ಬುಧವಾರ, ಮೇ 12, 2021
27 °C
ವಿಜಯಪುರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ

ಮಾರ್ಗಸೂಚಿ ಪಾಲಿಸದಿದ್ದರೆ ಕಠಿಣ ಕ್ರಮ: ಡಿಸಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ದಿನೇದಿನೇ ಹೆಚ್ಚಾಗುತ್ತಿರುವುದರಿಂದ ಜನರು ಒಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ  ಸೇರದಂತೆ ಮುಂಜಾಗೃತಾ ಕ್ರಮಕೈಗೊಳ್ಳಬೇಕು. ಕೋವಿಡ್‌ ನಿಯಂತ್ರಣ ನಿಯಮ ಪಾಲಿಸದವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಸಹ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಎಚ್ಚರಿಕೆ ನೀಡಿದರು.  

ಜಿಲ್ಲಾ ಪಂಚಾಯ್ತಿ ಕಾರ್ಯಾಲಯದ ಸಭಾಂಗಣದಲ್ಲಿಂದು ವಿವಿಧ ಕಲ್ಯಾಣ ಮಂಟಪ, ಸಾರ್ವಜನಿಕ ಗ್ರಂಥಾಲಯ ಅಧಿಕಾರಿಗಳು ಮತ್ತು ವಿವಿಧ ವ್ಯಾಪಾರಸ್ಥರೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲ ವ್ಯಾಪಾರಸ್ಥರು ತಪ್ಪದೇ ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸಬೇಕು. ಪ್ರತಿ ಅಂಗಡಿ ಮುಂಗಟ್ಟುಗಳಲ್ಲಿ, ಕಲ್ಯಾಣ ಮಂಟಪಗಳಲ್ಲಿ ಹಾಗೂ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಪರಸ್ಪರ ಅಂತರವನ್ನು ತಪ್ಪದೇ ಪಾಲಿಸಬೇಕು. ಸ್ಯಾನಿಟೈಜರ್, ಹ್ಯಾಂಡ್‍ಗ್ಲೌಸ್ ಬಳಸುವುದು ಸೇರಿದಂತೆ ನಿಗದಿತ ನಿಮಯಗಳನ್ನು ತಪ್ಪದೇ ಪಾಲಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜನರ ಜೀವದ ಹಿತ ದೃಷ್ಟಿಯಿಂದ ಈ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಕಲ್ಯಾಣ ಮಂಟಪಗಳಲ್ಲಿ ಮದುವೆ ನಡೆಯುವ ಬಗ್ಗೆ ತಪ್ಪದೇ ಮಹಾನಗರ ಪಾಲಿಕೆಗೆ ಮಾಹಿತಿ ಒದಗಿಸಬೇಕು. ಕಲ್ಯಾಣ ಮಂಟಪದೊಳಗೆ ನಿಯಮಾವಳಿಯಂತೆ 200 ಕ್ಕೂ ಹೆಚ್ಚು ಜನರು ಸೇರುವಂತಿಲ್ಲ ಎಂದರು.

ತೆರೆದ ಸ್ಥಳಗಳಲ್ಲಿ 500 ಜನರಿಗೆ ಅವಕಾಶವಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಜರ್ ಬಳಸುವುದು, ಮುಖ್ಯ ದ್ವಾರದಲ್ಲಿ ಕೋವಿಡ್ ನಿಯಮಗಳ ಬಗ್ಗೆ ತಪ್ಪದೇ ಮಾಹಿತಿ ಅಳವಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಕಾನೂನಿನ ಪ್ರಕಾರ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೋವಿಡ್ ನಿಯಂತ್ರಣ ನಿಯಮ ಪಾಲನೆಯಲ್ಲಿ ಉಲ್ಲಂಘನೆ ಕಂಡುಬಂದಲ್ಲಿ ಪ್ರಥಮ ಬಾರಿಗೆ ಎಚ್ಚರಿಕೆ, ಎರಡನೇ ಬಾರಿಗೆ ದಂಡ ಹಾಗೂ ಮೂರನೇ ಬಾರಿಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ತಿಳಿಸಿದರು.

ನಿಯಮ ಪಾಲಿನೆ ಜೊತೆಗೆ ಜೀವನೋಪಾಯಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಅಗತ್ಯ ವಸ್ತುಗಳ ಮಾರಾಟದ ಸಂದರ್ಭದಲ್ಲಿ ಯೋಜನಾಬದ್ಧವಾಗಿ ವಸ್ತುಗಳ ಮಾರಾಟ, ಅವಶ್ಯಕ ಮಾರ್ಗಸೂಚಿಗಳ ಪಾಲನೆ ಸಾಧ್ಯವಿದ್ದಲ್ಲಿ ಗ್ರಾಹಕರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುವ ಬಗ್ಗೆ ಚಿಂತನೆ ಸಹ ನಡೆಸಬೇಕು ಎಂದರು.

ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆ, ಸಮಾರಂಭ ಸೇರಿದಂತೆ ಇನ್ನೀತರ ಕಡೆಗಳಲ್ಲಿ ಸೂಕ್ತ ನಿಗಾ ಇಡಲು ನಗರ ಸ್ಥಳೀಯ ವ್ಯಾಪ್ತಿಯಲ್ಲಿ ಆಯಾ ಮುಖ್ಯಾಧಿಕಾರಿಗಳು ಮತ್ತು ಜಿಲ್ಲಾ ಕೇಂದ್ರದಲ್ಲಿ ಮಹಾನಗರ ಪಾಲಿಕೆ ಆಯುಕ್ತರು, ಉಪವಿಭಾಗಾಧಿಕಾರಿಗಳು ಮತ್ತು ಡಿವೈಎಸ್ಪಿ ನೇತೃತ್ವದಲ್ಲಿ ತಂಡ ಸಹ ರಚಿಸಲಾಗುವುದು ಎಂದು ಹೇಳಿದರು.

ತಾಲ್ಲೂಕು ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ತಹಶೀಲ್ದಾರರು ಮತ್ತು ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗುವುದು ಎಂದರು.

ಗ್ರಾಮಾಂತರ ಪ್ರದೇಶದಲ್ಲಿ ತಹಶೀಲ್ದಾರ್‌ ಮೂಲಕ ನಿಗಾ ಸಹ ಇಡಲಾಗುವುದು. ಯಾವುದೇ ಪರಿಸ್ಥಿತಿಯಲ್ಲಿ ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ  ಮಾತನಾಡಿ, ಜನರು ಮಾಸ್ಕ್ ಧರಿಸದೆ ಇರುವ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ₹ 250, ಇತರೆ ಪ್ರದೇಶಗಳಲ್ಲಿ ₹ 100 ದಂಡ ವಿಧಿಸಲಾಗುತ್ತಿದೆ ಎಂದರು.

ಮಂಗಲ ಕಾರ್ಯಾಲಯ ಮತ್ತು ಇತರೆ ಕಾರ್ಯಕ್ರಮಗಳ ಸಂದರ್ಭದಲ್ಲಿ ನಿಯಮ ಪಾಲಿಸದೆ ಇದ್ದ ಸಂದರ್ಭದಲ್ಲಿ ₹ 5 ಸಾವಿರದಿಂದ ₹ 10 ಸಾವಿರದ ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಹೇಳಿದರು.

ಇನ್ನು ಮುಂದೆ ವ್ಯಾಪಾರ ನಡೆಸುವ ಅಂಗಡಿ ಮುಂಗಟ್ಟುಗಳ ಮುಂದೆ ಪರಸ್ಪರ ಅಂತರಕ್ಕಾಗಿ ಬಾಕ್ಸ್ ಮಾರ್ಕ್ ಹಾಕಿಸಬೇಕು.  ಹ್ಯಾಂಡ್‍ಗ್ಲೌಸ್, ಫೇಸ್‍ಶೀಲ್ಡ್ ಹಾಕಿಕೊಳ್ಳಬೇಕು. ಪ್ರತಿ ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ನಿಯಮ ಪಾಲಿಸಬೇಕು. ಏಪ್ರಿಲ್‌ 16ರ ಸಂಜೆಯೊಳಗೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಯಾವುದೇ ಸಂದರ್ಭದಲ್ಲಿ ಕಾನೂನು ಉಲ್ಲಂಘನೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಅವರು ಸೂಚನೆ ನೀಡಿದರು.

ಪ್ರತಿದಿನ ಕಡ್ಡಾಯವಾಗಿ 4000 ಸ್ವ್ಯಾಬ್ ಸಂಗ್ರಹ ಮತ್ತು ಪರೀಕ್ಷೆ ಹಾಗೂ ಕೋವಿಡ್ -19 ವ್ಯಾಕ್ಸಿನೇಶನ್ ಕಾರ್ಯ ಚುರುಕುಗೊಳಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಉಪ ವಿಭಾಗಾಧಿಕಾರಿಗಳಾದ ರಾಹುಲ್ ಸಿಂಧೆ, ಬಲರಾಮ ಲಮಾಣಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.