ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಗುಮ್ಮಟನಗರಿಯ ಪ್ರವಾಸಿ ಮಾರ್ಗದರ್ಶಿಗಳು

ಲಭಿಸಿದ ಸರ್ಕಾರದ ಕೋವಿಡ್ ಪರಿಹಾರ ಪ್ಯಾಕೇಜ್
Last Updated 17 ಜುಲೈ 2021, 11:04 IST
ಅಕ್ಷರ ಗಾತ್ರ

ವಿಜಯಪುರ: ಗೋಳಗುಮ್ಮಟ, ಇಬ್ರಾಹಿಂರೋಜಾ, ಬಾರಾ ಕಮಾನ್‌ ಸೇರಿದಂತೆಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಬರುವ ದೇಶ, ವಿದೇಶದ ಪ್ರವಾಸಿಗರಿಗೆ ಇಲ್ಲಿಯಇತಿಹಾಸ, ಪರಂಪರೆ, ಮಹತ್ವವನ್ನು ಪರಿಚಯಿಸುವ ‘ಗುಮ್ಮಟನಗರ’ದ ಪ್ರವಾಸಿ ಮಾರ್ಗದರ್ಶಿಗಳ ಬದುಕು ಕೋವಿಡ್‌ನಿಂದ ಅತಂತ್ರವಾಗಿದೆ.

ಸದ್ಯ ಕೋವಿಡ್ ಲಾಕ್‌ಡೌನ್‌ ತೆರವಾಗಿದ್ದರೂ ಸಹ ಸ್ಮಾರಕಗಳ ವೀಕ್ಷಣೆಗೆ ಬರುವವರ ಸಂಖ್ಯೆ ವಿರಳವಾಗಿದೆ. ಅದರಲ್ಲೂ ದೇಶ, ವಿದೇಶದಿಂದ ಯಾರೊಬ್ಬರೂ ಬರುತ್ತಿಲ್ಲ. ಬೆರೆಳೆಣಿಕಿಯಷ್ಟು ಸ್ಥಳೀಯ ಪ್ರವಾಸಿಗರು ಬರುತ್ತಿದ್ದರೂ ಪ್ರವಾಸಿ ಮಾರ್ಗದರ್ಶಿಗಳ ನೆರವನ್ನು ಯಾರೊಬ್ಬರೂ ಪಡೆಯುತ್ತಿಲ್ಲ.

ಪ್ರವಾಸಿಗರನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಪ್ರವಾಸಿ ಮಾರ್ಗದರ್ಶಿಗಳುನಗರದಲ್ಲಿ ಸದ್ಯ ಎಂಟು ಜನ ಇದ್ದಾರೆ. ಕೋವಿಡ್‌ ಪೂರ್ವದಲ್ಲಿ ಪ್ರತಿದಿನ ₹ 500 ರಿಂದ ₹ 1 ಸಾವಿರದ ವರೆಗೂ ಸಂಪಾದಿಸುತ್ತಿದ್ದ ಈ ಪ್ರವಾಸಿ ಮಾರ್ಗದರ್ಶಿಗಳು ಸದ್ಯ ನಯಾ ಪೈಸೆ ಆದಾಯವಿಲ್ಲದೇ ಕುಟುಂಬ ನಿರ್ವಹಣೆಗೂ ಪರದಾಡುತ್ತಿದ್ದಾರೆ.

ರಾಜ್ಯ ಸರ್ಕಾರವು ಪ್ರವಾಸಿ ಮಾರ್ಗದರ್ಶಿಗಳಿಗೆ ತಲಾ ₹ 5 ಸಾವಿರ ಕೋವಿಡ್‌ ಲಾಕ್‌ಡೌನ್‌ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಿದೆ. ಆದರೆ, ಇದುವರೆಗೂ ಲಭಿಸಿಲ್ಲ. ಕೇಂದ್ರ ಸರ್ಕಾರ ₹ 1 ಲಕ್ಷದ ವರೆಗೆ ಸಾಲಸೌಲಭ್ಯ ನೀಡುವುದಾಗಿ ಘೋಷಿಸಿದೆ. ಅದೂ ಸಹ ಇವರ ಪಾಲಿಗೆ ಮರೀಚಿಕೆಯಾಗಿದೆ. ಹೀಗಾಗಿ ದಿಕ್ಕು ತೋಚದಂತಾಗಿದ್ದಾರೆ.

ಸುಧಾಮೂರ್ತಿ ನೆರವು:

ಇನ್ಫೊಸಿಸ್ ಫೌಂಡೇಷನ್‌ ಮುಖ್ಯಸ್ಥೆ ಸುಧಾಮೂರ್ತಿ ಅವರು ಪ್ರವಾಸಿ ಗೈಡ್‌ಗಳಿಗೆ ತಲಾ ₹10 ಸಾವಿರ ಆರ್ಥಿಕ ನೆರವು ನೀಡಿದ್ದಾರೆ. ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರು ಆಹಾರ ಕಿಟ್‌ ನೀಡಿದ್ದಾರೆ. ಇದನ್ನು ಹೊರತು ಪಡಿಸಿ ಪ್ರವಾಸಿ ಮಾರ್ಗದರ್ಶಿಗಳಿಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಸರ್ಕಾರದಿಂದ ಯಾವುದೇ ಸೌಲಭ್ಯ ಲಭಿಸದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಜಯಪುರ ಜಿಲ್ಲಾ ಪ್ರವಾಸಿ ಮಾರ್ಗದರ್ಶಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಶೇಖರ ಎಂ.ಕಲ್ಯಾಣಮಠ,ಹತ್ತಾರು ವರ್ಷಗಳಿಂದಪ್ರವಾಸಿ ಮಾರ್ಗದರ್ಶಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಈ ಕೆಲಸ ಬಿಟ್ಟು ಬೇರೆ ಕೆಲಸ ಬರುತ್ತಿಲ್ಲ. ಮೊದಲು ನಮ್ಮ ಜೀವನ ಚನ್ನಾಗಿಯೇ ಇತ್ತು. ಆದರೆ, ಎರಡು ವರ್ಷದಿಂದ ಕೋವಿಡ್‌ ನಮ್ಮ ಉದ್ಯೋಗವನ್ನೇ ಕಿತ್ತುಕೊಂಡಿದೆ. ಮತ್ತೆ ಮೂರನೇ ಅಲೆ ಬರಲಿದೆ ಎನ್ನುತ್ತಾರೆ. ಹೀಗಾಗಿ ಜನಜೀವನ ಯಾವಾಗ ಸಹಜಸ್ಥಿತಿಗೆ ಬರುತ್ತದೆಯೋ ಎಂಬುದು ಖಚಿತವಿಲ್ಲ. ಪರಿಣಾಮ ನಮ್ಮ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.

ಕುಟುಂಬದ ನಿರ್ವಹಣೆ ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ಮನೆ ಬಾಡಿಗೆ ಪಾವತಿಸಲಾಗುತ್ತಿಲ್ಲ. ಮಕ್ಕಳ ಶಾಲೆ, ಕಾಲೇಜು ಶುಲ್ಕ ಕಟ್ಟಲೂ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಪ್ರವಾಸಿ ಮಾರ್ಗದರ್ಶಿಗಳನ್ನು ಸರ್ಕಾರ ‘ಪ್ರವಾಸಿ ಮಿತ್ರ’ರೆಂದು ನೇಮಕ ಮಾಡಿಕೊಂಡರೆ ಎರಡೂ ಕೆಲಸವನ್ನು ಒಟ್ಟಿಗೆ ಮಾಡುತ್ತೇವೆ. ಕಾರ್ಮಿಕ ಇಲಾಖೆಯಿಂದ ನಮಗೆ ಇಎಸ್ಐ ಸೌಲಭ್ಯ ಕಲ್ಪಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

‘ಕೆಲಸ, ದುಡಿಮೆ ಇಲ್ಲದೇ ಬದುಕು ನಡೆಸುವುದು ಕಷ್ಟವಾಗಿದೆ. ಸರ್ಕಾರ ತಕ್ಷಣ ನಮ್ಮ ನೆರವಿಗೆ ಬರಬೇಕು’ ಎಂದು ಪ್ರವಾಸಿ ಮಾರ್ಗದರ್ಶಿ ಶ್ರೀಮಂತ ಕಟ್ಟಿ ಒತ್ತಾಯಿಸಿದರು.

ಪ್ರವಾಸೋದ್ಯಮದ ರಾಯಭಾರಿಗಳು ನಾವು. ಸ್ಮಾರಕಗಳನ್ನು ಪರಿಚಯಿಸುವುದಕ್ಕೆ ನಾವು ಬೇಕು. ಆದರೆ, ಈಗ ನಮ್ಮಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಅವರು ನೋವಿನಿಂದ ಹೇಳಿದರು.

ಗೋಳಗುಮ್ಮಟದಲ್ಲಿ ಪ್ರವಾಸಿಮಾರ್ಗದರ್ಶಿಗಳು ಒಂದೆಡೆ ಕೂರಲು ಎಲ್ಲಿಯೂ ಜಾಗವಿಲ್ಲ. ಬಿಸಿಲು, ಮಳೆ, ಚಳಿಯಲ್ಲಿ ಬಯಲಿನಲ್ಲೇ ನಿಲ್ಲಬೇಕಾದ ಸ್ಥಿತಿ ಇದೆ. ನಮಗೆ ಪ್ರತ್ಯೇಕ ಸ್ಥಳ ಕಲ್ಪಿಸಬೇಕು ಎಂದರು.

****

ರಾಜ್ಯ ಸರ್ಕಾರ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಎಲ್ಲರ ಮುಂದೆಯೂ ನಮ್ಮ ಸಂಕಷ್ಟ ಹೇಳಿಕೊಂಡಿದ್ದೇವೆ. ಯಾರೊಬ್ಬರಿಂದಲೂ ಸ್ಪಂದನೆ ಸಿಕ್ಕಿಲ್ಲ

–ರಾಜಶೇಖರ ಎಂ.ಕಲ್ಯಾಣಮಠ

ಅಧ್ಯಕ್ಷ, ವಿಜಯಪುರ ಜಿಲ್ಲಾ ಪ್ರವಾಸಿ ಮಾರ್ಗದರ್ಶಿಗಳ ಕ್ಷೇಮಾಭಿವೃದ್ಧಿ ಸಂಘ

****

ಲಾಕ್‌ಡೌನ್‌ ಸಡಿಲಿಕೆಯಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ನಮ್ಮ ಬದುಕು ಮಾತ್ರ ಸ್ವಲ್ಪವೂ ಸುಧಾರಿಸುತ್ತಿಲ್ಲ. ಸಂಕಷ್ಟ ತಪ್ಪುತ್ತಿಲ್ಲ

–ಶ್ರೀಮಂತ ಕಟ್ಟಿ, ಪ್ರವಾಸಿ ಮಾರ್ಗದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT