ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಸೂರ್ಯಗ್ರಹಣಕ್ಕೆ ಮೋಡದ ಮರೆ; ವೀಕ್ಷಣೆಗೆ ತಡೆ

ಸನ್‍ಫಿಲ್ಟರ್‌ ಮೂಲಕ ಗ್ರಹಣ ವೀಕ್ಷಣೆ; ಹಣ್ಣು ಸೇವನೆ; ದೇವಸ್ಥಾನ, ಮಠ, ಮಂದಿರಗಳ ಬಾಗಿಲು ಬಂದ್‌
Last Updated 21 ಜೂನ್ 2020, 12:44 IST
ಅಕ್ಷರ ಗಾತ್ರ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದ ಕಾರಣ ಕಂಕಣ ಸೂರ್ಯಗ್ರಹಣದ ಅಪರೂಪದ ದೃಶ್ಯವನ್ನು ಪೂರ್ಣವಾಗಿ ಕಣ್ತುಂಬಿಕೊಳ್ಳಲು ಆಗದೇ ಜನರು ನಿರಾಶರಾದರು.

ಗ್ರಹಣದ ಹಿನ್ನೆಲೆಯಲ್ಲಿ ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕ್ಷೀಣವಾಗಿತ್ತು. ದೇವಸ್ಥಾನ, ಮಠ, ಮಂದಿರಗಳ ಬಾಗಲು ಬಂದ್‌ ಆಗಿತ್ತು. ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿಲ್ಲ. ಕೆಲವರು ತಮ್ಮ ಮನೆಯ ಕಿಟಕಿ, ಬಾಗಿಲನ್ನು ಸಂಪೂರ್ಣ ಮುಚ್ಚಿ, ಮನೆಯೊಳಗೆ ಕುಳಿತಿರುವುದು ಕಂಡುಬಂದಿತು.

ಸಂಪ್ರದಾಯಸ್ಥರು ಉಪವಾಸ ಮಾಡಿದರು. ಬಹುತೇಕರು ಗ್ರಹಣ ಆರಂಭಕ್ಕೂ ಮೊದಲೇ ಸ್ನಾನ, ಉಪಹಾರ ಮುಗಿಸಿ ದೇವರ ಸ್ತುತಿಯಲ್ಲಿ ನಿರತವಾಗಿದ್ದರು. ಗ್ರಹಣ ಮೋಕ್ಷವಾದ ಬಳಿಕ ಮನೆಯನ್ನು ಶುಚಿಗೊಳಿಸಿ, ಸ್ನಾನ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಗರಿಕೆ, ತುಳುಸಿಯನ್ನು ಕೊಂಡೊಯ್ದು ಮನೆಯಲ್ಲಿ ಕುಡಿಯುವ ನೀರು, ಆಹಾರ ಪದಾರ್ಥಗಳಿಗೆ ಸೇರ್ಪಡೆ ಮಾಡಿ ಯಾವುದೇ ದೋಷವಾಗದಂತೆ ಶುಚಿಗೊಳಿಸುವ ಮೂಲಕ ಸಂಪ್ರದಾಯ ಪಾಲಿಸಿದರು.

ಗ್ರಹಣದ ದಿನದಂದೇ ಮಣ್ಣೆತ್ತಿನ ಅಮವಾಸ್ಯೆ, ಭಾನುವಾರದ ರಜೆ, ವಿಶ್ವ ಅಪ್ಪಂದಿಯರ ದಿನ ಒಟ್ಟೊಟ್ಟಿಗೆ ಬಂದಿರುವುದು ಈ ಬಾರಿಯ ವಿಶೇಷವಾಗಿತ್ತು.

ಬ್ರೇಕ್‍ಥ್ರೂ ಸೈನ್ಸ್ ಸೊಸೈಟಿ:

ವಿಜಯಪುರ ಹಾಗೂ ಬಬಲೇಶ್ವರದಲ್ಲಿ ಬ್ರೇಕ್‍ಥ್ರೂ ಸೈನ್ಸ್ ಸೊಸೈಟಿ ವತಿಯಿಂದ ಪ್ರಕೃತಿಯ ವಿಸ್ಮಯವಾದ ಸೂರ್ಯಗ್ರಹವನ್ನು ಗುಣಮಟ್ಟದ ಸನ್‍ಫಿಲ್ಟರ್‌ಗಳ ಮೂಲಕ ವೀಕ್ಷಣೆ ಮಾಡಿ ಸಂಭ್ರಮಿಸುವುದರ ಜೊತೆಗೆ ಹಣ್ಣುಗಳನ್ನು ಸೇವಿಸುವುದರ ಮೂಲಕ ಮೂಢನಂಬಿಕೆಗಳಿಗೆ ವಿದಾಯ ಹೇಳಿದರು.

ಬ್ರೇಕ್‍ಥ್ರೂ ಸೈನ್ಸ್ ಸೊಸೈಟಿಯ ಸಂಚಾಲಕ ಶರತ್ ಕೆ.ಪಿ.ಮಾತನಾಡಿ, ಗ್ರಹಣದ ಕುರಿತ ಹಳೆಯ ನಂಬಿಕೆಗಳು ಜನತೆಯನ್ನು ಗೊಂದಲಕ್ಕೀಡುಮಾಡುತ್ತಿವೆ. ಗ್ರಹಣ ನೈಸರ್ಗಿಕ ಪ್ರಕ್ರಿಯೆಯ ಭಾಗ. ಯಾವುದೇ ಭಯವಿಲ್ಲದೇ ಗ್ರಹಣದ ವೇಳೆ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಬಹುದು, ಪ್ರಯಾಣ ಮಾಡಬಹುದು, ಆಹಾರ ಸೇವಿಬಹುದು, ಇದಕ್ಕೆ ಯಾವುದೇ ತೊಂದರೆ ಇಲ್ಲ. ಆದ್ದರಿಂದ ಜನತೆ ಮೂಢನಂಬಿಕೆ, ಕಂದಾಚಾರಗಳಿಗೆ ಬಲಿಯಾಗದೇ ವೈಜ್ಞಾನಿಕ ಚಿಂತನಾ ಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂದರು.

ಕೆಲವು ಜ್ಯೋತಿಷಿಗಳು ತಮ್ಮ ಲಾಭಕ್ಕಾಗಿ ಟಿ.ವಿ ಮಾಧ್ಯಮಗಳನ್ನು ಬಳಸಿಕೊಂಡು ಗ್ರಹಣದ ಕುರಿತಾಗಿ ಮೂಢನಂಬಿಕೆಗಳನ್ನು ಬಿತ್ತುತ್ತಿರುವುದು ವಿಷಾದನೀಯ. ವಿಜ್ಞಾನ,ತಂತ್ರಜ್ಞಾನ ಎಷ್ಡೇ ಮುಂದುವರೆದರೂ ವಿದ್ಯಾರ್ಥಿ, ಯುವಕರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದರು.

ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು; ನಿರ್ದಿಷ್ಠ ಉಪಕರಣಗಳ ಮೂಲಕ ವೀಕ್ಷಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಕಾವೇರಿ, ಆಕಾಶ, ಸುನೀಲ್, ಅನುಶ್ರೀ, ಪ್ರೇಮಾ ಮತ್ತಿತರರು ಭಾಗವಹಿಸಿದ್ದರು.

ಅಗಸ್ತ್ಯಾ ಪ್ರತಿಷ್ಠಾನ:

ಅಗಸ್ತ್ಯಾ ಅಂತರರಾಷ್ಟ್ರೀಯ ಪ್ರತಿಷ್ಠಾನದಿಂದ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಗ್ರಹಣದ ಕುರಿತು ಬಂಜಾರ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಎಸ್.ವಿ.ಬುರ್ಲಿ ಮಾತನಾಡಿದರು.

ವಿಜ್ಞಾನ ಶಿಕ್ಷಕ ರಾಘವೇಂದ್ರ ವಿಸಾಳೆ ಗ್ರಹಣ ಕುರಿತಾದ ಪ್ರಾತ್ಯಕ್ಷೆ ತೋರಿಸಿದರು. ಮುಖ್ಯ ಶಿಕ್ಷಕ ಜಯ ಪ್ರಕಾಶ ಗ್ರಹಣದ ಸಂದರ್ಭದಲ್ಲಿ ಆಚರಣೆಯಲ್ಲಿರುವ ಮೂಢನಂಬಿಕೆಗಳ ಬಗ್ಗೆ ತಿಳಿಸಿದರು.

ಜಿಲ್ಲಾ ವಿಜ್ಞಾನ ಕೇಂದ್ರದ ಸಂಚಾಲಕ ಚಂದ್ರಶೇಖರ ಅಣಮಿ ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಸಿಬ್ಬಂದಿ ಪಾಲ್ಗೊಂಡಿದ್ದರು.

ಕಂಕಣ ಸೂರ್ಯ ಗ್ರಹಣ; ಶಾಂತಿ ಹೋಮ

ವಿಜಯಪುರ: ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಂಕಣ ಸೂರ್ಯ ಗ್ರಹಣ ಪ್ರಯುಕ್ತ ಗ್ರಹಣ ಶಾಂತಿ ಏರ್ಪಡಿಸಲಾಗಿತ್ತು.

ಗ್ರಹಣ ಸಮಯದಲ್ಲಿ ಸ್ನಾನ, ಜಪ, ದಾನ, ತರ್ಪಣ ಅನುಷ್ಠಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳು ತಮ್ಮ ರಾಶಿ ದೋಷದ ಪರಿಹಾರಾರ್ಥವಾಗಿ ಶಾಂತಿ ಹೋಮದಲ್ಲಿ ಪಾಲ್ಗೊಂಡಿದ್ದರು.

ಶ್ರೀಮಠದ ಅರ್ಚಕ ರವಿ ಆಚಾರ್ಯ, ಶ್ರೀಧರಾಚಾರ್ಯ, ಪವಮಾನ ಜೋಶಿ(ಮತ್ತಗಿ) ಶ್ರೀಧರ ಜೋಶಿ ನೇತೃತ್ವದಲ್ಲಿ ಹೋಮ ಹವನಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT