ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತವಾಗಿ ಭ್ರೂಣಲಿಂಗ ಪತ್ತೆ; ನಿರ್ಧಾಕ್ಷಿಣ್ಯ ಕ್ರಮ

ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಎಚ್ಚರಿಕೆ
Last Updated 1 ಸೆಪ್ಟೆಂಬರ್ 2021, 14:17 IST
ಅಕ್ಷರ ಗಾತ್ರ

ವಿಜಯಪುರ: ಅನಧಿಕೃತವಾಗಿ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆಯಂತಹ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಆಸ್ಪತ್ರೆಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಎಚ್ಚರಿಕೆ ನೀಡಿದರು.

ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಅಡಿ(ಪಿ.ಸಿ ಮತ್ತು ಪಿ.ಎನ್. ಡಿ.ಟಿ ) ರಚಿಸಲಾದ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾಮಟ್ಟದ ನಿರೀಕ್ಷಣಾ ಮತ್ತು ಮೇಲ್ವಿಚಾರಣಾ ಮಂಡಳಿ ಸಭೆಯಲ್ಲಿಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅನಧಿಕೃತವಾಗಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯಂತಹ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವರ ಮೇಲೆ ಬಗ್ಗೆ ತೀವ್ರ ನಿಗಾ ಇಡಬೇಕು. ವಿವಿಧ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ನಿರೀಕ್ಷಣಾ ಮತ್ತು ಮೇಲ್ವಿಚಾರಣಾ ಮಂಡಳಿ ಸದಸ್ಯರು ಭೇಟಿ ನೀಡಿ ಸ್ಕ್ಯಾನಿಂಗ್ ಸೆಂಟರ್‌ಗಳ ನ್ಯೂನ್ಯತೆಗಳ ಬಗ್ಗೆ ವರದಿ ನೀಡಬೇಕು. ಈ ವರದಿ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಬಾಲಿಕಾ ತಂತ್ರಾಂಶದಲ್ಲಿ ನೋಂದಣಿಯಾದ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ವಿಶೇಷವಾಗಿ 2 ಮತ್ತು 3ನೇ ಮಗುವಿನ ಹೆರಿಗೆಗೆ ಸಂಬಂಧ ಪಟ್ಟಂತೆ ಸೂಕ್ತ ನಿಗಾ ಇಡಬೇಕು ಎಂದರು.

ಗರ್ಭಪಾತಕ್ಕೆ ಸಂಬಂಧ ಪಟ್ಟಂತೆ ಅಧಿಕೃತ ವೈದ್ಯರಿಂದ ಪ್ರಿಸ್‌ಕ್ರಿಪ್ಷನ್ ಇರಬೇಕು. ಅನಧಿಕೃತವಾಗಿ ಗರ್ಭ ಪಾತಕ್ಕೆ ಬಳಸಲಾಗುವ ಈ ಔಷಧಗಳ ಬಗ್ಗೆ ಔಷಧ ನಿಯಂತ್ರಣಾಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಸಭೆಯಲ್ಲಿ ನವೀಕರಣಕ್ಕೆ ಬಂದ 4 ಸ್ಕ್ಯಾನಿಂಗ್ ಸೆಂಟರ್‌ ಮತ್ತು ಹೊಸದಾಗಿ ಬಂದ 5 ಸ್ಕ್ಯಾನಿಂಗ್ ಸೆಂಟರ್ ಮತ್ತು ಈ ಹಿಂದೆ ವಿವಿಧ ನ್ಯೂನತೆಗಳಿಂದ ಬಾಕಿ ಉಳಿದಿರುವ ಅರ್ಜಿಗಳ ಪರಿಶೀಲನೆ ಮತ್ತು ಹೊಸ ಮಷಿನ್ ಖರೀದಿಗಾಗಿ ಬಂದ ಅರ್ಜಿಗಳಿಗೆ ಮಂಜೂರು ನೀಡಲು ಸೂಚಿಸಲಾಯಿತು.

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಕುಮಾರ್ ಯರಗಲ್, ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಎಸ್. ಆರ್. ಮದನೂರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಚೇರ್ಮನ್‌ ಡಾ.ಎಲ್.ಎಚ್.ಬಿದರಿ, ಎನ್.ಜಿ.ಒ ಪ್ರತಿನಿಧಿ ಪೀಟರ್ ಅಲೆಕ್ಸಾಂಡರ್, ಜಿಲ್ಲಾ ಆಸ್ಪತ್ರೆ ರೇಡಿಯಾಲಾಜಿಸ್ಟ್ ಡಾ.ಪಿ.ಬಿ. ದೇವಮಾನೆ ಸಭೆಯಲ್ಲಿ ಉಪಸ್ಥಿತರಿದ್ದರು.

* ಅನುಮಾನಾಸ್ಪದ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಕುಲಂಕಷವಾಗಿ ಪರಿಶೀಲಿ,ಸಾಕ್ಷ್ಯಾಧಾರ ಸಂಗ್ರಹಿಸಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು.

–ಪಿ.ಸುನೀಲ್‌ ಕುಮಾರ್‌, ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT