ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಬಗಿ ಗ್ರಾಮ; ನೀಗದ ನೀರಿನ ದಾಹ

ಮಹಿಳಾ ಶೌಚಾಲಯ ಕೊರತೆ, ವಸತಿ ಸಮಸ್ಯೆ, ಮದ್ಯ ಅಕ್ರಮ ಮಾರಾಟ ಅವ್ಯಾಹತ
Published 14 ಆಗಸ್ಟ್ 2024, 5:46 IST
Last Updated 14 ಆಗಸ್ಟ್ 2024, 5:46 IST
ಅಕ್ಷರ ಗಾತ್ರ

ತಾಳಿಕೋಟೆ: ಕುಡಿಯುವ ನೀರಿನ ಸಮಸ್ಯೆ, ಮಹಿಳಾ ಶೌಚಾಲಯ ಕೊರತೆ, ವಸತಿ ಸಮಸ್ಯೆ, ಮದ್ಯ ಅಕ್ರಮ ಮಾರಾಟದಂತಹ ಹಲವು ಸಮಸ್ಯೆಗಳಿಂದ ತಾಲ್ಲೂಕಿನ ತುಂಬಗಿ ಗ್ರಾಮವು ನಲುಗುತ್ತಿದೆ.

ತುಂಬಗಿ ಗ್ರಾಮದಲ್ಲಿ ಐದಾರು ಸಾವಿರ ಜನಸಂಖ್ಯೆ ಹಾಗೂ 1200ರಿಂದ 1500 ಮನೆಗಳಿವೆ. ಗ್ರಾಮಕ್ಕೆ ನೀರಿನ ಮೂಲಗಳಾಗಿ ಐದು ಬಾವಿಗಳು, 15 ಕೊಳವೆಬಾವಿಗಳು, ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಇದ್ದರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ.

‘ಗ್ರಾಮಕ್ಕೆ ಹಲವು ದಶಕಗಳಿಂದ ನೀರಿನ ತಾಪತ್ರಯ ಮುಂದುವರಿದಿದೆ. ಅಧಿಕಾರಿಗಳಿಗೆ ಬರೆದ ಪತ್ರಗಳಿಗೆ ಅವರು ಸ್ಪಂದಿಸಿ ನೀಡಿದ ಪರಿಹಾರ ತಾತ್ಕಾಲಿಕವಾಗಿವೆ. ಶಾಶ್ವತ ಪರಿಹಾರ ನೀಡಿ’ ಎಂದು ಪ್ರಗತಿಪರ ವೇದಿಕೆಯ ರಾಜು ಕುಳಗೇರಿ ಹಾಗೂ ನಿಂಗನಗೌಡ ಬಿರಾದಾರ ಗುರುಸ್ವಾಮಿ ಹಿರೇಮಠ ಆಗ್ರಹಿಸಿದರು.

ಗ್ರಾಮದಲ್ಲಿ 30 ಸಾವಿರ ಮತ್ತು 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್‌ಗಳಿದ್ದರೂ ಅದರಿಂದ ಮನೆಮನೆಗೆ ನೀರು ಪೂರೈಕೆ ಆಗುತ್ತಿಲ್ಲ. ಎರಡು ಶುದ್ಧ ನೀರಿನ ಘಟಕಗಳಿದ್ದರೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಾರ್ವಜನಿಕ ಬಾವಿಯನ್ನು ಖಾಸಗಿ ಜಮೀನಿನಲ್ಲಿ ನಿರ್ಮಿಸಿದ್ದು, ಅವರು ಸ್ವ ಬಳಕೆ ಮಾಡಿಕೊಳ್ಳುತ್ತಿದ್ದು, ಪಂಚಾಯಿತಿಗೆ ಹಸ್ತಾಂತರ ಮಾಡಿಲ್ಲ ಎಂಬ ದೂರಿದೆ.

‘ಹಳೇ ಊರಲ್ಲಿ ನೀರು ವಿತರಣೆಗೆ ಗುಮ್ಮಿಗಳಿವೆ. ಹೆಚ್ಚಿನೆಡೆ ಹಳೆಯ ಪೈಪ್‌ಲೈನ್‌ಗಳಿದ್ದು ಅವು ಬ್ಲಾಕ್ ಆಗಿವೆ. ಎರಡನೆಯ ವಾರ್ಡ್‌ನಲ್ಲಿ ಸಿ.ಸಿ ರಸ್ತೆ ಅಪೂರ್ಣವಾಗಿದೆ. ಇದರಿಂದಾಗಿ ನೀರು ನಿಂತು ಗಲೀಜು, ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತಿವೆ. 15-20 ದಿನಗಳಿಗೊಮ್ಮೆ ನೀರು ಬರುತ್ತಿದೆ’ ಎಂದು ವಕೀಲ ಪ್ರಭಾಕರ ಗುಡುಗುಂಟಿ ಬೇಸರ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ಇಲ್ಲದ್ದರಿಂದ ಮಹಿಳೆಯರು ರಾತ್ರಿ ಹೊತ್ತಲ್ಲಿ, ಮಳೆ ಸಂದರ್ಭದಲ್ಲಿ ಅನುಭವಿಸುವ ಪಡಿಪಾಟಲು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಕರವೇ ಗ್ರಾಮ ಘಟಕದ ಅಧ್ಯಕ್ಷ ಅನಿಲ ಗೋಟಗುಣಕಿ ತಿಳಿಸಿದರು.

‘ಗ್ರಾಮದಲ್ಲಿ 16-20 ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಸಂಬಂಧಿಸಿದವರು ಕ್ರಮ ಜರುಗಿಸುತ್ತಿಲ್ಲ. ಇದರಿಂದ ಪ್ರಾಯದ ಹುಡುಗರು ದಾರಿ ತಪ್ಪುತ್ತಿದ್ದಾರೆ’ ಎನ್ನುವುದು ಹಿರಿಯರ ಚಿಂತೆಯಾಗಿದೆ.

ಗ್ರಾಮದಲ್ಲಿ ವಸತಿ ರಹಿತರ ಬದಲಾಗಿ ಮನೆಯಿದ್ದವರಿಗೇ ಮನೆ ನೀಡಿದ್ದಾರೆ ಎಂಬ ಆರೋಪವೂ ಇದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ತುಂಬಗಿ ಗ್ರಾಮ ಪಂಚಾಯಿತಿ ಪಿಡಿಒ ಮಲ್ಲಿಕಾರ್ಜುನ ದೊಡಮನಿ, ‘ಗ್ರಾಮ ಸ್ವಚ್ಛತೆಗೆ ನಾಲ್ಕು ಊರು ಸೇರಿ ಇಬ್ಬರೇ ಮಹಿಳಾ ಕಾರ್ಮಿಕರಿದ್ದರು. ಈಗ ಇನ್ನಿಬ್ಬರನ್ನು ನೇಮಕ ಮಾಡಿದ್ದೇವೆ. ಸ್ವಚ್ಛತೆ ಕಾರ್ಯ ನಡೆದಿದೆ. ತಕರಾರಿನಿಂದಾಗಿ ಆಶ್ರಯ ಮನೆ ಹಂಚಿಕೆ ನಿಂತಿದೆ. ಈಗ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿರುವ ಪಟ್ಟಿಯನ್ನೇ ಅಂತಿಮ ಮಾಡಿದ್ದೇವೆ. ಹೆಚ್ಚುವರಿ ಮನೆಗಳನ್ನು ಕೇಳಿದ್ದು, ಅದರಲ್ಲಿ ಉಳಿದಿರುವ ಫಲಾನುಭವಿಗಳಿಗೂ ಒದಗಿಸುತ್ತೇವೆ’ ಎಂದರು.

ಜಲಜೀವನ್ ಮಿಷನ್ ಕಾರ್ಯ ಮುಕ್ತಾಯ ಹಂತದಲ್ಲಿದ್ದು ಶೀಘ್ರದಲ್ಲೇ ನೀರಿನ ಸಮಸ್ಯೆ ಪರಿಹಾರವಾಗಲಿದೆ
-ಮಲ್ಲಿಕಾರ್ಜುನ ದೊಡಮನಿ ಪಿಡಿಒ ತುಂಬಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT