ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಾಸು ರಸ್ತೆ ತಡೆ; ಸಂಚಾರ ಅಸ್ತವ್ಯಸ್ತ

ವಕೀಲರ ಬಿಗಿಪಟ್ಟು; ಪೊಲೀಸ್‌ ಕಾನ್‌ಸ್ಟೆಬಲ್‌ ಅಮಾನತು
Last Updated 21 ಸೆಪ್ಟೆಂಬರ್ 2022, 14:40 IST
ಅಕ್ಷರ ಗಾತ್ರ

ವಿಜಯಪುರ: ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಮಹಿಳಾ ವಕೀಲರನ್ನು ವಾರೆಂಟ್‌ ಇಲ್ಲದೇ ಬಂಧಿಸಿ, ಕೋರ್ಟ್‌ಗೆ ಹಾಜರು ಪಡಿಸಿರುವ ಹಾಗೂ ಕಾನೂನು ಬಾಹಿರವಾಗಿ ನಡೆದುಕೊಂಡಿರುವ ಪೊಲೀಸ್‌ ಕಾನ್‌ಸ್ಟೆಬಲ್‌‌ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕೋರ್ಟ್‌ ಕಲಾಪ ಬಹಿಷ್ಕರಿಸಿದ ಜಿಲ್ಲಾ ಸೆಷನ್ಸ್‌ ಕೋರ್ಟ್‌ ವಕೀಲರು ರಸ್ತೆ ತಡೆದು, ಪ್ರತಿಭಟನೆ ನಡೆಸಿದರು.

ನಗರ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಮುಂಭಾಗದ ವಿಜಯಪುರ–ಬಾಗಲಕೋಟೆ ಮುಖ್ಯ ರಸ್ತೆಯನ್ನು ಬುಧವಾರ ವಕೀಲರು ಸುಮಾರು ಮೂರು ತಾಸು ಬಂದ್‌ ಮಾಡಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಅರಸಿದ್ದಿ ಅವರು ವಕೀಲರ ಸಂಘದ ಅಧ್ಯಕ್ಷಈರಣ್ಣ ಚಾಗಶೆಟ್ಟಿ ಮತ್ತು ವಕೀಲರೊಂದಿಗೆ ಮಾತುಕತೆ ನಡೆಸಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರೇ ಬರಬೇಕು ಹಾಗೂ ಮಹಿಳಾ ವಕೀಲರನ್ನು ವಾರೆಂಟ್‌ ಇಲ್ಲದೇ ಹಾಗೂ ಮಹಿಳಾ ಕಾನ್‌ಸ್ಟೆಬಲ್‌ ಇಲ್ಲದೇ ಕಾನೂನುಬಾಹಿರವಾಗಿ ಬಂಧಿಸಿ ಕರೆತಂದಿರುವ ಕಾನ್‌ಸ್ಟೆಬಲ್‌ ಅವರನ್ನು ಕೆಲಸದಿಂದ ಅಮಾನತು ಮಾಡಬೇಕು ಎಂದು ಪ್ರತಿಭಟನಾ ನಿರತ ವಕೀಲರು ಪಟ್ಟು ಹಿಡಿದರು.

ಅಮಾನತು:

ಘಟನೆಯ ಕುರಿತು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಅರಸಿದ್ಧಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರ ಗಮನಕ್ಕೆ ತಂದರು. ಪ್ರಕರಣವನ್ನು ಕುಲಂಕಷವಾಗಿ ಪರಿಶೀಲಿಸಿದ ಬಳಿಕ ಎಸ್‌ಪಿ ಅವರು ಕಾನ್‌ಸ್ಟೆಬಲ್‌ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದರು.

ಕಾನ್‌ಸ್ಟೆಬಲ್‌ ಅಮಾನತು ಮಾಡಿದ ವಿಷಯ ತಿಳಿದ ಬಳಿಕ ವಕೀಲರು ರಸ್ತೆ ತಡೆ ನಿಲ್ಲಿಸಿ, ಕೋರ್ಟ್‌ಗೆ ತೆರಳಿದರು.

ಸಂಚಾರ ಅಸ್ತವ್ಯಸ್ತ:

ಕಾನ್‌ಸ್ಟೆಬಲ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಕೀಲರು ಸುಮರು ಮೂರು ಗಂಟೆ ವಿಜಯಪುರ–ಬಾಗಲಕೋಟೆ ಮುಖ್ಯ ರಸ್ತೆಯನ್ನು ತಡೆದು, ವಾಹನ ಸಂಚಾರಕ್ಕೆ ತಡೆವೊಡ್ಡಿದರು. ಪರಿಣಾಮ ಶಾಲಾ, ಕಾಲೇಜು, ಕಚೇರಿಗೆ ತೆರಳುವ ಹಾಗೂ ದೂರದ ನಗರ, ಪಟ್ಟಣಗಳಿಗೆ ತೆರಳುವ ಬಸ್‌, ಇತರೆ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.

ಗಂಟೆ ಗಟ್ಟಲೇ ರಸ್ತೆಯಲ್ಲಿ ವಾಹನಗಳು ನಿಲ್ಲಬೇಕಾಯಿತು. ಈ ಸಂದರ್ಭದಲ್ಲಿ ತೊಂದರೆಗೆ ಒಳಗಾದ ಸಾರ್ವಜನಿಕರು ವಕೀಲರಿಗೆ ಹಾಗೂ ಪೊಲೀಸರಿಗೆ ಹಿಡಿಶಾಪ ಹಾಕಿದರು.

ವಾಗ್ವಾದ:

ರಸ್ತೆ ತಡೆ ವೇಳೆಯಲ್ಲಿ ನಡುವೆ ಪ್ರವೇಶಿಸಿದ ಸಾರ್ವಜನಿಕರ ವಾಹನಗಳನ್ನು ವಕೀಲರು ತಡೆದರು. ಈ ವೇಳೆ ವಾಗ್ವಾದ ನಡೆಯಿತು. ವರದಿ ಮಾಡಲು ಸ್ಥಳಕ್ಕೆ ತೆರಳಿದ್ದ ಪತ್ರಕರ್ತರ ಬೈಕುಗಳ ಕೀಯನ್ನು ಕಿತ್ತುಕೊಂಡು ವಕೀಲರು ವಾಗ್ವಾದ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಕ್ಷಮೆಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT