ಬುಧವಾರ, ಜೂನ್ 16, 2021
23 °C
ಜಿಲ್ಲಾಧಿಕಾರಿಗಳೊಂದಿಗೆ ಶಾಸಕ ಎಂ.ಬಿ.ಪಾಟೀಲ ಚರ್ಚೆ; ಗ್ರಾಮೀಣ ಪ್ರದೇಶದ ಮನೆ,ಮನೆ ಸರ್ವೆಗೆ ಸೂಚನೆ

ವಿಜಯಪುರದ ತೊರವಿಯಲ್ಲಿ ಕೋವಿಡ್‌ನಿಂದ 71 ಸಾವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ತೊರವಿಯಲ್ಲಿ 71 ಸಾವುಗಳು ಉಂಟಾಗಿದ್ದು, ಅದರಲ್ಲಿ ಕೊರೊನಾ ಶ್ವಾಸಕೋಶಗಳ ತೊಂದರೆ, ಜ್ವರದಿಂದ ಬಳಲಿದವರು 41 ರೋಗಿಗಳು ಸಾವನ್ನಪ್ಪಿದ್ದಾರೆ. ತೊರವಿ ಒಂದು ಗ್ರಾಮದ ಸ್ಥಿತಿ ಹೀಗಿರುವಾಗ ಇಡೀ ಜಿಲ್ಲೆಯ ಎಲ್ಲ ಹಳ್ಳಿಗಳ ಸ್ಥಿತಿ ಹೇಗಿರಬಹುದು ಎಂದು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಶನಿವಾರ ಮನವಿ ಸಲ್ಲಿಸಿ, ಚರ್ಚೆ ನಡೆಸಿದ ಅವರು, ಗ್ರಾಮೀಣ ಜನರ ಮನೆ-ಮನೆ ಸರ್ವೇ ಮಾಡಿ ಅನಾರೋಗ್ಯಕ್ಕೆ ಈಡಾದವರಿಗೆ ರೋಗ ಲಕ್ಷಣಗಳನುಸಾರ ಚಿಕಿತ್ಸೆ ನೀಡಲು ಪ್ರಾರಂಭಿಸುವಂತೆ ಸೂಚಿಸಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಮೊದಲನೆ ಅಲೆಯಲ್ಲಿ ಅಷ್ಟಾಗಿ ಕಂಡುಬರದ ಕೊರೊನಾ ಕಾಯಿಲೆ, 2ನೇ ಅಲೆಯಲ್ಲಿ ಹೆಚ್ಚಾಗಿ ಬಾಧಿಸುತ್ತಿದೆ. ಇದರಿಂದ ಗ್ರಾಮಗಳಲ್ಲಿ ಸರಣಿ ಸಾವುಗಳು ಸಂಭವಿಸುತ್ತಿದ್ದು, ಜನರು ಬಳಲುತ್ತಿದ್ದಾರೆ ಎಂದರು.

ಗ್ರಾಮಗಳಲ್ಲಿ ಒಂದಕ್ಕೊಂದು ಅಂಟಿಕೊಂಡಿರುವ ಮನೆಗಳು, ಚಿಕ್ಕದಾದ ಓಣಿಗಳು, ಮನೆಗಳಲ್ಲಿ ಪ್ರತ್ಯೇಕ ಕೋಣೆಗಳ ಕೊರತೆ, ವ್ಯಾದಿ ಬಗ್ಗೆ ಜನರಲ್ಲಿ ಭಯ, ಮೂಢನಂಬಿಕೆಗಳು, ರೋಗ ಪತ್ತೆ ಪರೀಕ್ಷೆ, ತಜ್ಞ ವೈದ್ಯರ ಬಳಿ ತಪಾಸಣೆ ಬರಲು ಹಣಕಾಸಿನ ತೊಂದರೆ ಇತ್ಯಾದಿ ಕಾರಣಗಳಿಂದ ಬಳಲುತ್ತಿರುವ ಹಲವರು ಚಿಕಿತ್ಸೆಗೆ ಬರುತ್ತಿಲ್ಲ. ಕೆಲವರು ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೆ, ಕೆಲವರು ಸ್ವಯಂ ಲಕ್ಷಣಗಳಿಗನುಸಾರ ಅಂಗಡಿಗಳಲ್ಲಿ ದೊರೆಯುವ ಮಾತ್ರೆಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಕೊರೊನಾ ಕಾಯಿಲೆ ಹರಡುವಿಕೆ ತಪ್ಪಿಸಲು ಜಿಲ್ಲಾಡಳಿತ ವತಿಯಿಂದ ಸ್ಥಳೀಯ ಗ್ರಾಮ ಪಂಚಾಯ್ತಿ ಸಹಯೋಗದಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಿಂದ ಪ್ರತಿ ಮನೆ-ಮನೆ ಸಮೀಕ್ಷೆಯನ್ನು ನಡೆಸಿ, ವ್ಯಕ್ತಿವಾರು ಆರೋಗ್ಯ ಮಾಹಿತಿಯನ್ನು ದಾಖಲಿಸುವುದು. ಇಡೀ ಗ್ರಾಮದ ಅನಾರೋಗ್ಯ ಪೀಡಿತರ ಪಟ್ಟಿ ಸಿದ್ದಪಡಿಸಿ, ರೋಗಲಕ್ಷಣಗಳ ಅನುಸಾರ ಚಿಕಿತ್ಸೆಗೆ ಅಗತ್ಯವಿರುವ ರೋಗಿಗಳನ್ನು ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಬೇಕು ಎಂದರು.

ಎಲ್ಲ ಗ್ರಾಮಗಳನ್ನು ಸ್ಯಾನಿಟೈಜೆಸನ್ ಮಾಡಬೇಕು, ಹೆಚ್ಚು ರೋಗ ಕಂಡುಬರುವ ಓಣಿಗಳಲ್ಲಿ ಡಂಗೂರ ಸಾರಿ ತಿಳಿವಳಿಕೆ ಮೂಡಿಸಬೇಕು, ಹಳ್ಳಿಯಿಂದ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತೆಗೆ ಚಿಕಿತ್ಸೆಗೆ ಬರುವ ಎಲ್ಲ ರೋಗ ಲಕ್ಷಣಗಳಿದ್ದವರಿಗೆ ಸರ್ಕಾರದಿಂದಲೇ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಿಬೇಕು ಎಂದರು.

ಶಾಸಕರ ಮನವಿಗೆ ಸಕಾರಾತ್ಮಕಾವಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ತಮ್ಮ ಸಲಹೆ ಯೋಗ್ಯವಾಗಿದ್ದು, ಸೋಮವಾರದಿಂದಲೇ ನಾವು ಈ ಕುರಿತು ಕಾರ್ಯಪ್ರವೃತ್ತರಾಗುತ್ತೇವೆ ಎಂದರು.

ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋವಿಂದ ರೆಡ್ಡಿ, ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಕುರಿತು ಮಾಹಿತಿ ಇದೆ. ವಿಜಯಪುರ ತಾಲ್ಲೂಕಿನ ಗುಣಕಿ ಹಾಗೂ ಮತ್ತಿತರ ಹಳ್ಳಿಗಳಲ್ಲಿ ಇಂತಹ ಪ್ರಕರಣಗಳು ನನ್ನ ಗಮನಕ್ಕೆ ಬಂದಿದೆ. ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತಗಳಿಂದ 15ನೇ ಹಣಕಾಸು ಅನುದಾನವನ್ನು ಕೊರೊನಾ ನಿಮಿತ್ತ ಬಳಸುವಂತೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಂದ್ರ ಕಾಪಸೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು