ಶನಿವಾರ, ಏಪ್ರಿಲ್ 1, 2023
23 °C
ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

ಕಸಾಪಕ್ಕೆ ಆಗುಂತಕಳಾದ ಮಹಿಳೆ: ಡಾ. ಸರಸ್ವತಿ ಚಿಮ್ಮಲಗಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: 105 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದುವರೆಗೆ 25 ಜನ ಪುರುಷರೇ ಅಧ್ಯಕ್ಷರಾಗಿದ್ದಾರೆ. ಇಷ್ಟು ವರ್ಷಗಳ ಕಾಲ ಮಹಿಳೆಯನ್ನು ಹೊರಗಿಡಲಾಗಿದೆ. ಕಸಾಪಕ್ಕೆ ಮಹಿಳೆ ಆಗುಂತಕಳಾಗಿದ್ದಾಳೆ ಎಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ, ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನದ ಇತಿಹಾಸ ಹೊಂದಿರುವ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಬೆಂಬಲಿಸುವಂತೆ ಮನವಿ ಮಾಡಿದರು.

ಮಹಿಳಾ ಆಸ್ಮಿತೆಯಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಾನು ಮಹಿಳಾ ಮೀಸಲು ಕೇಳುತ್ತಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಬೇಕಾದ ಎಲ್ಲ ಅರ್ಹತೆಗಳು ನನ್ನಲ್ಲಿವೆ. ನಾಡಿನಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕಸಾಪದಲ್ಲಿ ಇರುವ ಲಿಂಗಬೇಧವನ್ನು ಅಳಿಸಿ ಹಾಕಲು ಮತದಾರರು ಈ ಭಾರೀ ನನ್ನನ್ನು ಬೆಂಬಲಿಸಬೇಕು ಎಂದು ಕೋರಿದರು.

ಅಧ್ಯಕ್ಷೆಯಾಗಿ ಆಯ್ಕೆಯಾದರೆ ಕನ್ನಡ ನಾಡು, ನುಡಿ, ನೆಲ,ಜಲ, ಗಡಿ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಕಾಳಜಿವಹಿಸಲಾಗುವುದು. ಸಾಹಿತ್ಯಿಕ ಸಂದರ್ಭದ ಎಲ್ಲ ಹಂತಗಳಲ್ಲಿ ಮಹಿಳೆಯರಿಗೆ ಸಮಾನ ಆದ್ಯತೆ ನೀಡಲಾಗುವುದು. ತಾಲ್ಲೂಕು ಘಟಕಗಳಿಗೂ ಅಧ್ಯಕ್ಷರ ಆಯ್ಕೆ ಸಂಬಂಧ ಪರಿಷತ್ತಿನ ಬೈಲಾದಲ್ಲಿ ತಿದ್ದುಪಡಿ ತರಲಾಗುವುದು ಎಂದರು.

ಐದು ವರ್ಷದ ಆಡಳಿತಾವಧಿಯಲ್ಲಿ ಎರಡು ಸಾಮಾನ್ಯ, ಎರಡು ಮಹಿಳಾ ಮತ್ತು ಒಂದು ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗುವುದು. ನಾಲ್ಕು ವಿಭಾಗಗಳಲ್ಲಿ ಮಹಿಳಾ ಮತ್ತು ದಲಿತ ವಿಶೇಷ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಪರಿಷತ್ತಿಗೂ ಹಾಗೂ ವಿವಿಧ ಅಕಾಡೆಮಿಗಳು, ಸಾಂಸ್ಕೃತಿಕ ಸಂಸ್ಥೆಗಳ ಆತಂಕರಿಕ ಸಂಬಂಧ ಬೆಸೆಯಲು ಆದ್ಯತೆ ನೀಡಲಾಗುವುದು ಎಂದರು.

ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯಮಟ್ಟದಿಂದ ಹಳ್ಳಿಯವರೆಗೆ ಸಾಹಿತ್ಯ ಸರಸ್ವತಿಯನ್ನು ಕೊಂಡೊಯ್ಯಲಾಗುವುದು, ಗಡಿ ನಾಡು ಸಮ್ಮೇಳನಗಳನ್ನು ಆಯೋಜಿಸಲಾಗುವುದು ಹಾಗೂ ಸದಸ್ಯರ ಮತದಾನದ ಹಕ್ಕು ಬೈಲಾ ತಿದ್ದುಪಡಿ ಮಾಡಲಾಗುವುದು ಎಂದರು.

ಕಸಾಪದಲ್ಲಿ 80 ಸಾವಿರ ಮಹಿಳಾ ಮತದಾರರು ಇದ್ದಾರೆ. ಎಲ್ಲರೂ ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು.

ಸಾಹಿತಿಗಳಾದ ವಿ.ಸಿ.ನಾಗಠಾಣ, ಜಂಬುನಾಥ ಕಂಚ್ಯಾಣಿ, ಎಂ.ಜಿ.ಯಾದವಾಡ, ಪ್ರಭಾವತಿ ದೇಸಾಯಿ ಮತ್ತು ಶ್ರೀದೇವಿ ಉತ್ಸಾಸರ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***
ಎಂಜಿನಿಯರಿಂಗ್‌, ಮೆಡಿಕಲ್‌ ಪದವಿಗಳಿಗೂ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಡ್ಡಾಯ ಮಾಡಲು ಕ್ರಮಕೈಗೊಳ್ಳಲಾಗುವುದು.
-ಡಾ. ಸರಸ್ವತಿ ಚಿಮ್ಮಲಗಿ, ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು