ನಗರ ವ್ಯಾಪ್ತಿಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ 53 ಜನ ಆಶಾ ಕಾರ್ಯರ್ತೆಯರು ಹಾಗೂ 92 ಜನ ವಿಜಯಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನರ್ಸಿಂಗ್ ಸಿಬ್ಬಂದಿ ಹಾಗೂ ವಾಹನ ಚಾಲಕ ಸಿಬ್ಬಂದಿಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಸ್ಮಾರ್ಟ್‌ಕಾರ್ಡ್‌ ನೀಡುತ್ತಿರುವುದಾಗಿ ಹೇಳಿದರು.

ಈ ಸ್ಮಾರ್ಟ್‌ಕಾರ್ಡ್‌ನಿಂದ ₹ 5 ಸಾವಿರ ಮೊತ್ತದ ವರೆಗಿನ ತಮಗೆ ಯಾವುದೇ ಬೇಕೆನಿಸಿದ ವಸ್ತುಗಳನ್ನು ಶ್ರೀ ಸಿದ್ದೇಶ್ವರ ಸೂಪರ ಬಜಾರ್ ಅಥವಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಸ್ ಹೈಪರ್ ಮಾರ್ಟನಿಂದ ಖರೀದಿಸಬಹುದಾಗಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯ ಲಕ್ಷ್ಮಣ ಜಾಧವ್, ಆರೋಗ್ಯ ಅಧಿಕಾರಿ ಡಾ. ಬಾಲಕೃಷ್ಣ, ಡಾ. ಕೇಸರಸಿಂಗ್ ಗುಂಡಬಾವಡಿ, ಡಾ.ಜನ್ನತ್, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ್, ಮುಖಂಡರಾದ ಚಂದ್ರು ಚೌಧರಿ, ಬಸವರಾಜ ಗೊಳಸಂಗಿ, ಶಂಕರ್ ಹೂಗಾರ, ರಾಜು ಕುರಿಯವರ, ಶ್ರೀಕಾಂತ ಸಂಗೋಗಿ, ಪಾಂಡುಸಾಹುಕಾರ ದೊಡ್ಡಮನಿ, ಶಿವಾನಂದ ಹಿರೇಮಠ, ಸುಭಾಸ ಕನ್ನೊಳ್ಳಿ ಉಪಸ್ಥಿತರಿದ್ದರು.

ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ:

ನಗರದ ಸಾಯಿಪಾರ್ಕ್ ಮಹಾಲಕ್ಷ್ಮೀ ದೇವಸ್ಥಾನ ಆವರಣ, ಇಬ್ರಾಹಿಂ ರೋಜಾ ರಸ್ತೆಯ ಶಾಸ್ತ್ರಿನಗರ ಹೂಗಾರ ಮಡ್ಡಿಯ ಎಂ.ಪಿ.ಹಾಲ್‍, ಶಿವಾಜಿ ಪೇಠ, ಡೋಬ್ಲೆ ಗಲ್ಲಿ ಮರಾಠಾ ಸಮಾಜ ಮಂದಿರ, ಜಾಡರ ಓಣಿ ಶ್ರೀ ಮಲ್ಲಿಕಾರ್ಜುನ ಗುಡಿ ಆವರಣ, ರಾಷ್ಟ್ರೀಯ ಹೆದ್ದಾರಿಯ ಟಾಟಾ ಶೋರೂಮ್ ಹಿಂದಿನ ಸರಸ್ವತಿ ನಗರ ಹಾಗೂ ಶಿಖಾರಖಾನೆಯ ಶ್ರೀ ಸಿದ್ಧರಾಮೇಶ್ವರ ಗುಡಿ ಆವರಣದಲ್ಲಿ ಲಸಿಕಾ ಕೇಂದ್ರಗಳಿಗೆ ಶಾಸಕ  ಯತ್ನಾಳ ಭೇಟಿ ನೀಡಿ, ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು