ಮಂಗಳವಾರ, ಮೇ 24, 2022
27 °C
ಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ; ಜನರಿಗೆ ನೀರಿನ ಅರವಟಿಗೆ

ಬೇಸಿಗೆ ದಾಹ ತಣಿಸುವ ‘ನೀರು ಸೇವಕರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಿರು ಬೇಸಿಗೆಯ ಈ ದಿನಗಳಲ್ಲಿ ಜನ, ಜಾನುವಾರು, ಪ್ರಾಣಿ–ಪಕ್ಷಿಗಳು ಕುಡಿಯುವ ನೀರು, ನೆರಳಿಗಾಗಿ ದಿನವಿಡೀ ಪರಿತಪಿಸುವುದು ಬಿಸಿಲನಾಡು ವಿಜಯಪುರ ಜಿಲ್ಲೆಯಲ್ಲಿ ನಿತ್ಯ ಕಂಡುಬರುವ ಸಾಮಾನ್ಯ ದೃಶ್ಯ.

ಈ ಕಡು ಬೇಸಿಗೆಯಲ್ಲಿ ದಣಿದ ಪ್ರಾಣಿ, ಪಕ್ಷಿಗಳಿಗೆ ನೀರು, ಕಾಳು, ಆಹಾರದ ವ್ಯವಸ್ಥೆಯನ್ನು ಅನೇಕರು ಒದಗಿಸಿ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಅನೇಕ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ತಂಪು ನೀರಿನ ಅರವಟಿಕೆ, ಪಕ್ಷಿಗಳಿಗೆ ಗಿಡಮರಗಳಲ್ಲಿ ನೀರಿನ ವ್ಯವಸ್ಥೆ, ಪ್ರಾಣಿಗಳಿಗೆ ಮೇವು, ನೀರು ಒದಗಿಸುವ ಸೇವೆಯಲ್ಲಿ ಅನೇಕ ಸಂಘ–ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇಂತಹ ಸಂಘ, ಸಂಸ್ಥೆ, ವ್ಯಕ್ತಿಗಳ ಸೇವಾ ಕಾರ್ಯದ ಮೇಲೆ ಈ ವಾರದ ‘ನಮ್ಮ ಜನ ನಮ್ಮ ಧ್ವನಿ’ಯಲ್ಲಿ ಬೆಳಕು ಚೆಲ್ಲಲಾಗಿದೆ. ಯಾರೆಲ್ಲ ಏನೇನು ವ್ಯವಸ್ಥೆ ಮಾಡಿದ್ದಾರೆ ಎಂಬುದನ್ನು ನೋಡಿಕೊಂಡು ಬರೋಣ ಬನ್ನಿ.

ಹೊರ್ತಿ ಸಮೀಪದ ಇಂಚಗೇರಿ ಗ್ರಾಮದ ಮಾಧವಾನಂದ ಪ್ರಭೂಜಿ ಮಠದ ಆವರಣದಲ್ಲಿರುವ ನೆಲೆಸಿರುವ ನವಿಲು, ಗುಬ್ಬಿ, ಗಿಳಿ, ಪಾರಿವಾಳ ಮುಂತಾದವುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗುವಂತೆ  ಅನೀಲಕುಮಾರ ಥೋರಾತ ಮತ್ತು ಚಿಕ್ಕಮಕ್ಕಳ ತಂಡವು ಗಿಡ, ಮರಗಳಲ್ಲಿ ಮಣ್ಣಿನ ಪಾತ್ರೆ ಕಟ್ಟಿ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.

ಚಡಚಣ– ಇಂಚಗೇರಿ-ಕನ್ನೂರ ಮೂಲಕ ವಿಜಯಪುರಕ್ಕೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇಂಚಗೇರಿ ಗ್ರಾಮದ ಮಹಾದೇವರ ಮಠದ ಬಸ್ ನಿಲ್ದಾಣದಲ್ಲಿ ಮಡಿಕೆಯಲ್ಲಿ ನೀರು ಹಾಕಿ ತಂಪಾದ ಕುಡಿಯುವ ನೀರಿನ ಅರವಟಿಗೆ ಇಟ್ಟು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ.

ಬಿಸಿಲ ಧಗೆಯಿಂದ ಬಾಯಾರಿ ಬಂದವರು ಇಲ್ಲಿ ಸ್ವಲ್ಪ ಹೊತ್ತು ತಂಗಿ, ಇಲ್ಲಿ ಇಡಲಾದ ತಂಪಾದ ಕುಡಿಯುವ ನೀರು ಸೇವಿಸಿ ದಾಹ ತಣಿಸಿಕೊಳ್ಳುತ್ತಿದ್ದಾರೆ. 

ವಿವೇಕಾನಂದ ಅರಳಿ, ಕರಬಸಪ್ಪ ಓಂಕಾರಶೆಟ್ಟಿ, ಶಿವಾನಂದ ಹದಿಮೂರ, ವಿಶ್ವನಾಥ ಗುಡ್ಡದ, ದಯಾನಂದ ಏಳಗಿ, ಸಂಗಮೇಶ ನಾಗೊಂಡ, ಸಂಜು ಕಂಬಾರ, ಸಿದ್ಧಾರಾಮ ಏಳಗಿ, ಸಂಜು ಕಂಬಾರ, ರಾಜು ಏಳಗಿ ತಂಡವು ನೀರಿನ ವ್ಯವಸ್ಥೆ ಮಾಡಿದ್ದಾರೆ.

ದೇವರಹಿಪ್ಪರಗಿ ಪಟ್ಟಣದ ಹಲವು ಅಂಗಡಿ, ಹೋಟೆಲ್‌ಗಳ ಮುಂದೆ ಅರವಟಿಗೆ ಇಟ್ಟು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಹಲವು ಮನೆಗಳ ಬಳಿ ಇರುವ ಗಿಡಮರಗಳಲ್ಲಿ ಪಕ್ಷಿಗಳಿಗಾಗಿ ನೀರಿನ ಬಾಟಲಿ, ಚಿಕ್ಕ ಮಡಿಕೆಗಳನ್ನು ಇಟ್ಟು ನೀರು ತುಂಬಿರಿಸಲಾಗಿದೆ.

ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ‘ನನ್ನ ಚಹಾ’ ಅಂಗಡಿಯ ಮುಂದೆ ಮೂರು ಗಡಿಗೆಗಳಲ್ಲಿ ನೀರು ಸಂಗ್ರಹಿಸಿ ಕುಡಿಯುವ ವ್ಯವಸ್ಥೆ ಮಾಡಲಾಗಿದೆ. ದಿನಕ್ಕೆ 20 ಕೊಡ ನೀರು ಪೂರೈಸುವುದೊಂದೆ ನನ್ನ ಕೆಲಸ ಎನ್ನುತ್ತಾರೆ ಚಹಾ ಅಂಗಡಿಯ ಸದ್ದಾಂ ನದಾಫ್.

ಇನ್ನೂ ಇವರಂತೆ ಕಾಶಿಪತಿ ಕುದರಿ, ಮನೋಹರ ಗಂಜ್ಯಾಳ ಸಹ ತಮ್ಮ ಅಂಗಡಿಗಳ ಮುಂದೆ ಅರವಟಿಗೆ ಆರಂಭಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಮೋಹನಲಾಲ್ ಪಟೇಲ ಅವರು ತಮ್ಮ ಶಂಕರ್ ಸಾ ಮಿಲ್‌ನಲ್ಲಿ 12 ವರ್ಷಗಳಿಂದ ದನಗಳಿಗಾಗಿ ಕುಡಿಯುವ ನೀರಿನ ಅನುಕೂಲ ಮಾಡಿದ್ದಾರೆ. ಇಂಡಿ ರಸ್ತೆಯಲ್ಲಿರುವ ಕೆಲವು ಮನೆಯ ಗಿಡಗಳಲ್ಲಿ ಪಕ್ಷಿಗಳಿಗೆ ಅನುಕೂಲವಾಗಲೆಂದೂ ಚಿಕ್ಕ ಮಡಿಕೆಗಳನ್ನು ಇಟ್ಟು ನೀರು ಪೂರೈಸುತ್ತಿದ್ದಾರೆ.

ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಕುಸುಮಾ ಫೌಂಡೇಶನ ವತಿಯಿಂದ ಸಾರ್ವಜನಿಕರಿಗೆ ಬೇಸಿಗೆಯಲ್ಲಿ ಉಂಟಾಗುವ ನೀರಿನ ದಾಹ ನೀಗಿಸಲು ಪ್ರಮುಖ ಬೀದಿಗಳಲ್ಲಿ ಹರಿಬೆಗಳನ್ನು ಇಟ್ಟು ಜನರಿಗೆ ಅನೂಕೂಲ ಮಾಡಿಕೊಟ್ಟಿದ್ದಾರೆ.

ಬಿಜ್ಜರಗಿ ಗ್ರಾಮದಲ್ಲಿ ಪಕ್ಷಿಗಳ ನೀರಿನ ದಾಹ ನೀಗಿಸಲು ಪ್ರೋಪೆಷನಲ್ ಸೋಶಿಯಲ್ ವರ್ಕ್‌ ಅಸೋಸಿಯೇಷನ್ ಹಾಗೂ ಕರ್ನಾಟಕ ಜನಸ್ಪಂದನ ಟ್ಟಸ್ಟ್‌ ಸಹಯೋಗದಲ್ಲಿ ನೇತು ಹಾಕಿದ ಅರಟಿಕೆಗಳನ್ನು ಪ್ರಮುಖ ಬೀದಿಗಳಲ್ಲಿ ಹಾಕಿ ಪಕ್ಷಿಗಳ ನೀರಿನ ದಾಹ ನೀಗಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಬಾಬಾನಗರ ಬಸ್ ನಿಲ್ದಾಣದ ಹತ್ತಿರ ಪ್ರಯಾಣಿಕರಿಗೆ ನೀರಿನ ದಾಹ ನೀಗಿಸಲು ಹರಿಬೆಯನ್ನು ಇಟ್ಟು ಸಾರ್ವಜನಿಕರಿಗೆ ಗ್ರಾಮಸ್ಥರು ಅನೂಕೂ ಮಾಡಿಕೊಟ್ಟಿಕೊಟ್ಟಿದ್ದಾರೆ.

ತಾಳಿಕೋಟೆ ಪಟ್ಟಣದಲ್ಲಿ ಪಶು-ಪಕ್ಷಿಗಳಿಗೆ ಬೇಸಿಗೆಯಲ್ಲಿ ದಾಹ ತೀರಿಸಲೆಂದು ಖಾಸ್ಗತ ಮಠದ ಪೀಠಾಧಿಪತಿ ಸಿದ್ಧಲಿಂಗ ದೇವರು ತಮ್ಮ ಶ್ರೀಮಠದಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಸಿ ಮರಗಳಿಗೆ ಕಟ್ಟಲು ಕುಡಿಯುವ ನೀರಿನ ಅರವಟ್ಟಿಗೆ ತಯಾರಿಸುತ್ತಿರುವುದು ಹಾಗೂ ಅವುಗಳನ್ನು ಮರಗಳಿಗೆ ಕಟ್ಟಿದ್ದಾರೆ.

ನಾಲತವಾಡ ಪಟ್ಟಣದ ಪಕ್ಷಿ ಪ್ರೇಮಿ ಸಂಗಮೇಶ ಮಡಿವಾಳರ, ಪ್ರಭುರಾಜ ದುದ್ದಗಿ ಅವರು ತಮ್ಮ ಕಾಂಪ್ಲೆಕ್ಸ್ ಮಾಳಿಗೆಯ ಮೇಲೆ ನೀರು, ಆಹಾರ  ಒದಗಿಸಿದ್ದಾರೆ. ಅಲ್ಲದೇ, ಗೂಡಿನಿಂದ ಕೆಳಕ್ಕೆ ಬಿದ್ದ ಹಕ್ಕಿ ಮರಿಗಳನ್ನು ರಕ್ಷಿಸಿ ಅವು ದೊಡ್ಡವಾಗಿ ಹಾರುವ ಸಾಮರ್ಥ್ಯ ಬಂದ ಬಳಿಕ ಆಗಸಕ್ಕೆ ಹಾರಿ ಬಿಡುತ್ತಾರೆ. ದುದ್ದಗಿ ಪ್ರಭುರಾಜ ಹಾಗೂ ಅವರ ಪತ್ನಿ ಅಂಕಿತಾ ಅವರು ಈ ಕಾರ್ಯಕ್ಕೆ ಸಹಕಾರಿಯಾಗಿದ್ದಾರೆ.

****

ದಾಹ ತಣಿಸುತ್ತಿರುವ ‘ಯುವಭಾರತ’

ವಿಜಯಪುರದ ಯುವಭಾರತ ಸಮಿತಿ ಹಲವು ವರ್ಷಗಳಿಂದ ನಗರದಲ್ಲಿ ಬೇಸಿಗೆ ದಿನಗಳಲ್ಲಿ ನೀರಿನ ಅರವಟಿಕೆ ಸ್ಥಾಪಿಸುವ ಮೂಲಕ ಜನರ ದಾಹ ತಣಿಸುವ ಸೇವೆಯಲ್ಲಿ ನಿರತವಾಗಿದೆ.

ಉಮೇಶ ಕಾರಜೋಳ ಅಧ್ಯಕ್ಷರಾಗಿರುವ ಯುವಭಾರತ ಸಮಿತಿ ಸದ್ಯ ನಗರದ ಕಿರಾಣಾ ಬಜಾರ, ತಿಡಗುಂದಿ ಕ್ರಾಸ್‌, ಗೋಳಗುಮ್ಮಟದಲ್ಲಿ ಕುಡಿಯುವ ತಂಪು ನೀರಿನ ಅರವಟಿಕೆ ವ್ಯವಸ್ಥೆ ಮಾಡಿದೆ.

ಅಲ್ಲದೇ, ನಗರದಲ್ಲಿರುವ ಬಿಡಾಡಿ ದನಕರುಗಳ ಅನೂಕೂಲಕ್ಕಾಗಿ ಯುವಭಾರತ ಸಮಿತಿಯಿಂದ ಕುಡಿಯುವ ನೀರಿನ‌ 50ಕ್ಕೂ ಹೆಚ್ಚು ಹೊಂಡದ ವ್ಯವಸ್ಥೆ ಮಾಡಲಾಗುತ್ತಿದೆ.

ನಗರದ ವಿವಿಧ ಬಡಾವಣೆ, ಕಾಲೊನಿಗಳಲ್ಲಿ ನೀರಿನ ಹೊಂಡದ ಅವಶ್ಯಕತೆ ಇದ್ದರೆ ಯುವಭಾರತ ಸಮಿತಿ ಸಂಪರ್ಕಿಸಿದರೆ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ದಾಹ ತಣಿಸುವ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸತೀಶ: 9845454945, ವಿರೇಶ: 8073544496, ಸಾಗರ‌: 9900412311 ಸಂಪರ್ಕಿಸಬಹುದು.

ಬಿಸಿಲಿನ ಪ್ರಖರತೆ ಅಧಿಕವಾಗಿದೆ. ಬಿಸಿ ಗಾಳಿ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಜನರ, ಪ್ರಾಣಿ, ಪಕ್ಷಿಗಳ ದಾಹ ತಣಿಸುವ ಕಾರ್ಯದಲ್ಲಿ ಯುವ ಭಾರತ ಸೇವೆ ಮಾಡುತ್ತಿದೆ ಎನ್ನುತ್ತಾರೆ ಉಮೇಶ ಕಾರಜೋಳ.

***

ಮಾನವೀಯತೆ ಮೆರೆಯುತ್ತಿರುವ ವೇದಿಕೆ

ಸಿಂದಗಿ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ಸಿಂದಗಿ ತಾಲ್ಲೂಕು ಆಡಳಿತ ಸೌಧದ ಆವರಣ, ಪೊಲೀಸ್ ಠಾಣೆ ಆವರಣ, ಸರ್ಕಾರಿ ಆಸ್ಪತ್ರೆ ಆವರಣ, ಟಿಪ್ಪು ಸುಲ್ತಾನ್ ವೃತ್ತ ಹಾಗೂ ಡಾ.ಅಂಬೇಡ್ಕರ್ ವೃತ್ತದ ಬಳಿ ಹೀಗೆ ಐದು ಕಡೆ ಮಾರ್ಚ್ ತಿಂಗಳಲ್ಲಿ ನೀರಿನ ಅರವಟಿಗೆ ಸ್ಥಾಪಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ನಮ್ಮ ವೇದಿಕೆ ವತಿಯಿಂದ ಬೇಸಿಗೆಯ ಪ್ರಾರಂಭದಿಂದ ನೀರಿನ ಅರವಟಿಗೆ ಮುಂದುವರೆಸಿಕೊಂಡು ಹೊರಟಿದ್ದೇವೆ. ಪ್ರತಿ ನಿತ್ಯ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತಂದು ಮಣ್ಣಿನ ಬಿಂದಿಗೆಗಳಲ್ಲಿ ಹಾಕಲಾಗುವುದು. ಈ ಕಾರ್ಯಕ್ಕಾಗಿ ಒಬ್ಬ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ.

ನೀರಿನ ಅರವಟಿಗೆ ಸ್ಥಳದಲ್ಲಿ ಅರವಟಿಗೆ ನಿರ್ವಹಣೆ ವ್ಯಕ್ತಿಯ ಹಾಗೂ ನನ್ನ ಮೊಬೈಲ್ ನಂಬರ್‌(8310113211, 9901541519) ಇದೆ. ಬಿಂದಿಗೆಯಲ್ಲಿ ನೀರು ಖಾಲಿಯಾಗಿದ್ದರೆ ಯಾರಾದರೂ ಕರೆ ಮಾಡಬಹುದು. ನೀರಿನ ಅರವಟಿಗೆ ಬಗೆಗೆ ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮೌಲಾನಾ ದಾವೂದ್ ನದ್ವಿ ತಿಳಿಸಿದ್ದಾರೆ.

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಕೆ.ಎಸ್.ಈಸರಗೊಂಡ, ಅಮರನಾಥ ಹಿರೇಮಠ, ಶಾಂತೂ ಹಿರೇಮಠ, ಮಹಾಂತೇಶ ನೂಲಿನವರ, ಶರಣಬಸಪ್ಪ ಶಿ.ಗಡೇದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.