ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಮನೆ, ಮನದಲ್ಲಿ ರಾರಾಜಿಸಿದ ರಾಷ್ಟ್ರಧ್ವಜ

ಸಂಸದ, ಶಾಸಕರು, ಅಧಿಕಾರಿಗಳಿಂದ ಧ್ವಜಾರೋಹಣ; ಸಾರ್ವಜನಿಕರಿಂದ ಗೌರವ
Last Updated 13 ಆಗಸ್ಟ್ 2022, 13:48 IST
ಅಕ್ಷರ ಗಾತ್ರ

ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಐತಿಹಾಸಿಕ ಗುಮ್ಮಟನಗರಿ ಸೇರಿದಂತೆ ಜಿಲ್ಲೆಯಾದ್ಯಂತ ನಗರ, ಪಟ್ಟಣ, ಹಳ್ಳಿಗಳಲ್ಲಿ ಶಾಲೆ, ಕಾಲೇಜು, ಸಂಘ, ಸಂಸ್ಥೆ, ಸರ್ಕಾರಿ ಕಚೇರಿ, ಮನೆ, ಅಂಗಡಿ, ಮಳಿಗೆಗಳ ಮೇಲೆ ಸಾರ್ವಜನಿಕರು ಶನಿವಾರ ಧ್ವಜಾರೋಹಣ ಮಾಡಿ ಸಂಭ್ರಮಿಸಿದರು.

ಆಟೊ, ಟಂಟಂ, ಕಾರು, ಬೈಕು, ಬಸ್‌ ಸೇರಿದಂತೆ ಇತರೆ ವಾಹನಗಳ ಮೇಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿರುವುದು ಕಂಡುಬಂದಿತು. ಹಿಂದು, ಮುಸ್ಲಿಂ, ಕ್ರೈಸ್ತ, ಜೈನ ಎನ್ನದೇ ಎಲ್ಲರೂ ತಮ್ಮ ಮನೆಗಳ ಮೇಲೆ ಪರಿವಾರ ಸಮೇತ ಧ್ವಜಾರೋಹಣ ಮಾಡಿ ದೇಶಭಕ್ತಿ ಮೆರೆದರು.‌

ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಪಾದಯಾತ್ರೆ, ಬೈಕ್‌ ರ‍್ಯಾಲಿ ಮೂಲಕವೂ ಅಮೃತ ಮಹೋತ್ಸವ ಆಚರಿಸಿದರು,

ಜಿಲ್ಲೆಯ ಸಂಸದ, ಶಾಸಕರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ ಸೇರಿದಂತೆ ಪ್ರಮುಖ ಅಧಿಕಾರಿಗಳು ಸಹ ತಮ್ಮ ನಿವಾಸಗಳಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ಸಲ್ಲಿಸಿದರು.

ಮನೆ,ಅಂಗಡಿ, ಮಳಿಗೆಗಳ ಮೇಲೆ ಧ್ವಜಾರೋಹಣ ಮಾಡಿರುವ ಸಾರ್ವಜನಿಕರು ತಮ್ಮ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಮಾಧ್ಯಗಳಲ್ಲಿ ಫೋಟೊಗಳನ್ನು ಹರಿಬಿಟ್ಟಿದ್ದಾರೆ. ಜನಗಣಮನ ರಾಷ್ಟ್ರಗೀತೆಯನ್ನು ಹಾಡಿ, ಅಭಿಮಾನ ಮೆರೆದಿದ್ದಾರೆ.

ರಸ್ತೆ ಬದಿಯ ಗೂಡಂಗಡಿಗಳ ಮೇಲೂ, ಕಾಯಿಪಲ್ಲೆ ಸಂತೆಯಲ್ಲೂ ವ್ಯಾಪಾರಿಗಳು ರಾಷ್ಟ್ರಧ್ವಜ ಹಾರಿಸಿರುವುದು ಕಂಡುಬಂದಿತು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶಾಲಾ, ಕಾಲೇಜು, ಸಂಘ–ಸಂಸ್ಥೆಗಳು ವೈವಿಧ್ಯಮಯ ದೇಶಭಕ್ತಿ ಕಾರ್ಯಕ್ರಮ, ಸ್ಪರ್ಧೆಗಳನ್ನು ಸಂಘಟಿಸಿವೆ. ಅಲ್ಲದೇ, ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜವನ್ನು ವಿತರಿಸಿವೆ.

ಜನಪ್ರತಿನಿಧಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜನರಿಗೆ ರಾಷ್ಟ್ರಧ್ವಜವನ್ನು ಉಚಿತವಾಗಿ ವಿತರಿಸಿದರು.

‘ದೇಶಾಭಿಮಾನದ ಪ್ರತೀಕರಾಷ್ಟ್ರಧ್ವಜ’
ವಿಜಯಪುರ:
ರಾಷ್ಟ್ರಧ್ವಜ ನಮ್ಮ ದೇಶಾಭಿಮಾನದ ಪ್ರತೀಕ, ರಾಷ್ಟ್ರಧ್ವಜ ನಮ್ಮ ದೇಶದ ಗೌರವದ ಸಂಕೇತ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದರು.

ಕನ್ನೂರ ಗ್ರಾಮದ ಕಲ್ಲಪ್ಪ ಬೆಳ್ಳೂಂಡಗಿ ಅವರ ನಿವಾಸದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿಆಯೋಜಿಸಿದ್ದ ‘ಮನೆ ಮನೆಯಲ್ಲೂ ತ್ರಿವರ್ಣ ಧ್ವಜ‘ ಅಭಿಯಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಮನೆ-ಮನೆಯಲ್ಲಿಯೂ ರಾಷ್ಟ್ರಧ್ವಜ ರಾರಾಜಿಸಬೇಕು ಎಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರವು ‘ಹರ್ ಘರ್ ತಿರಂಗಾ’ ಅಭಿಯಾನ ಕರೆ ನೀಡಿದೆ ಎಂದರು.

ಸ್ವಾತಂತ್ರ್ಯಕ್ಕಾಗಿ ಭಗತ್‍ಸಿಂಗ್, ಚಂದ್ರಶೇಖರ ಆಜಾದ್ ಸೇರಿದಂತೆ ಅನೇಕರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಈ ಎಲ್ಲ ಸ್ವಾತಂತ್ರ್ಯ ಯೋಧರ ಜೀವನ ನಮಗೆ ನಿತ್ಯ ಸ್ಪೂರ್ತಿಯಾಗಬೇಕು. ಅವರನ್ನು ನಾವು ಅನುದಿನವೂ ಸ್ಮರಿಸಬೇಕು., ಸ್ವಾತಂತ್ರ್ಯದ ಬೆಳಕು ತೋರಿದ ಈ ಎಲ್ಲ ಯೋಧರಿಗೆ ನಾವು ಸದಾ ಚಿರಋಣಿಯಾಗಿರಬೇಕು ಎಂದು ಹೇಳಿದರು.

ನಾಗಠಾಣ ಮತಕ್ಷೇತ್ರದಲ್ಲಿ 20 ಸಾವಿರಕ್ಕೂ ಅಧಿಕ ಧ್ವಜಗಳನ್ನು ವಿತರಣೆ ಮಾಡಲಾಗಿದೆ ಹಾಗೂಮಹಾನಗರ ಪಾಲಿಕೆಯ 7 ವಾರ್ಡ್‌ಗಳಲ್ಲಿ 9 ಸಾವಿರಕ್ಕೂ ಅಧಿಕ ಧ್ವಜಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.

***

ರಾಷ್ಟ್ರಧ್ವಜ ಹಾರಿಸುವುದು ಒಂದು ಅಭಿಮಾನದ ಸಂಕೇತ, ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರಿಗೆ ಸಲ್ಲಿಸುವ ಒಂದು ಗೌರವದ ಪ್ರತೀಕ.
-ಉಮೇಶ ಕಾರಜೋಳ,ಜಿಲ್ಲಾ ಉಪಾಧ್ಯಕ್ಷ,ಬಿಜೆಪಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT