ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ ತಾಲ್ಲೂಕಿನ 18 ಕೆರೆಗಳಿಗೆ ನೀರು

ಜನ, ಜಾನುವಾರುಗಳಿಗೆ ಕುಡಿಯಲು ಮೀಸಲು
Published 22 ಫೆಬ್ರುವರಿ 2024, 16:09 IST
Last Updated 22 ಫೆಬ್ರುವರಿ 2024, 16:09 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಆಗದಂತೆ ಆಲಮಟ್ಟಿ ಜಲಾಶಯದಿಂದ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದ್ದು ಅದನ್ನು ಕೃಷಿಗೆ ಬಳಸದೇ ಇರುವಂತೆ ರೈತರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ತಾಲ್ಲೂಕು ಉಸ್ತುವಾರಿ ಅಧಿಕಾರಿ ಶಂಕರಗೌಡ ಸೋಮನಾಳ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಕುಡಿಯುವ ನೀರು ಹಾಗೂ ತಾಲ್ಲೂಕುಮಟ್ಟದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

‘ಕೆರೆಗಳಿಗೆ ನೀರು ಹರಿಸಲಾಗಿದೆ ಎಂದು ಹೇಳುತ್ತಿದ್ದೀರಿ. ನೀವು ಹೋಗಿ ಕೆರೆ ತುಂಬಿದೆಯೇ ಇಲ್ಲವೇ ಎಂಬುದನ್ನು ವೀಕ್ಷಿಸಬೇಕು. ಅಲ್ಲಿ ನಿಯೋಜಿಸಿದ ಸಿಬ್ಬಂದಿಯಿಂದಲಾದರೂ ಮಾಹಿತಿ ತರಿಸಿಕೊಂಡು ಕುಡಿಯುವ ಉದ್ದೇಶಕ್ಕೆ ಮಾತ್ರ ಸದ್ಯಕ್ಕೆ ಬಿಟ್ಟಿರುವ ನೀರು ಉಪಯೋಗವಾಗುವಂತೆ ನೋಡಿಕೊಳ್ಳಬೇಕು’ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗೆ ಸೂಚಿಸಿದರು.

ಕೆಬಿಜೆಎನ್‌ಎಲ್ ಅಧಿಕಾರಿ ಶಿವಾಜಿ ಬಿರಾದಾರ ಮಾತನಾಡಿ, ‘ಫೆ. 20 ರಿಂದ 25ರವರೆಗೆ ಆರು ದಿನಗಳ ಕಾಲ ಚಿಮ್ಮಲಗಿ ಪೂರ್ವಕಾಲುವೆಯ ಮೂಲಕ ಮುದ್ದೇಬಿಹಾಳ ತಾಲ್ಲೂಕು ಸರೂರು, ನೆರಬೆಂಚಿ, ಕವಡಿಮಟ್ಟಿ, ಜಲಪುರ, ಅಡವಿ ಹುಲಗಬಾಳ, ಅರಸನಾಳ, ಹೊಕ್ರಾಣಿ ,ಜಕ್ಕೇರಾಳ ಸೇರಿ ಹತ್ತು ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್‌ 5 ರಿಂದ 10ರವರೆಗೆ ಮಾದಿನಾಳ, ಗೆದ್ದಲಮರಿ, ಮಲಗಲದಿನ್ನಿ, ಬಳಗಾನೂರ, ಹಿರೂರು-ತಮದಡ್ಡಿ, ವನಹಳ್ಳಿ, ಪಡೇಕನೂರು ಸೇರಿ ಏಳು ಕೆರೆಗಳಿಗೆ ನೀರು ತುಂಬಿಸಲಾಗುವುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧೀನದಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗಳನ್ನು, ಕುಡಿವ ನೀರಿನ ಟ್ಯಾಂಕ್‌ಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಬೇಕು. ಅದರ ಬಗ್ಗೆ ವರದಿ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿ ವೀರೇಶ ಹೂಗಾರ ಅವರಿಗೆ ತಿಳಿಸಿದರು.

ತಾಳಿಕೋಟಿ ಭಾಗದಲ್ಲಿ ಫ್ಲೋರೈಡ್‌ಯುಕ್ತ ನೀರಿನ ಸಮಸ್ಯೆ ಇದ್ದು ಅದರ ಬಗ್ಗೆ ಜಾಗೃತಿ ಮೂಡಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೋಮನಾಳ ಸೂಚಿಸಿದರು.

ಇನ್ನುಳಿದಂತೆ ಶಿಶು ಅಭಿವೃದ್ಧಿ, ಸಾರಿಗೆ, ಕೃಷಿ, ಹೆಸ್ಕಾಂ, ತೋಟಗಾರಿಕೆ, ಶಿಕ್ಷಣ, ಆರೋಗ್ಯ ಇಲಾಖೆಗಳ ಪ್ರಗತಿಯನ್ನು ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಾದ ಡಾ.ಸತೀಶ ತಿವಾರಿ,ಗ್ ರೇಡ್-2 ತಹಶೀಲ್ದಾರ್ ಜಿ.ಎನ್. ಕಟ್ಟಿ, ವಿ.ಎಸ್. ಉತ್ನಾಳ, ಸಂತೋಷ ದೇಶಪಾಂಡೆ, ಯು.ಬಿ. ಧರಿಕಾರ, ರಾಜೇಶ್ವರಿ ನಾಡಗೌಡ, ಶಿವಾನಂದ ಮೇಟಿ, ಶಿರಸ್ತೇದಾರ ಎಂ.ಎಸ್. ಬಾಗೇವಾಡಿ, ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ ಇದ್ದರು.

ಜಾನುವಾರುಗಳಿಗೆ ಔಷಧ ಕೊರತೆ

ಪಶು ಆಸ್ಪತ್ರೆಯಲ್ಲಿ ನಿಗದಿತ ಪ್ರಮಾಣದಲ್ಲಿ ಪಶುಗಳಿಗೆ ಔಷಧ ಪೂರೈಕೆಯಾಗುತ್ತಿಲ್ಲ. ಪ್ರಮಾಣ ಕಡಿಮೆ ಆಗಿದೆ ಎಂದು ಇಲಾಖೆ ಅಧಿಕಾರಿ ಶಿವಾನಂದ ಮೇಟಿ ಹೇಳುತ್ತಿದ್ದಂತೆ ಪ್ರತಿಕ್ರಯಿಸಿದ ಉಸ್ತುವಾರಿ ಅಧಿಕಾರಿ ಸೋಮನಾಳ ‘ಯಾವ ಔಷಧ ಅಗತ್ಯವಿದೆ. ಎಷ್ಟು ಕೊರತೆ ಇದೆ. ಯಾವುದು ಸರಿಯಾಗಿ ಬರುತ್ತಿಲ್ಲ ಎಂಬುದನ್ನು ನಿಖರವಾಗಿ ತಿಳಿಸಿ’ ಎಂದು ಸೂಚಿಸಿದರು.

ಕುಡಿಯುವ ನೀರಿನ ಘಟಕಗಳಿಗೆ ಸಂಬಂಧಿಸಿದಂತೆ 69 ಘಟಕಗಳು ಸ್ಥಗಿತವಾಗಿವೆ ಎಂದು ಇಲಾಖೆಯ ಜೆಇ ರಾಠೋಡ ಮಾಹಿತಿ ನೀಡಿದರು. ಅದಕ್ಕೆ ಸಂಬಂಧಿಸಿದ ಪೂರ್ಣ ವಿವರ ಸಲ್ಲಿಸುವಂತೆ ಅಧಿಕಾರಿ ಸೋಮನಾಳ ತಿಳಿಸಿದರು. ಇದಕ್ಕೂ ಮುನ್ನ ಉಸ್ತುವಾರಿ ಅಧಿಕಾರಿ ಶಂಕರಗೌಡ ಸೋಮನಾಳ ಅವರು ಪಟ್ಟಣದ ಕುಡಿಯುವ ನೀರು ಶುದ್ಧೀಕರಣ ಘಟಕ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ನೇಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಟ್ಟಗಿ ಹೆಸ್ಕಾಂ ಸ್ಟೇಷನ್‌ಗೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT