ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವರಹಿಪ್ಪರಗಿ: ದಾಹ ತಣಿಸದ ‘ಬಹುಹಳ್ಳಿ’ ಯೋಜನೆ

15 ದಿನಗಳಿಗೊಮ್ಮೆ ನೀರು ಪೂರೈಕೆ
Published : 15 ಆಗಸ್ಟ್ 2024, 7:29 IST
Last Updated : 15 ಆಗಸ್ಟ್ 2024, 7:29 IST
ಫಾಲೋ ಮಾಡಿ
Comments

ದೇವರಹಿಪ್ಪರಗಿ: ‘ಮಳೆಗಾಲದಲ್ಲೂ ನಾವು 15 ದಿನಗಳಿಗೊಮ್ಮೆ ನೀರು ಕಾಣುವಂತಾಗಿದೆ. ನಲ್ಲಿಯಲ್ಲಿ ಬಂದ ನೀರಿನಲ್ಲಿ ಮಣ್ಣಿನ ಅಂಶವೇ ಹೆಚ್ಚಾಗಿದ್ದು ಕುಡಿಯಲು ಬಾರದಂತಾಗಿದೆ. ಇಂಥ ನೀರನ್ನೇ ಹಲವು ದಿನಗಳಿಂದ ಅನಿವಾರ್ಯವಾಗಿ ಬಳಸುತ್ತಿದ್ದೇವೆ’ ಎನ್ನುತ್ತಲೇ ಕಲುಷಿತ ನೀರು ಪೂರೈಕೆಯ ಕುರಿತು ಅಸಮಾಧಾನ ಹೊರಹಾಕಿದರು ಪಟ್ಟಣದ ಪಾರ್ವತಿ ನಾಶೀಮಠ.

ಪಟ್ಟಣಕ್ಕೆ ನೀರು ಪೂರೈಕೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ ಜನತೆಗೆ ಈವರೆಗೆ ವಾರಕ್ಕೊಮ್ಮೆಯಾದರೂ ಸ್ವಚ್ಛ, ಶುದ್ಧ ನೀರು ಪೂರೈಕೆ ಆಗುತ್ತಿಲ್ಲ. 2017ರಲ್ಲಿ ಕಡ್ಲೇವಾಡ ಯೋಜನೆ ಎಂಬ ಹೆಸರಿನ ಮೂಲಕ ಸಿಂದಗಿ ತಾಲ್ಲೂಕಿನ ಬಳಗಾನೂರ ಕೆರೆಯಿಂದ ಬಹುಹಳ್ಳಿ ಕುಡಿಯುವ ನೀರು ಯೋಜನೆ ಆರಂಭಗೊಂಡಿತು. ಹರನಾಳ ಗ್ರಾಮದ ಶುದ್ಧೀಕರಣ ಘಟಕದ ಮೂಲಕ ನೀರನ್ನು ಸ್ವಚ್ಛಗೊಳಿಸಿ ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ಏಳು ಗ್ರಾಮ ಹಾಗೂ ಹತ್ತು ತಾಂಡಾಗಳಿಗೆ ನೀರು ಸರಬರಾಜು ಕಾರ್ಯಕ್ಕೆ ಚಾಲನೆ ನೀಡಲಾಯಿತು. ಆರಂಭದಲ್ಲಿ 3–4 ವರ್ಷ ಉತ್ತಮವಾಗಿ, ನಿಗದಿತ ಅವಧಿಯೊಳಗೆ ನೀರು ಪೂರೈಸುತ್ತಿದ್ದ ಯೋಜನೆ, ಈಗ ಒಂದು ವರ್ಷದಿಂದ ಕಲುಷಿತ ನೀರು ನೀಡುತ್ತಿದೆ. ಜೊತೆಗೆ, ಅವಧಿ ಮೀರಿ 15 ದಿನಗಳಿಗೊಮ್ಮೆ ನೀರು ಬರುತ್ತಿದೆ. ನೀರು ಪೂರೈಸುವ ಯಂತ್ರ ಸರಿಯಾಗಿಲ್ಲ, ವಿದ್ಯುತ್ ಸಮಸ್ಯೆಯಿದೆ ಎಂಬ ಸಿದ್ಧ ಉತ್ತರ ಸಿಗುತ್ತದೆ.

‘ಮಳೆಗಾಲದಲ್ಲಿ ನೀರಿನ ಶುದ್ಧೀಕರಣ ಮುಖ್ಯವಾಗಿದೆ. ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ, ಟೈಫಾಯಿಡ್, ಮುಖ್ಯವಾಗಿ ಕಾಮಾಲೆ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ನಾನು ಎಲ್ಲರಿಗೂ ಶುದ್ಧ ನೀರು ಕುಡಿಯಿರಿ, ಕುದಿಸಿ ಆರಿಸಿದ ನೀರನ್ನು ಬಳಸಿರಿ ಎಂದು ಸಲಹೆ ನೀಡುತ್ತೇನೆ. ಆದರೆ ರೋಗಿಗಳು, ‘ನೋಡಿರಲ್ರೀ ನೀರ ಹ್ಯಾಂಗ್ ಬರತಾವ ನಾವು ಅದನ್ನು ಹ್ಯಾಂಗ್ ಕುಡಿಯೋದು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ’ ಎಂದರು ಹಿರಿಯ ವೈದ್ಯ ಆರ್.ಆರ್.ನಾಯಿಕ್.

‘ಪಟ್ಟಣದಲ್ಲಿ ನಾಲ್ಕು ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದ್ದಾರೆ. ಇವುಗಳಲ್ಲಿ ಹಣ ಹಾಕಿ ನೀರು ಪಡೆಯಬೇಕು. ಇದು ಎಲ್ಲರಿಗೂ ಎಲ್ಲ ಸಂದರ್ಭದಲ್ಲಿ ಸಾಧ್ಯವಿಲ್ಲ. ಈಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಹುಹಳ್ಳಿ ಕುಡಿಯುವ ನೀರು ಯೋಜನೆ ರೂಪಿಸಿ ಅದರಿಂದ ಶುದ್ಧ, ಸ್ವಚ್ಛ ನೀರು ಬರದಿದ್ದರೆ ಲಾಭ ಏನು? ಸ್ಥಳೀಯ ಆಡಳಿತ ಈ ಕುರಿತು ಅಗತ್ಯ ಕ್ರಮ ಕೈಗೊಂಡು ಕಲುಷಿತ ನೀರು ಪೂರೈಕೆಗೆ ಕಡಿವಾಣ ಹಾಕಬೇಕು’ ಎಂದು ಅವರು ಆಗ್ರಹಿಸಿದರು.

‘ನಲ್ಲಿಯ ಮೂಲಕ ಬರುವ ಮಣ್ಣಿನ ಬಣ್ಣದ ನೀರನ್ನು ಹಲವು ಬಾರಿ ನೀರು ಬಿಡುವವರಿಗೆ ತೋರಿಸಿ ಹೇಳಿದ್ದಾಗಿದೆ. ಈ ನೀರನ್ನು ಕುಡಿಯಬೇಡಿ; ಬಟ್ಟೆ, ಬಾಂಡೆ ತೊಳೆಯಲು ಬಳಸಿ ಎಂದು ಅವರು ಹೇಳುತ್ತಾರೆ. ಪಟ್ಟಣದ 1, 2, 3, 4, 5 ವಾರ್ಡ್‌ಗಳಿಗೆ ನಿತ್ಯ ಶುದ್ಧ ನೀರು ಪೂರೈಸಿ 6, 7, 8 ಸೇರಿದಂತೆ ಉಳಿದ ವಾರ್ಡ್‌ಗಳಿಗೆ ಬಟ್ಟೆ, ಬಾಂಡೆ ತೊಳೆಯಲು ಸಹ ಯೋಗ್ಯವಲ್ಲದ ನೀರು ಈಗ ಪೂರೈಸುತ್ತಿರುವುದು ಯಾವ ನ್ಯಾಯ? ಕೂಡಲೇ ಎಲ್ಲರಿಗೂ ಶುದ್ಧ ನೀರು ಪೂರೈಸಿ ಪುಣ್ಯ ಕಟ್ಟಿಕೊಳ್ಳಬೇಕು’ ಎನ್ನುತ್ತಾರೆ ಗೃಹಿಣಿ ಪಾರ್ವತಿ ನಾಶೀಮಠ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಈಗ ತಾನೇ ಅಧಿಕಾರ ವಹಿಸಿಕೊಂಡಿದ್ದೇನೆ. ನೀರಿನ ಪೂರೈಕೆ ಕುರಿತು ಸಿಬ್ಬಂದಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ.
–ಎಸ್.ಎಸ್. ಬಾಗಲಕೋಟ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT