ದೇವರಹಿಪ್ಪರಗಿ: ಸರ್ಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು. ಸಾರ್ವಜನಿಕ ಸೇವೆಯಲ್ಲಿ ಯಾವುದೇ ರೀತಿಯ ತೊಂದರೆಗಳಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.
ಪಟ್ಟಣಕ್ಕೆ ಗುರುವಾರ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿ, ನೂತನ ಪಟ್ಟಣ ಪಂಚಾಯತಿ ಕಟ್ಟಡ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಮಾತನಾಡಿದರು.
ಸರ್ಕಾರ ಸಾರ್ವಜನಿಕರ ಸೇವೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇವುಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಅಧಿಕಾರಿಗಳ ಪಾತ್ರ ಹಿರಿದಾದುದಾಗಿದೆ. ಅದರ ಜೊತೆಯಲ್ಲಿ ಪ್ರಮುಖ 5 ಗ್ಯಾರಂಟಿ ಯೋಜನೆಗಳ ಕುರಿತು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು. ಅರ್ಹ ಎಲ್ಲ ಫಲಾನುಭವಿಗಳಿಗೆ ತಲುಪುವಂತಾಗಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದರು.
ಇನ್ನು ಮಿನಿ ವಿಧಾನಸೌಧ ನಿರ್ಮಿಸಲು ಎರಡು ಕಡೆ ಸ್ಥಳಾವಕಾಶ ಪರಿಶೀಲಿಸಲಾಗಿದೆ. ಹಂತ ಹಂತವಾಗಿ ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಕೊಳ್ಳಲಾಗುವುದು. ಪಟ್ಟಣ ಪಂಚಾಯಿತಿ ಕಟ್ಟಡ ಹಾಗೂ ಇನ್ನಿತರ ಸರ್ಕಾರಿ ಕಟ್ಟಡ ಕಾಮಗಾರಿ ಬೇಗ ಮುಗಿಸುವಂತೆ ಸಂಬಂಧಿಸಿದ ಇಲಾಖೆಯವರಿಗೆ ಸೂಚಿಸಲಾಗುವುದು. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಬಂದಾಗ ಅಧಿಕಾರಿಗಳಿಗೆ ಸಹಕಾರ ನೀಡಬೇಕೆಂದರು.
ರೈತ ಸಂಪರ್ಕ ಕೇಂದ್ರ, ನೆಮ್ಮದಿ ಕೇಂದ್ರ ಸೇರಿದಂತೆ ವಿವಿಧ ಕಡೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ರೈತಸಂಘದ ಪ್ರಮುಖರು ಸೇರಿದಂತೆ ಸಾರ್ವಜನಿಕರು ನೀರಾವರಿ ಹಾಗೂ ಮೂತ್ರಾಲಯಗಳ ನಿರ್ಮಾಣದ ಕುರಿತು ತಮ್ಮ ಅಹವಾಲು ಸಲ್ಲಿಸಿದರು.
ತಹಶೀಲ್ದಾರ್ ಪ್ರಕಾಶ ಸಿಂದಗಿ, ಕೃಷಿ ಅಧಿಕಾರಿ ಎಚ್.ವೈ.ಸಿಂಗೇಗೋಳ, ಇಂದಿರಾ ಬಳಗಾನೂರ, ಡಾ.ಯೋಗೇಶ, ಬಸವರಾಜ ಜಗಳೂರ, ಎನ್.ಎಸ್.ಭೂಸಗೊಂಡ, ಡಾ.ವೀಣಾ ಮದರಖಂಡಿ, ಪಿ.ಆರ್.ಉಮಚಗಿಮಠ, ರಾಮನಗೌಡ ಪಾಟೀಲ, ದಯಾನಂದ ಸಜ್ಜನ, ರಮೇಶ ವಾಲೀಕಾರ, ಅಕ್ಷತಾ ಹೊಂಗಲ, ಗಿರೀಶ ಕಟಕದೊಂಡ, ಐ.ಎಸ್.ಟಕ್ಕೆ, ಎಸ್.ಎಸ್.ಕತ್ನಳ್ಳಿ, ಎಲ್.ಡಿ.ಮುಲ್ಲಾ, ಗೀತಾ ಎಂ, ದಿಲೀಪಸಿಂಗ ದಶವಂತ, ಮಹಿಪತಿ ದೇಸಾಯಿ ಸೋಮಶೇಖರ ತಾವರಖೇಡ, ಸುಧೀಂದ್ರಕುಮಾರ ಗುಮಾಸ್ತೆ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.