ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹ  

ಸ್ಕೀಮ್‌ ವರ್ಕರ್ಸ್ ಫೆಡರೇಷನ್‌ ಆಫ್‌ ಇಂಡಿಯಾ ಕಾರ್ಯಕರ್ತೆಯರಿಂದ ಪ್ರತಿಭಟನೆ
Last Updated 3 ಅಕ್ಟೋಬರ್ 2020, 11:28 IST
ಅಕ್ಷರ ಗಾತ್ರ

ವಿಜಯಪುರ: ಸ್ಕೀಮ್ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು,ಕನಿಷ್ಠ ವೇತನ ₹ 21 ಸಾವಿರ ನಿಗದಿಪಡಿಸಬೇಕು,ಕಾರ್ಮಿಕ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಎಂದು ಆಗ್ರಹಿಸಿ ಸ್ಕೀಮ್‌ ವರ್ಕರ್ಸ್ ಫೆಡರೇಷನ್‌ ಆಫ್‌ ಇಂಡಿಯಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ಆಶಾ, ಅಂಗನವಾಡಿ, ಬಿಸಿಯೂಟ ಸೇರಿದಂತೆ ಎಲ್ಲ ಸ್ಕೀಮ್ ನೌಕರರನ್ನು ಕಾಯಂ ನೌಕರರೆಂದು ಪರಿಗಣಿಸಿ ಅವರಿಗೆ ವೇತನ, ರಜೆ, ಆರೋಗ್ಯ ಪರಿಹಾರ, ಮುಂಬಡ್ತಿ ಸೌಲಭ್ಯ ಸೇರಿದಂತೆ ಎಲ್ಲ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ನಿವೃತ್ತಿ ಹೊಂದುವ ಸ್ಕೀಮ್ ನೌಕರರಿಗೆ ₹ 5 ಲಕ್ಷ ನಿವೃತ್ತಿ ಇಡಿಗಂಟು ನೀಡಬೇಕು,ಕಾಯಂ ಸರ್ಕಾರಿ ನೌಕರರ ಹಾಗೆಯೇ ಸ್ಕಿಮ್‌ ನೌಕರರು ಕೂಡಾ ವರ್ಷವಿಡೀ ದುಡಿಯುವ ಕಾರಣ ಗೌರವಧನ ಮತ್ತು ಸಹಾಯಧನದ ಹೆಸರಿನಲ್ಲಿ ಇಲ್ಲಿಯವರೆಗೆ ನಡೆದ ಎಲ್ಲ‌ ತಾರತಮ್ಯ ಮತ್ತು ವಂಚನೆಗೆ ಈ ಕೂಡಲೇ ಕೊನೆ ಹಾಡಬೇಕು ಎಂದು ಒತ್ತಾಯಿಸಿದರು.

ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಎಲ್ಲ ಸ್ಕೀಮ್ ನೌಕರರಿಗೆ ಅಗತ್ಯವಿರುವ ಪಿಪಿಇ ಕಿಟ್‍ಗಳನ್ನು ಒದಗಿಸಬೇಕು, ಈ ನೌಕರರು ಕೋವಿಡ್ ಸೋಂಕಿನಿಂದ ಮೃತಪಟ್ಟರೆ ಕೇಂದ್ರ ಸರ್ಕಾರವು ₹ 50 ಲಕ್ಷ ಆರೋಗ್ಯ ವಿಮೆಯನ್ನು ಖಾತ್ರಿ ಪಡಿಸಬೇಕು ಎಂದು ಒತ್ತಾಯಿಸಿದರು.

ಸೇವಾ ಅವಧಿಯಲ್ಲಿ ಮೃತರಾದ ಸ್ಕೀಮ್ ನೌಕರರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಖಚಿತಪಡಿಸಬೇಕು ಎಂದು ಆಗ್ರಹಿಸಿದರು.

ಹೊಸ ಶಿಕ್ಷಣ ನೀತಿ (ಎನ್‍ಇಪಿ)ಯಿಂದ ಅಂಗನವಾಡಿಗಳು ಕ್ರಮೇಣವಾಗಿ ಮುಚ್ಚಿ ಹೋಗಲಿವೆ ಎಂಬ ಆತಂಕ ಎಲ್ಲೆಡೆ ಮನೆ ಮಾಡುತ್ತಿದೆ. ಇದನ್ನು ಪರಿಹರಿಸುವ ಸಲುವಾಗಿ ಅಂಗನವಾಡಿಗಳನ್ನು ಬಲಪಡಿಸಿ, ನೌಕರರಿಗೆ ಸೂಕ್ತ ಮತ್ತು ಸಮರ್ಪಕ ತರಬೇತಿ ನೀಡುವ ಮೂಲಕ ಅವರನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ., ಸ್ಕೀಮ್ ವರ್ಕರ್ಸ್ ಎಂಬ ಹೆಸರಿನಲ್ಲಿ ಬಿಡಿಗಾಸಿಗೆ ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ಈ ನೌಕರರು ಅತ್ಯಂತ ಬಡವರು ಮತ್ತು ಸಮಾಜದ ಅತ್ಯಂತ ತಳಮಟ್ಟದ ಮಹಿಳೆಯರಾಗಿದ್ದಾರೆ ಎಂದರು.

ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ಲಾಕ್‍ಡೌನ್ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರಿಗೆ ಯಾವುದೇ ವೇತನ ಕಡಿತ ಮಾಡುವುದಿಲ್ಲ ಎಂದು ಪದೇಪದೇ ಆಶ್ವಾಸನೆ ಕೊಟ್ಟರೂ ಸಹ ಸ್ಕೀಮ್‌ ವರ್ಕರ್ಸ್‌ಗಳು ವೇತನದಿಂದ ವಂಚಿತರಾಗಿದ್ದೇವೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಭಾರತಿ ದೇವಕತೆ, ಲಕ್ಷ್ಮೀ ಲಕ್ಷಟ್ಟಿ, ನಿಂಗಮ್ಮ ಮಠ, ಮಹಾದೇವಿ ಖ್ಯಾಡಿ, ಶಶಿಕಲಾ ಮ್ಯಾಗೆರಿ, ಸಾವಿತ್ರಿ, ದಾನಮ್ಮ ಕೊಟ್ಯಾಳ, ಜಯಶ್ರೀ ಕಂಬಾರ, ವೆಂಕಮ್ಮ ಗುಜ್ಜಾಲ, ಪಾರ್ವತಿ ಕನ್ನೂರ, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT