ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಚಿಕಿತ್ಸೆಗೆ ವಾರ್‌ರೂಂ ಆರಂಭ ಶೀಘ್ರ

ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿಕೆ
Last Updated 17 ನವೆಂಬರ್ 2020, 12:28 IST
ಅಕ್ಷರ ಗಾತ್ರ

ವಿಜಯಪುರ: ಜಾನುವಾರುಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ವಾರ್‌ರೂಂ ಆರಂಭಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಸಿಗುತ್ತಿಲ್ಲ ಎಂದು ರೈತರಿಂದ ದೂರುಗಳು ಕೇಳಿಬಂದಿವೆ. ಕಾರಣ ರೈತರ ದೂರುಗಳಿಗೆ ಸ್ಪಂದಿಸುವ ಉದ್ದೇಶದಿಂದ ವಾರ್‌ರೂಂ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.

ವಾರ್‌ರೂಂ ಸಹಾಯವಾಣಿಗೆ ರೈತರಿಂದ ಬರುವ ದೂರವಾಣಿ ಕರೆಗಳನ್ನು ಸ್ವೀಕರಿಸಿ, ಸಂಬಂಧಿಸಿದ ವೈದ್ಯರಿಗೆ ಮಾಹಿತಿ ರವಾನಿಸಿ, ಚಿಕಿತ್ಸೆ ನೀಡಲು ಸ್ಥಳಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

ಜಾನುವಾರುಗಳ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಬಸವ ಸಂಜೀವಿನಿ ಆಂಬುಲೆನ್ಸ್‌ ಸೇವೆ ಆರಂಭಿಸಲಾಗಿದೆ. ಈಗಾಗಲೇ ರಾಜ್ಯದ 15 ಜಿಲ್ಲೆಗಳಿಗೆ ಆಂಬುಲೆನ್ಸ್‌ ಒದಗಿಸಲಾಗಿದ್ದು, ಉಳಿದ ಜಿಲ್ಲೆಗಳಿಗೂ ಶೀಘ್ರದಲ್ಲೇ ಆಂಬುಲೆನ್ಸ್‌ ಒದಗಿಸಲಾಗುವುದು ಎಂದು ತಿಳಿಸಿದರು.

ಖಾಲಿ ಹುದ್ದೆ ಭರ್ತಿ:

ಪಶು ಸಂಗೋಪನಾ ಇಲಾಖೆಯಲ್ಲಿ ಒಟ್ಟು 18 ಸಾವಿರ ಅನುಮೋದನೆಗೊಂಡಿರುವ ಹುದ್ದೆಗಳಲ್ಲಿ ಸದ್ಯ ಕೇವಲ 9 ಸಾವಿರ ಹುದ್ದೆಗಳು ಭರ್ತಿ ಇದ್ದು, ಉಳಿಕೆ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾವು ಸಚಿವರಾರ ಬಳಿಕ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ರಚನೆ ಮಾಡಲಾಗಿದೆ. ಜೊತೆಗೆ ಪಶು ಆಸ್ಪತ್ರೆಗಳ ಆವರಣದಲ್ಲಿ 30 ಸಾವಿರ ಸಸಿಗಳನ್ನು ನೆಡಲಾಗಿದೆ. ಜಾನುವಾರುಗಳಿಗೆ ಕಾಲು ಬಾಯಿ ರೋಗಕ್ಕೆ ಅಗತ್ಯ ಚಿಕಿತ್ಸೆ ಹಾಕಲಾಗಿದೆ ಎಂದು ಹೇಳಿದರು.

ಅಥಣಿ ಸೇರಿದಂತೆ ರಾಜ್ಯದ ವಿವಿಧೆಡೆ ಪಶುಸಂಗೋಪನಾ ಕಾಲೇಜುಗಳ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಪ್ರಾಣೇಶ ಜಹಗೀರದಾರ್‌ ಮಾತನಾಡಿ, ವಿಜಯಪುರ ನಗರದಲ್ಲಿ ಬಿಡಾಡಿ ದನಕರುಗಳ ನಿಯಂತ್ರಣಕ್ಕಾಗಿ ಈಗಾಗಲೇ ಅವುಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ದನಕರುಗಳನ್ನು ರಸ್ತೆಗ ಬಿಡದೇ ಮನೆಯಲ್ಲೇ ಕಟ್ಟಿಕೊಳ್ಳಲು ಸೂಚಿಸಲಾಗಿದೆ. ಇಲ್ಲವಾದರೆ ಅವುಗಳನ್ನು ಹಿಡಿದು ಗೋಶಾಲೆಗಳಿಗೆ ಸಾಗಾಟ ಮಾಡಲಾಗುವುದು ಎಂದು ಹೇಳಿದರು.

ನೆರೆ ಮತ್ತು ಮಳೆಯಿಂದ ಜಿಲ್ಲೆಯಲ್ಲಿ 20 ಜಾನುವಾರುಗಳು ಸಾವಿಗೀಡಾಗಿದ್ದು, ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು.

ಕಗ್ಗೊಡು ಗೋಶಾಲೆಗೆ ಭೇಟಿ:

ಕಗ್ಗೊಡು ಗೋಶಾಲೆಗೆ ಪಶುಸಂಗೋಪನಾ ಸಚಿವ ಪ್ರಭುಚವ್ಹಾಣಭೇಟಿ ನೀಡಿ, ಗೋಪೂಜೆ ನೆರವೇರಿಸಿ, ಗೋಶಾಲೆ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಸೋಮಗೌಡ ಪಾಟೀಲ ಸಾಸನೂರ, ತಹಶೀಲ್ದಾರ್‌ ಮೋಹನ ಕುಮಾರಿ, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ದೇಸಾಯಿ, ಇಲಾಖೆ ಆಯುಕ್ತ ಬಸವರಾಜೇಂದ್ರ, ಕೆಎಂಎಫ್ ಅಧ್ಯಕ್ಷ ಸಂಭಾಜಿ ಮಿಸಾಳೆ, ಕೆಎಂಎಫ್ ನಿರ್ದೇಶಕರಾದ ಎಸ್.ಬಿ ಪಾಟೀಲ, ಸಿದ್ಧಣ್ಣ ಕಡಪಟ್ಟಿ, ಕರಿಗೌಡರ, ಗುರು ಚಲವಾದಿ, ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜೀವ ದಿಕ್ಷೀತ್ ಇದ್ದರು.

ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆಗೆ ಸೂಚನೆ

ವಿಜಯಪುರ: ಜಾನುವಾರುಗಳ ಚಿಕಿತ್ಸೆಗೆ ಸಂಬಂಧಪಟ್ಟಂತೆ ಪಶುವೈದ್ಯರು ಗ್ರಾಮಗಳಿಗೆ ಭೇಟಿ ನೀಡಿ, ಸಕಾಲಕ್ಕೆ ಸ್ಪಂದಿಸುವಂತೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಸೂಚನೆ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳ ಪಶುವೈದ್ಯಕೀಯ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರೊಂದಿಗೆ ಮಂಗಳವಾರ ನಡೆದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

ಜಾನುವಾರುಗಳಿಗೆ ಕಾಲುಬಾಯಿ ರೋಗ ಚಿಕಿತ್ಸೆ, ಪಶು ಸಂಜೀವಿನಿ ಮೊಬೈಲ್ ವ್ಯಾನ್ ಮೂಲಕ ಶಸ್ತ್ರಚಿಕಿತ್ಸೆಗೆ ಸೂಕ್ತ ನೆರವು, ರೈತರಿಂದ ಪೂರೈಸಲಾಗುವ ಹಾಲಿಗೆ ಸಕಾಲಕ್ಕೆ ಪ್ರೋತ್ಸಾಹ ಧನ ನೀಡುವಂತೆ ತಿಳಿಸಿದರು.

ಜಾನುವಾರುಗಳಿಗೆ ಕೃತಕ ಗರ್ಭಧಾರಣೆ, ಕಾಲು ಬಾಯಿ ಬೇನೆಗೆ ಸೂಕ್ತ ಚಿಕಿತ್ಸೆ, ಆರೋಗ್ಯ ಶಿಬಿರ, ರೈತರಿಗೆ ತರಬೇತಿ, ಗೋಶಾಲೆಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿದರು.

ರೈತರಿಗೆ ಮೇವಿನ ಕಿಟ್‍ಗಳ ವಿತರಣೆ, ಔಷಧ ವಿತರಣೆ ಸೇರಿದಂತೆ ಇಲಾಖೆಯ ಇತರೆ ಕಾರ್ಯಕ್ರಮಗಳ ಬಗ್ಗೆ ಪರಿಶೀಲಿಸಿ ಅತ್ಯುತ್ತಮ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ವಕ್ಫ್ ಅಧಿಕಾರಿಗಳೊಂದಿಗೆ ಚರ್ಚೆ

ಜಿಲ್ಲಾ ವಕ್ಪ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು ಯಾವುದೇ ಪರಿಸ್ಥಿತಿಯಲ್ಲಿ ವಕ್ಫ್ ಆಸ್ತಿ ಒತ್ತುವರಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿಗಳ ವಿವರ, ಸರ್ವೇ ಮಾಹಿತಿ, ವಿವಿಧ ಸಂಸ್ಥೆಗಳಿಗೆ ಸಾಲ ಸೌಲಭ್ಯ, ಲೀಸ್‍ಗೆ ನೀಡಿದ ಆಸ್ತಿಗಳ ವಿವರ ಸೇರಿದಂತೆ ಇನ್ನೀತರ ವಿಷಯಗಳ ಬಗ್ಗೆ ವಕ್ಫ್ ಅಧಿಕಾರಿಗಳಿಂದ ಮಾಹಿತಿ ಪಡೆದರು.

****

ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂದಿನ ಅಧಿವೇಶನದಲ್ಲಿ ಕಾಯ್ದೆಯನ್ನು ಮಂಡಿಸಿ, ಅನುಮೋದನೆ ಪಡೆದುಕೊಳ್ಳಲಾಗುವುದು
ಪ್ರಭು ಚವ್ಹಾಣ, ಸಚಿವ, ಪಶುಸಂಗೋಪನಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT