ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ನನೆಗುದಿಗೆ ಬಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ

Published : 21 ಆಗಸ್ಟ್ 2024, 4:26 IST
Last Updated : 21 ಆಗಸ್ಟ್ 2024, 4:26 IST
ಫಾಲೋ ಮಾಡಿ
Comments

ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಬಳಿಕ ಉತ್ತರ ಕರ್ನಾಟಕದ ಜೀವನಾಡಿಯಾದ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ವೇಗ ಸಿಗಲಿದೆ ಎಂಬ ಭರವಸೆ ಹುಸಿಯಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಕಾಮಗಾರಿಗಳು ನಡೆಯದೇ ಸಂಪೂರ್ಣ ಸ್ಥಗಿತವಾಗಿವೆ ಎಂಬ ಆರೋಪ ವ್ಯಕ್ತವಾಗಿದೆ.

ಆಲಮಟ್ಟಿ ಜಲಾಶಯವನ್ನು ಈಗಿನ 519.60 ಮೀಟರ್‌ನಿಂದ 524.256 ಮೀಟರ್ ಏರಿಸಿ, ಈ 130 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ. ಆದರೆ, ಆಲಮಟ್ಟಿ ಜಲಾಶಯ ಎತ್ತರಿಸುವ ಯಾವುದೇ ಪ್ರಕ್ರಿಯೆಗಳು ಇನ್ನೂ ಆರಂಭಗೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಭೂಸ್ವಾಧೀನ. 

ಯುಕೆಪಿ ಮೂರನೇ ಹಂತದಿಂದ ಒಳಪಡುವ ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾಲುವೆಗಳ ಜಾಲ ನಿರ್ಮಾಣ ಕಾರ್ಯ ಸಾಗಿದ್ದರೂ, ಭೂಸ್ವಾಧೀನ, ಪುನರ್ವಸತಿ, ಪುನರ್ ನಿರ್ಮಾಣ ಕಾರ್ಯ ಮಾತ್ರ ಇನ್ನೂ ಪ್ರಾಥಮಿಕ ಅಧಿಸೂಚನೆ ಹಂತದಲ್ಲಿಯೇ ಇದೆ.

ಜಲಾಶಯ ಎತ್ತರದಿಂದ 75,563 ಎಕರೆ ಜಲಾವೃತಗೊಳ್ಳುತ್ತದೆ, 20 ಪುನರ್ವಸತಿ ಕೇಂದ್ರಗಳ ಸ್ಥಾಪನೆಗೆ 6467 ಎಕರೆ, ಕಾಲುವೆಗಳ ಜಾಲ ನಿರ್ಮಾಣಕ್ಕೆ 51,847 ಎಕರೆ ಸೇರಿ ಒಟ್ಟಾರೇ 1,33,867 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.

ಭೂಸ್ವಾಧೀನ ಪಡಿಸಿಕೊಳ್ಳಬೇಕಾದ ಭೂಮಿಗೆ ಬೆಲೆ ನಿಗದಿಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಷ್ಟು ಬೃಹತ್ ಪ್ರಮಾಣದಲ್ಲಿ ಭೂಮಿಗೆ ಪರಿಹಾರ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಹಾರ ಎಂಬುದೇ ದೊಡ್ಡ ಸವಾಲಾಗಿದೆ. ಇದಕ್ಕೆ ಮುಖ್ಯ ಕಾರಣ ಜಮೀನಿಗೆ ಹೆಚ್ಚಿದ ಮೌಲ್ಯ. ಆ ಪ್ರಮಾಣದಲ್ಲಿ ಹಣಕಾಸು ನೀಡಲು ಸದ್ಯದ ಸ್ಥಿತಿಗತಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ. ಅದಕ್ಕಾಗಿಯೇ ಇಡೀ ಯೋಜನೆ ರಾಷ್ಟ್ರೀಕರಣಗೊಳಿಸಬೇಕೆಂಬ ಕೂಗು ಬಲವಾಗತೊಡಗಿದೆ.

ಈಚೆಗೆ ಕೆಬಿಜೆಎನ್ ಎಲ್ ಬೋರ್ಡ್ ಎರಡು ಹಂತದಲ್ಲಿ ಭೂಸ್ವಾಧೀನಕ್ಕೆ ಯೋಚಿಸಿದೆ. 519.60 ಮೀಟರ್‌ನಿಂದ 522 ಮೀಟರ್‌ ವರೆಗೆ ಒಂದು ಹಂತ, 522 ರಿಂದ 524.256 ಮೀಗೆ ಎರಡನೇ ಹಂತ. ಆದರೆ ಅದು ಕಾರ್ಯರೂಪಕ್ಕೆ ಬರಲಿದೆಯೇ ಎಂಬುದು ಪ್ರಶ್ನೆಯಾಗಿದೆ.

ಆಗದ ಗೆಜೆಟ್‌ನೋಟಿಫಿಕೇಶ್‌: ಬ್ರಿಜೇಶ್ ಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧೀಕರಣ ಪ್ರಾಧಿಕಾರದ-2 ನೇ ತೀರ್ಪು ಬಂದು 14 ವರ್ಷವಾದರೂ  ನ್ಯಾಯಾಧೀಕರಣದ ಅಧಿಸೂಚನೆ (ಗೆಜೆಟ್ ನೋಟಿಫಿಕೇಶನ್)ಯನ್ನು ಕೇಂದ್ರ ಸರ್ಕಾರ ಇನ್ನೂ ಹೊರಡಿಸಿಲ್ಲ. ಇನ್ನೊಂದೆಡೆ ಹಂಚಿಕೆಯಾದ ನೀರನ್ನು ಮರು ಹಂಚಿಕೆ ಮಾಡಬೇಕೆಂದು ಸೀಮಾಂಧ್ರ, ತೆಲಂಗಾಣ ಸರ್ಕಾರಗಳು ಸುಪ್ರಿಂಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಇದು ಇನ್ನೂ ಇತ್ಯರ್ಥವಾಗಿಲ್ಲ.  

ಇವುಗಳ ಮಧ್ಯೆ ಕರ್ನಾಟಕ್ಕೆ ಹೆಚ್ಚುವರಿಯಾಗಿ ಮಂಜೂರಾಗಿದ್ದ 173 ಟಿಎಂಸಿ ಅಡಿ ನೀರಿನ ಪೈಕಿ 130 ಟಿಎಂಸಿ ಅಡಿ ನೀರನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಕ್ಕೆ ಹಂಚಿಕೆಯಾಗಿದೆ. ಆದರೆ, ಆ ನೀರನ್ನು ಇಲ್ಲಿಯವರೆಗೂ ಬಳಸಿಕೊಳ್ಳಲು ಸಾಧ್ಯವಾಗಿಲ್ಲ.

ಯುಕೆಪಿ ಕಾರ್ಯ ಚುರುಕುಗೊಳಿಸಲು ಕೆಬಿಜೆಎನ್‌ಎಲ್ ಎಂಡಿ ಕಚೇರಿಯನ್ನು ಬೆಂಗಳೂರಿನ ಬದಲಾಗಿ ಸಂಪೂರ್ಣವಾಗಿ ಆಲಮಟ್ಟಿಗೆ ಸ್ಥಳಾಂತರಿಸಬೇಕು, ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಪೂರ್ಣ ಪ್ರಮಾಣದ ಪುನರ್ವಸತಿ ಆಯುಕ್ತರನ್ನು ನೇಮಿಸಬೇಕು ಎಂಬ ಕೂಗು ಹೆಚ್ಚಾಗಿದೆ. 

ಕೃಷ್ಣೆಗೆ ಬಾಗಿನ ಅರ್ಪಿಸಲು ಬುಧವಾರ(ಆ.21) ಆಲಮಟ್ಟಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಯಾವುದಾದರೂ ಸ್ಪಷ್ಟ ಭರವಸೆ ನೀಡುತ್ತಾರಾ? ಎಂಬುದು ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT