ಮಂಗಳವಾರ, ಸೆಪ್ಟೆಂಬರ್ 28, 2021
22 °C
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ

ಅಂಗನವಾಡಿ ನೌಕರರ ಅನಿರ್ದಿಷ್ಟ ಪ್ರತಿಭಟನೆ ಆ.16ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಗಸ್ಟ್‌ 16ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್‌ಗಳಾಗಿ ಕಾರ್ಯನಿರ್ವಹಿಸುವಾಗ ಕೋವಿಡ್‌ನಿಂದ ಸಾವಿಗೀಡಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕುಟುಂಬಕ್ಕೆ ತಲಾ ₹ 30 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮೊಟ್ಟೆ ಖರೀದಿ ಹಗರಣದಲ್ಲಿ ಭಾಗಿಯಾಗಿರುವ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಬೇಕು. ಐಸಿಡಿಎಸ್‌ ಕೆಲಸ ಹೊರತು ಪಡಿಸಿ ಉಳಿದ ಕೆಲಸಗಳನ್ನು ನಿರ್ಬಂಧಿಸಬೇಕು ಎಂದರು.

2016ರಿಂದ ನಿವೃತ್ತಿಯಾದ ಸುಮಾರು 7166 ಅಂಗನವಾಡಿ ನೌಕರರಿಗೆ ಬಾಕಿ ಇರುವ ಇಡುಗಂಟು ಕೊಡಬೇಕು. 2015ರಿಂದ ಹೊಸದಾಗಿ ನೇಮಕವಾಗಿರುವವರಿಗೆ ಎಲ್‌ಐಸಿ ಆಧಾರಿತ ನಿವೃತ್ತಿ ಸೌಲಭ್ಯ ಕೊಡಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಐಎಲ್‌ಸಿ ಶಿಫಾರಸ್ಸಿನಂತೆ ನೌಕರರಂತೆ ಗುರುತಿಸಿ ಕನಿಷ್ಟ ವೇತನ ಜಾರಿಮಾಡಬೇಕು. ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕು, ಅಲ್ಲಿಯವರೆಗೆ ಕಾರ್ಯಕರ್ತೆಯರಿಗೆ ₹ 30 ಸಾವಿರ ಮತ್ತು ಸಹಾಯಕಿಯರಿಗೆ ₹21 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಖಾಲಿ ಇರುವ ಸಹಾಯಕಿಯರು ಮತ್ತು ಕಾರ್ಯಕರ್ತೆಯರ ಹುದ್ದೆಗಳನ್ನು ಮತ್ತು ಇಲಾಖೆ ಸಿಬ್ಬಂದಿಗಳ ಹುದ್ದೆಗಳನ್ನ ಭರ್ತಿ ಮಾಡಬೇಕು. ಸೇವಾ ಹಿರಿತನ ಮತ್ತು ಮೀಸಲಾತಿ ಆಧಾರದಲ್ಲಿ ಅಂಗನವಾಡಿ ನೌಕರರಿಗೆ ಮುಂಬಡ್ತಿ ಕೊಡಬೇಕು ಎಂದರು.

ಐಸಿಡಿಎಸ್‌ ಯೋಜನೆಗೆ ಅನುದಾನವನ್ನು ಹೆಚ್ಚಳ ಮಾಡಿ ದೇಶದ ಮಕ್ಕಳ ಮತ್ತು ಮಹಿಳೆಯನ್ನು ರಕ್ಷಿಸಬೇಕು ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುನಂದಾ ನಾಯ್ಕ, ಕಾರ್ಯಾಧ್ಯಕ್ಷೆ ಶಾಂತಾ ಎಸ್‌.ಘಂಟಿ, ಭಾರತಿ ವಾಲಿ, ಭೀಮಶಿ ಕಲಾದಗಿ, ಸಿದ್ದಮ್ಮ ಕಲ್ಗುಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

****

ದೇಶದಲ್ಲಿ ಅಪೌಷ್ಠಿಕತೆ, ಕೋವಿಡ್‌–19 ಪರಿಸ್ಥಿತಿಯನ್ನು ಸುಧಾರಿಸಲು ಅಂಗನವಾಡಿ ಕೇಂದ್ರಗಳು ಬೆನ್ನೆಲುಬಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕನಿಷ್ಠ ಕೂಲಿ ನೀಡಿ ಗೌರವದಿಂದ ನಡೆಸಿಕೊಳ್ಳಿ
–ಎಸ್‌.ವರಲಕ್ಷ್ಮಿ, ಅಧ್ಯಕ್ಷೆ ‌

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.