ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹ: ಫೆ.13ಕ್ಕೆ ಆಶಾ ಕಾರ್ಯಕರ್ತೆಯರಿಂದ ವಿಧಾನ ಸೌಧ ಚಲೋ

Published 4 ಫೆಬ್ರುವರಿ 2024, 14:18 IST
Last Updated 4 ಫೆಬ್ರುವರಿ 2024, 14:18 IST
ಅಕ್ಷರ ಗಾತ್ರ

ವಿಜಯಪುರ: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಬ್ರುವರಿ 13 ಮತ್ತು 14 ರಂದು ‘ವಿಧಾನ ಸೌಧ ಚಲೋ’ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮೂಲೆ ಮೂಲೆಗಳಿಂದ 20 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

‘ಆಶಾ ಕಾರ್ಯಕರ್ತೆಯರ ದುಡಿದ ಹಣಕ್ಕೆ ಕನ್ನ ಹಾಕುವ ಈಗಿರುವ ವೇತನ ಪಾವತಿ ಪ್ರಕ್ರಿಯೆಯನ್ನು ಕೈಬಿಡಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸೇರಿಸಿ ಮಾಸಿಕ ವೇತನ ₹15 ಸಾವಿರ ನಿಗದಿ ಮಾಡಬೇಕು’ ಎಂದು ಆಗ್ರಹಿಸಿದರು. 

‘ಆಶಾಗಳನ್ನು ವಂಚಿಸುತ್ತಿರುವ ಆರ್.ಸಿ.ಎಚ್ ಪೋರ್ಟಲ್‍ ಅನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಡಿ–ಲಿಂಕ್ ಮಾಡಬೇಕು, ಪ್ರೋತ್ಸಾಹಧನವಿಲ್ಲದ ಹೆಚ್ಚುವರಿ ಕೆಲಸಗಳನ್ನು ಹಾಗೂ ಮೊಬೈಲ್‍ ಆಧಾರಿತ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ನೀಡಬಾರದು, ಹಲವು ವರ್ಷಗಳಿಂದ ಬಾಕಿಯಿರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಮುಂತಾದ ಬೇಡಿಕೆಗಳಿಗಾಗಿ ಆಗ್ರಹಿಸಿ ಈ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನ ಸೌಧ ಚಲೋದಲ್ಲಿ ಭಾಗವಹಿಸಿ, ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಎ.ಐ.ಯು.ಟಿ.ಯು.ಸಿ ಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಟಿ ಮಲ್ಲಿಕಾರ್ಜುನ ಸಂಘಟನಾಕಾರ ಎಚ್.ಟಿ.  ಭರತಕುಮಾರ  ಹಾಗೂ ಆಶಾ ಮುಖಂಡರಾದ ಭಾರತಿ ದೇವಕತೆ, ಅಂಬಿಕಾ ವಳಸಂಗ, ಜ್ಯೋತಿ ಅಂಬಲಿ, ಲಕ್ಷ್ಮಿ ಸೀಮಿಕೇರಿ, ಲೈಲಾ, ಕಾಶಿಬಾಯಿ, ಜ್ಯೋತಿ, ಸುಮಂಗಲಾ, ಗೀತಾ, ಸಾವಿತ್ರಿ, ಸಂಗಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT