ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ | ಎಪಿಎಂಸಿಯಲ್ಲಿ ಸರಕು ಸಾಗಿಸುವುದೇ ದುಸ್ತರ

ಆಮೆಗತಿಯಲ್ಲಿ ಸಾಗಿದ ಕಾಮಗಾರಿ
ಶಂಕರ ಈ.ಹೆಬ್ಬಾಳ
Published 16 ಜೂನ್ 2024, 6:53 IST
Last Updated 16 ಜೂನ್ 2024, 6:53 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಪಟ್ಟಣದ ಎಪಿಎಂಸಿಯಲ್ಲಿ ಮಳೆಯಾದರೆ ಸಾಕು ಸಣ್ಣಪುಟ್ಟ ವಾಹನಗಳಾಗಲಿ, ಬೈಕ್ ಸವಾರರು ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಚಟುವಟಿಕೆಗಳು ಚುರುಕುಗೊಂಡಿದ್ದು, ರೈತರು ಬೀಜ, ಗೊಬ್ಬರ ಖರೀದಿಗೆ ಬರುತ್ತಾರೆ. ಆದರೆ ಎಪಿಎಂಸಿಯಲ್ಲಿರುವ ಅಂಗಡಿಗಳಿಗೆ ವಾಹನಗಳನ್ನು ತಂದರೆ ಮರಳಿ ಒಯ್ಯುವುದು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕಾಳು ಕಡಿ, ಗೊಬ್ಬರ ತರುವ ವಾಹನಗಳು, ಸರಕು ಹೊತ್ತು ಬರುವ ಲಾರಿಗಳು ಮಣ್ಣಿನಡಿಯಲ್ಲಿ ಸಿಲುಕಿ ಹೊರ ಬಾರದೇ ಚಾಲಕರು ತಂದಿರುವ ಸಾಮಗ್ರಿ ಸಾಗಿಸಲು ತೀವ್ರ ಪರದಾಡಬೇಕಾಗುತ್ತದೆ. ಮಳೆ ಬಂದಾಗಲೊಮ್ಮೆ ಎಪಿಎಂಸಿಯಲ್ಲಿ ವಾಹನ ಸವಾರರು ಸರಕು ತುಂಬಿದ ವಾಹನಗಳನ್ನು ಸಾಗಿಸಲು ಹೈರಾಣಾಗುತ್ತಿದ್ದಾರೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಬೇಕಿದೆ.

ಕಾಮಗಾರಿ ಉಪ ಗುತ್ತಿಗೆ: ಗುತ್ತಿಗೆದಾರ ಬಿ.ಎಂ.ಅಳ್ಳಿಕೋಟೆ ಎಂಬುವರಿಗೆ ಕಾಮಗಾರಿ ಮಂಜೂರಾತಿ ದೊರೆತಿದ್ದು, ಅದನ್ನು ಶರಣು ದೇಶಮುಖ ಎಂಬುವವರು ಉಪ ಗುತ್ತಿಗೆ ಪಡೆದು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಉಪ ಗುತ್ತಿಗೆದಾರರು ಗುಣಮಟ್ಟದ ಕೆಲಸಕ್ಕೆ ಒತ್ತು ನೀಡಬೇಕು ಎಂದು ವರ್ತಕರಾದ ಬಿಪಿ ಮುರಾಳ, ರಮೇಶ ಢವಳಗಿ, ಕೆ.ಬಿ. ದೇಶಪಾಂಡೆ, ಎಂ.ಬಿ.ಗುರಿಕಾರ, ಎಂ.ಎನ್. ಪಾಟೀಲ, ಸಚಿನ್ ಕಡಿ, ಬಿ.ಕೆ. ರಕ್ಕಸಗಿ, ವೀರೇಶ ಬಲದಿನ್ನಿ, ಸಿ.ಎಲ್. ಬಿರಾದಾರ್, ಎನ್.ಎ.ಬಂಗಾರಗುಂಡ, ಶ್ರೀನಿವಾಸ ಇಲ್ಲೂರು, ಮಾಂತು ಒಣರೊಟ್ಟಿ, ರಮೇಶ ಕುರಿ ಮೊದಲಾದವರು ಒತ್ತಾಯಿಸಿದ್ದಾರೆ.

‘ನಿತ್ಯವೂ ನೂರಾರು ವಾಹನಗಳು ಎಪಿಎಂಸಿ ಮಾರುಕಟ್ಟೆಗೆ ಬರುತ್ತವೆ. ಆದರೆ ರಸ್ತೆ ಸುಧಾರಣೆ ಕಾರ್ಯ ವಿಳಂಬವಾಗುತ್ತಿರುವುದರಿಂದ ಚಕ್ಕಡಿಯೂ ಈ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಎಪಿಎಂಸಿಯಲ್ಲಿ ಅಗೆದಿರುವ ರಸ್ತೆಗಳನ್ನು ಸಮತಟ್ಟುಗೊಳಿಸಿ ವಾಹನಗಳು ತಾತ್ಕಾಲಿಕವಾಗಿ ಓಡಾಡುವುದಕ್ಕಾದರೂ ವ್ಯವಸ್ಥೆ ಕಲ್ಪಿಸಬೇಕು’ ಎಂದು ವರ್ತಕ ಶಂಕರಗೌಡ ರಾಯಗೊಂಡ ಆಗ್ರಹಿಸಿದ್ದಾರೆ.

‘ಬೇಸಿಗೆಯಲ್ಲೂ ಎಪಿಎಂಸಿಯಲ್ಲಿ ಆಳವಾದ ತಗ್ಗು–ಗುಂಡಿಗಳು ಬಿದ್ದಿರುವುದರಿಂದ ವಾಹನಗಳು ಸಂಚರಿಸುವುದೇ ಕಷ್ಟವಾಗಿತ್ತು. ರಸ್ತೆ ದುರಸ್ತಿ ಕಾರ್ಯ ಕೈಗೊಂಡಿದ್ದರೆ ಇಂದು ವಾಹನಗಳು ಮಣ್ಣಿನಡಿ ಸಿಕ್ಕಿಹಾಕಿಕೊಂಡು ಪರದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಇನ್ನಾದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು’ ಎಂದು ಜಮ್ಮಲದಿನ್ನಿ ಯುವ ರೈತ ಚೆನ್ನಬಸ್ಸು ಮಂಗ್ಯಾಳ ಒತ್ತಾಯಿಸಿದ್ದಾರೆ.

ಮುದ್ದೇಬಿಹಾಳದ ಎಪಿಎಂಸಿಯಲ್ಲಿ ಮಣ್ಣಿನಡಿಯಲ್ಲಿ ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ ಲಾರಿ ಚಕ್ರದ ಮಣ್ಣು ತೆರವುಗೊಳಿಸಿದರು
ಮುದ್ದೇಬಿಹಾಳದ ಎಪಿಎಂಸಿಯಲ್ಲಿ ಮಣ್ಣಿನಡಿಯಲ್ಲಿ ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ ಲಾರಿ ಚಕ್ರದ ಮಣ್ಣು ತೆರವುಗೊಳಿಸಿದರು

ತಾಳಿಕೋಟಿ ಹಾಗೂ ಮುದ್ದೇಬಿಹಾಳ ಎಪಿಎಂಸಿಯಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ಕಾರ್ಯ ಕೈಗೊಳ್ಳಲು ₹5 ಕೋಟಿ ಅನುದಾನ ಮಂಜೂರಾಗಿದ್ದು ತಾಳಿಕೋಟಿಯಲ್ಲಿನ ಕಾಮಗಾರಿ ಪೂರ್ಣಗೊಂಡಿದೆ. ಮುದ್ದೇಬಿಹಾಳದ ಕಾಮಗಾರಿ ಆರಂಭವಾಗಿದ್ದು ರಸ್ತೆಗೆ ಗರಸು ಮಣ್ಣು ಹಾಕಿಸುವ ಕೆಲಸ ಪ್ರಗತಿಯಲ್ಲಿದೆ

–ಆರ್.ಎಸ್.ರಾಠೋಡ ಎಪಿಎಂಸಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT