ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಉತ್ತರ ಕರ್ನಾಟಕ ಜನರ ‘ಊರ ಜಾತ್ರೆ’

ಸಂಕ್ರಾಂತಿ ಸೊಬಗಿನ ಜತೆ ಸಿದ್ದರಾಮರ ಜೀವನ ಅಡಕ
Last Updated 13 ಜನವರಿ 2015, 5:29 IST
ಅಕ್ಷರ ಗಾತ್ರ

ವಿಜಯಪುರ: ‘ಜಾತ್ರೆಗಳ ಜಾತ್ರೆ, ಜಾತ್ರೆಗಳ ತೊಟ್ಟಿಲು’ ಎಂದೇ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿರುವ ವಿಜಯಪುರದ ಸಿದ್ದೇಶ್ವರ ಜಾತ್ರೆಗೆ ಸೋಮವಾರ ಮುಸ್ಸಂಜೆಯೇ ವಿಧ್ಯುಕ್ತ ಚಾಲನೆ ಸಿಕ್ಕಿದೆ.

ಐತಿಹಾಸಿಕ ಹಿನ್ನೆಲೆಯ ಜಾತ್ರೆ ಇದೀಗ ‘ನಮ್ಮೂರ ಜಾತ್ರೆ’ಯಾಗಿ ಮಾರ್ಪಟ್ಟಿದ್ದು, ಉತ್ತರ ಕರ್ನಾಟಕವೂ ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಭಕ್ತರು ಜಾತ್ರೆಯ ವೈಭವ ಕಣ್ತುಂಬಿಕೊಳ್ಳಲು, ಸಿದ್ದ­ರಾಮನ ಕೃಪೆಗೆ ಪಾತ್ರರಾಗಲು ತಂಡೋಪ ತಂಡವಾಗಿ ಬರುತ್ತಾರೆ.

ಸಂಕ್ರಾಂತಿ ಸೊಬಗಿನ ಜತೆ ಜತೆಗೆ ಉತ್ತರ ಕರ್ನಾಟಕದ ವೈಭವ ಜಾತ್ರೆಯಲ್ಲಿ ಮೇಳೈಸ­ಲಿದ್ದು, ಸಮತೆಯ ಸಿದ್ಧರಾಗಿ ಬಾಳಿದ ಸಿದ್ದ­ರಾಮರ ಜೀವನ ವಿಧಾನವೂ ಜಾತ್ರೆಯಲ್ಲಿ ಅಡಕವಾಗಿದ್ದು, ಆಚರಣೆಯಾಗುವುದು ಇಲ್ಲಿನ ವೈಶಿಷ್ಟ್ಯ. ಇದನ್ನು ಕಣ್ತುಂಬಿಕೊಂಡು ಧನ್ಯ­ರಾಗಲು ಸಿದ್ದರಾಮನ ಭಕ್ತರು ಮುಗಿ ಬೀಳುವುದು ಪ್ರತಿ ವರ್ಷವೂ ತಪ್ಪದು.

ಸಿದ್ದರಾಮರ ಸಿಹಿ ನೆನಪುಗಳ ಬುತ್ತಿಯೊಂದಿಗೆ ಸ್ಮರಣೀಯ ಪಾವನ ತಾಣವಾಗಿರುವ ವಿಜಯ­ಪುರದ ಸಿದ್ದೇಶ್ವರ ಮಂದಿರದ ಸಂಕ್ರಮಣದ ಜಾತ್ರೆ ಬಂತೆಂದರೆ ಗುಡಿ ವಿದ್ಯುತ್‌ ದೀಪಾ­ಲಂಕಾರಗಳಿಂದ ಕಂಗೊಳಿಸುವುದನ್ನು ಕಣ್ತುಂಬಿ­ಕೊಳ್ಳುವುದೇ ಒಂದು ಆನಂದ.
ನೂರಾರು ಸಾಲಂಗಡಿಗಳು, ಮಕ್ಕಳ ಮನೋರಂಜನಾ ಆಟಿಕೆಗಳ ಸರ್ಕಸ್‌ಗಳು ಜಾತ್ರೆ ಆರಂಭಕ್ಕೆ ಮುನ್ನವೇ ತಲೆ ಎತ್ತಿರುತ್ತವೆ.
ಇವುಗಳ ಜತೆಗೆ ರೈತರಿಗೆ ಬಹುಪಕಾರಿಯಾಗಿರುವ ಜಾನು­ವಾರು ಜಾತ್ರೆಯ ಸಿದ್ಧತೆ ತಿಂಗಳಿಂದ ನಡೆದಿ­ರುತ್ತದೆ. ಈಗಾಗಲೇ ಜಾತ್ರೆಯ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿದ್ದು, ಅದ್ದೂರಿ ಆಚರಣೆ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

‘ಎಂಥಹದ್ದೇ ಕಷ್ಟ -ಕಾರ್ಪಣ್ಯ ಎದುರಾಗಲಿ ಸಿದ್ದರಾಮ ಎಂದು ಭಕ್ತಿಯಿಂದ ನೆನೆಸಿದರೆ ಸಾಕು ಬೆಟ್ಟದಂಥ ಕಷ್ಟಗಳು ಕರಗಿ ಹೋಗುತ್ತವೆ’ ಎಂಬ ನಂಬಿಕೆ ಭಕ್ತರದ್ದು. ‘ಸುಖ–-ದುಃಖಗಳನ್ನು ಸಮಾ­ನವಾಗಿ ಕಾಣುತ್ತ ತನ್ನ ಕಾಯಕ ಮಾಡುತ್ತಿದ್ದರೆ ಕಪಿಲಸಿದ್ದ ಮಲ್ಲಿಕಾರ್ಜುನ ಕಾಯುತ್ತಾನೆ’ ಎಂಬ ಸೊನ್ನಲಿಗೆ ಸಿದ್ದರಾಮನ ಮಾತು ಭಕ್ತಾದಿಗಳಿಗೆ ಇಂದಿಗೂ ದಾರಿದೀಪವಾಗಿದೆ.

ಸೊನ್ನಲಿಗೆ ಶಿವಯೋಗಿ ಸಿದ್ದರಾಮ ರೈತರ ಆರಾಧ್ಯ ದೈವ. ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲ ರೈತರು, ವ್ಯಾಪಾರಸ್ಥರು ಸಿದ್ದೇಶ್ವರನನ್ನು ಆರಾಧಿಸುತ್ತಾರೆ. 12ನೇ ಶತ­ಮಾನದಲ್ಲೇ ನೀರಾವರಿಯ ಮಹತ್ವವನ್ನು ಮನವರಿಕೆ ಮಾಡಿಕೊಂಡಿದ್ದ ಸಿದ್ದರಾಮರು ಕೆರೆ, ಕಟ್ಟೆ­ಗಳನ್ನು ಕಟ್ಟಿಸುವ ಮೂಲಕ ರೈತರ ಬಂಧು­ವಾಗಿದ್ದರು. ಕಾಯಕವೇ ಕೈಲಾಸ ಎಂಬ ಅಣ್ಣ ಬಸವಣ್ಣನವರ ತತ್ವವನ್ನು ಜೀವನದ ಉಸಿರಾಗಿಸಿಕೊಂಡಿದ್ದ ಸಿದ್ದರಾಮರು ಒಬ್ಬ ಮಹಾನ್ ಯೋಗಿ.

ಈ ಕಾರಣದಿಂದಲೇ ರೈತರು ಮತ್ತು ವ್ಯಾಪಾರ­ಸ್ಥರು ಜಾತ್ರೆ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಸೊಲ್ಲಾಪುರ ಹೊರತು­ಪಡಿಸಿದರೆ ಬೃಹತ್ ಪ್ರಮಾಣದಲ್ಲಿ ವಿಜೃಂಭಣೆಯಿಂದ ಸಿದ್ದರಾಮೇಶ್ವರರ ಜಾತ್ರೆ ನಡೆಯುವುದು ವಿಜಯಪುರದಲ್ಲೇ ಎಂಬುದು ವಿಶೇಷ.

1918ರಿಂದ ಸಿದ್ದೇಶ್ವರ ಸಂಸ್ಥೆಯ ಆಡಳಿತ ಮಂಡಳಿ ಮೇಲ್ವಿಚಾರಣೆಯಲ್ಲಿ ಜಾತ್ರೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸಲಾಗುತ್ತಿದೆ. ಜಾತ್ರಾ ಮಹೋತ್ಸವದ ಅಂಗವಾಗಿ 770 ಲಿಂಗಕ್ಕೆ ಎಣ್ಣೆ ಮಜ್ಜನ, ಅಭಿಷೇಕ, ನಂದಿ ಧ್ವಜಗಳ ಮೆರವಣಿಗೆ, ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ, ದನಗಳ ಜಾತ್ರೆ, ಕಲಾ ಪ್ರದರ್ಶನ, ಜಾನಪದ ಕಲಾವಿದರಿಂದ ಕಲಾ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ.

ಸಿದ್ದೇಶ್ವರ ಜಾತ್ರೆ ಎಂದರೆ ಜಿಲ್ಲೆಯ ಜನತೆಯ ಪ್ರತಿಯೊಬ್ಬರ ಮನೆಯ ಹಬ್ಬದಂತೆ. ಇದು ಇಡೀ ಊರಿನ ಹಬ್ಬ. ಈಗಾಗಲೇ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ, ಹಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎನ್ನುತ್ತಾರೆ ಕೇಂದ್ರದ ಮಾಜಿ ಸಚಿವ, ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT