ಸಿಂದಗಿ: ‘ಪಟ್ಟಣದಲ್ಲಿ ₹2 ಕೋಟಿ ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಾಣಗೊಳ್ಳಲಿದೆ. ಅರಣ್ಯ ಸಚಿವರು ಈಗಾಗಲೇ ₹1ಕೋಟಿ ಮಂಜೂರು ಮಾಡಿದ್ದಾರೆ’ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಇಲ್ಲಿಯ ಹೊನ್ನಪ್ಪಗೌಡ ಬಿರಾದಾರ ಬಡಾವಣೆಯ 2 ಎಕರೆ 36 ಗುಂಟೆಯಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಟ್ರೀಪಾರ್ಕ್ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಪಟ್ಟಣದಲ್ಲಿರುವ ಎಲ್ಲ ಬಡಾವಣೆಗಳಲ್ಲಿ ಹಿರಿಯ ನಾಗರಿಕರು, ಮಕ್ಕಳಿಗಾಗಿ ವಾಯುವಿಹಾರಕ್ಕಾಗಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದರು.
‘ಕಂದಾಯ ಇಲಾಖೆಗೆ ಸಂಬಂಧಿಸಿದ ಇಲ್ಲಿಯ ಹಳೆಯ ಪೊಲೀಸ್ ಠಾಣೆಯ ಜಾಗವನ್ನು ಪುರಸಭೆಗೆ ವರ್ಗಾಯಿಸಿ ಅಲ್ಲಿ ₹27 ಕೋಟಿ ವೆಚ್ಚದಲ್ಲಿ ಮೆಗಾ ಮಾರ್ಕೆಟ್ ನಿರ್ಮಾಣ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ನೂತನ ತಾಲ್ಲೂಕು ಆಡಳಿತ ಸೌಧ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿದೆ. ಕಟ್ಟಡದ ಮೇಲಂತಸ್ತಿನ ಕಾಮಗಾರಿಗಾಗಿ ಹೆಚ್ಚುವರಿ ₹5 ಕೋಟಿ ರೂಪಾಯಿ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಹೊಸ ತಾಲ್ಲೂಕು ಆಡಳಿತ ಸೌಧಕ್ಕೆ ಕಚೇರಿಗಳು ಸ್ಥಳಾಂತರಗೊಂಡ ನಂತರ ಹಳೆಯ ತಾಲ್ಲೂಕು ಆಡಳಿತ ಸೌಧ ಕಟ್ಟಡಕ್ಕೆ ಪುರಸಭೆ ಕಾರ್ಯಾಲಯ ವರ್ಗಾಯಿಸಲಾಗುತ್ತದೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಪ್ರಭು ಸಾರಂಗದೇವ ಶಿವಾಚಾರ್ಯ, ಅರಣ್ಯೀಕರಣಕ್ಕೆ ಆದ್ಯತೆ ನೀಡಬೇಕು ಎಂದರು.