ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಳ್ಳರ ಪಾಲಾದ ಹಳೆಯ ಗ್ರಾ. ಪಂ.ಕಲ್ಲುಗಳು!

ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ; ಲಕ್ಷಾಂತರ ರೂ. ಹಾನಿ
ಮಹಾಂತೇಶ ವೀ. ನೂಲಿನವರ
Published 12 ಜನವರಿ 2024, 6:09 IST
Last Updated 12 ಜನವರಿ 2024, 6:09 IST
ಅಕ್ಷರ ಗಾತ್ರ

ನಾಲತವಾಡ: ಪಟ್ಟಣದಲ್ಲಿ ಕೆಡವಿರುವ ಹಳೆಯ ಗ್ರಾಮ ಪಂಚಾಯಿತಿ ಕಟ್ಟಡ ಮತ್ತು ಕಾಂಪೌಂಡ್‌ನ ಸುಂದರವಾಗಿ ಕಟೆದ ಚೌಕಾಕಾರದ, ಆಯತಾಕಾರದ ಮೂಲೆಕಲ್ಲುಗಳನ್ನು, ಅತ್ಯಂತ ಅಪರೂಪವಾಗಿದ್ದ ಲಕ್ಷಾಂತರ ರೂಪಾಯಿ  ಬೆಲೆಬಾಳುವ ಕಲ್ಲುಗಳ ರಾಶಿಗಳನ್ನು ಕಳ್ಳರು ಎತ್ತಿಕೊಂಡು ಹೋಗುತ್ತಿದ್ದು, ವರ್ಷಗಳು ಕಳೆದಂತೆ ಕಲ್ಲಿನ ರಾಶಿಗಳು ಕರಗುತ್ತಿವೆ.

ಪಟ್ಟಣ ಪಂಚಾಯಿತಿ ಕಣ್ಗಾವಲ್ಲಿದ್ದ ಕಟ್ಟಿಗೆಗಳು ಕೆಲ ಕಿಡಿಗೇಡಿಗಳಿಂದ ಇಲ್ಲವಾಗಿವೆ. ಇವುಗಳನ್ನು ರಕ್ಷಿಸಬೇಕಾದ ಪಟ್ಟಣ ಪಂಚಾಯಿತಿ ನೋಡಿಯೂ ನೋಡದಂತಿದೆ.

ಅಖಂಡ ವಿಜಯಪುರ ಜಿಲ್ಲೆಯ ರಾಜಕಾರಣದ ಪಾಠಶಾಲೆಯಂತಿದ್ದ ಪಟ್ಟಣದ ಹಳೆಯ ಗ್ರಾಮ ಪಂಚಾಯಿತಿ ಕಟ್ಟಡ ಇದೀಗ ಸಂಪೂರ್ಣ ಮಾಯವಾಗಿದೆ.

ಹಳೆಯ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲವಾದ ನಂತರದಲ್ಲಿ ನೂತನ ಕಟ್ಟಡಕ್ಕೆ ವರ್ಗಾವಣೆಯಾಗಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿತು. ಹಳೆಯ ಕಟ್ಟಡ ನೆಲಸಮವಾದ ಬಳಿಕ ಅಲ್ಲಿದ್ದ ಕಿಮ್ಮತ್ತಿನ ಸಾಗುವಾನಿ, ಮತ್ತಿ ಕಟ್ಟಿಗೆಯ ತುಂಡು, ತೊಲೆಗಳು, ಸಾಗುವಾನಿಯ ಮಜಬೂತಾದ ಟೇಬಲ್, ಕುರ್ಚಿಗಳನ್ನು ನೂತನ ಪಟ್ಟಣ ಪಂಚಾಯಿತಿ ಕಟ್ಟಡದ ಆವರಣಕ್ಕೆ ಸ್ಥಳಾಂತರಿಸಲಾಯಿತು.

ಈ ಹಿಂದಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರು ಕಟ್ಟಡ ನೆಲಸಮ ಮಾಡಿದಾಗಲೇ ಹರಾಜು ಮಾಡಿದ್ದರೆ ಪಟ್ಟಣ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಲಾಭವಾಗುತ್ತಿತ್ತು. ಹರಾಜು ಮಾಡದೇ ಇದ್ದದ್ದು, ಲಕ್ಷಾಂತರ ರೂಪಾಯಿ ಹಾನಿಗೆ ಕಾರಣವಾಗಿದೆ.

ನೆಲಸಮವಾದ ಪಟ್ಟಣ ಪಂಚಾಯಿತಿ ಜಾಗದಲ್ಲಿ ಇದೀಗ ಕೆಲವರು ತಮ್ಮ ಗೂಡಂಗಡಿ, ಕಪಾಟು ಇಟ್ಟುಕೊಂಡು ಪಟ್ಟಣ ಪಂಚಾಯಿತಿಗೆ ತೆರಿಗೆಯನ್ನು ಕಟ್ಟದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಅಕ್ಕಪಕ್ಕದವರು ಅತಿಕ್ರಮಣ ಮಾಡುವ ಪೂರ್ವದಲ್ಲಿ ಪಟ್ಟಣ ಪಂಚಾಯಿತಿ ಎಚ್ಚತ್ತುಕೊಳ್ಳಬೇಕಿದೆ.

ಪಟ್ಟಣ ಪಂಚಾಯಿತಿಯ ಹಳೆಯ ಕಟ್ಟಡ ನೆಲಸಮವಾಗಿದೆ. ಅದರ ಕಲ್ಲುಗಳು ಕಳ್ಳತನವಾಗದಂತೆ ಪೊಲೀಸ್‌ ಇಲಾಖೆ ರಕ್ಷಣೆ ನೀಡಬೇಕು

-ಪೃಥ್ವಿರಾಜ ನಾಡಗೌಡಸದಸ್ಯ ಪಟ್ಟಣ ಪಂಚಾಯಿತಿ

ಪಟ್ಟಣ ಪಂಚಾಯಿತಿ ಕಲ್ಲುಗಳ ಹಾಗೂ ಜಾಗದ ರಕ್ಷಣೆಗೆ ತಂತಿ ಬೇಲಿ ಹಾಕಿಸಲಾಗುವುದು

-ಅನಿಲಕುಮಾರ ಕುಲಕರ್ಣಿ ಮುಖ್ಯಾಧಿಕಾರಿ  ಪಟ್ಟಣ ಪಂಚಾಯಿತಿ ನಾಲತವಾಡ 

ಪಟ್ಟಣ ಪಂಚಾಯಿತಿ ಜಾಗವನ್ನು ಕೆಲವರು ಅಕ್ರಮವಾಗಿ ಉಪಯೋಗಿಸುತ್ತಿದ್ದಾರೆ ಆಡಳಿತ ಇತ್ತ ಕಣ್ಣು ಹಾಯಿಸಿಲ್ಲ'.  

-ವೀರಪ್ಪ ಚಿನಿವಾಲರ ಸ್ಥಳೀಯ ನಾಲತವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT