ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ : ತಾಲ್ಲೂಕು ಆಡಳಿತ ನಿಷ್ಕ್ರೀಯ

Last Updated 16 ಜುಲೈ 2012, 6:15 IST
ಅಕ್ಷರ ಗಾತ್ರ

ಸಿಂದಗಿ: ತಾಲ್ಲೂಕಿನಲ್ಲಿ ಬರಗಾಲದ ತೀವ್ರತೆ ಹೆಚ್ಚಾಗಿದೆ. ಬರದ ಬವಣೆಯಿಂದಾಗಿ ಶೇ 92 ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜಾನುವಾರುಗಳಿಗೆ ತಿನ್ನಲು ಉತ್ತಮ ಮೇವಿಲ್ಲ. ಹೀಗಿದ್ದಾಗ್ಯೂ ತಾಲ್ಲೂಕು ಆಡಳಿತವಾಗಿ ಸಂಪೂರ್ಣ ನಿಷ್ಕ್ರೀಯಗೊಂಡಿದೆ ಎಂದು ಕಾಂಗ್ರೆಸ್ ಧುರೀಣರು ಆರೋಪ ಮಾಡಿದ್ದಾರೆ.

ಭಾನುವಾರ ಸಿಂದಗಿ ಪ್ರೆಸ್ ಕ್ಲಬ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಧುರೀಣರಾದ ಗುರನಗೌಡ ಪಾಟೀಲ ನಾಗಾಂವಿ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಎಚ್. ಬಿರಾದಾರ, ತಾಪಂ ಮಾಜಿ ಸದಸ್ಯ ಶಿವಯೋಗಿ ಮೂಡಗಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನಕಾರ್ಯದರ್ಶಿ ಮಲ್ಲೂ ಗತ್ತರಗಿ, ಕೋಶಾಧ್ಯಕ್ಷ ಬಸವರಾಜ ಶೀಲವಂತ ಅವರು ತಹಶೀಲ್ದಾರ ವಿರುದ್ಧ ನೇರ ವಾಗ್ದಾಳಿ ನಡೆಸಿ ಬರದ ವಿಷಯವಾಗಿ ಅವರು ತುಂಬಾ ನಿಷ್ಕ್ರೀಯವಾಗಿದ್ದಾರೆ. ಇದಕ್ಕೆ ಮತಕ್ಷೇತ್ರದ ಶಾಸಕರ ರಕ್ಷಾಕವಚವೂ ಇದೆ ಎಂದು ದೂರಿದರು.

ತಾಲ್ಲೂಕಿನ 21 ಗ್ರಾಮಗಳಿಗೆ ಹಾಗೂ ಐದು ತಾಂಡಾಗಳಿಗೆ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುತ್ತಿದ್ದಾರೆ. ಇದರಲ್ಲೂ ಸಾಕಷ್ಟು ಅವ್ಯವಹಾರ ನಡೆದಿದೆ. ಈ ವಿಷಯ ಗೊತ್ತಿದ್ದು ಜಾಣ ಕುರುಡರಂತೆ ಶಾಸಕ ರಮೇಶ ಭೂಸನೂರ ಕುಳಿತಿರುವುದು ಹಲವಾರು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಇಂಥ ಆತಂಕಕಾರಿ ಪರಿಸ್ಥಿತಿಯಲ್ಲೂ ಮತಕ್ಷೇತ್ರದ ಶಾಸಕರು ಯುದ್ಧೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಳ್ಳುವ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗುವುದನ್ನು ಬಿಟ್ಟು ಬೆಂಗಳೂರಿನಲ್ಲಿ ಕುಳಿತುಕೊಂಡು ಐಶಾರಾಮದ ಜೀವನ ಸಾಗಿಸುತ್ತಿರುವುದು ಇಡೀ ಮತಕ್ಷೇತ್ರದ ಮತದಾರರಲ್ಲಿ ಭಾರಿ ಆಕ್ರೋಶ ತರಿಸಿದೆ ಎಂದರು.

 ಸಿಂದಗಿ ಪಟ್ಟಣದಲ್ಲಿ ಸುಮಾರು 50 ಸಾವಿರದಷ್ಟು ಜನಸಂಖ್ಯೆ ಇದೆ. ಈಗ ಇಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇಷ್ಟೊಂದು ಜನಸಂಖ್ಯೆಗೆ ಕಾಟಾಚಾರಕ್ಕಾಗಿ ತಹಶೀಲ್ದಾರರು ಎರಡು ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲು ಸೂಚಿಸಿರುವುದು ಎಂತಹ ನಾಚಿಕೆಗೇಡಿನ ಸಂಗತಿ ಎಂದು ವಿಷಾದಿಸಿದರು.

 ಇಡೀ ತಾಲ್ಲೂಕಿನಾದ್ಯಂತ ಜಾನುವಾರುಗಳಿಗೆ ಮೇವಿಲ್ಲದೇ ಪರಿತಪಿಸುತ್ತಿವೆ. ಜಾನುವಾರುಗಳನ್ನು ಕಾಪಾಡಲು ತಾಲ್ಲೂಕು ಆಡಳಿತ ಹೋಬಳಿಗೊಂದು ಗೋಶಾಲೆ ಸ್ಥಾಪಿಸಬೇಕಿತ್ತು ಆದರೆ ಕೇವಲ ದೇವರಹಿಪ್ಪರಗಿಯಲ್ಲೊಂದು ನಾಮಕಾವಾಸ್ತೆ ಗೋಶಾಲೆ ಪ್ರಾರಂಭಿಸಿದ್ದಾರೆ.
 
ಇಲ್ಲಿರುವ ಜಾನುವಾರುಗಳ ಸಂಖ್ಯೆ ಕೇವಲ 40 ಮಾತ್ರ ಆದರೆ ಲೆಕ್ಕದಲ್ಲಿ ತೋರಿಸುವುದು 175. ಅಲ್ಲದೇ ಜಾನುವಾರುಗಳಿಗೆ ತಿನ್ನಲು ತಂದಿರುವ ಮೇವು ಸಂಪೂರ್ಣ ಕಳಪೆಮಟ್ಟದ್ದಾಗಿದ್ದರಿಂದ ಯಾವೊಂದು ಜಾನುವಾರುಗಳು ಮೇವು ತಿನ್ನುತ್ತಿಲ್ಲ  ಎಂದು ರೈತರು ತಾವು ಗೋಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ಕಾಂಗ್ರೆಸ್ ಧುರೀಣರು ಹೇಳಿದರು.

ಈ ಗೋಶಾಲೆ ಅವ್ಯವಸ್ಥೆ ಬಗ್ಗೆ ತಾಲ್ಲೂಕು ಆಡಳಿತ ಅಧಿಕಾರಿಯನ್ನು ರೈತರು ಪ್ರಶ್ನಿಸಲಾಗಿ `ನಿಮ್ಮ ದನಗಳನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು~ ಎಂದು ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ ಎಂದು ತಿಳಿಸಿದರು.

ಭೀಕರ ಬರಗಾಲದಲ್ಲೂ ಸರ್ಕಾರ ಬಿಡುಗಡೆ ಮಾಡಿದ ಪಡಿತರ ಚೀಟಿಯ ಆಹಾರಧಾನ್ಯವನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ. ಸೀಮೆ ಎಣ್ಣೆ ಕಳ್ಳಸಂತೆಯಲ್ಲಿ ಮಾರಾಟ ಆಗುತ್ತಿದೆ. ಹೀಗಾಗಿ ಗ್ರಾಮೀಣ ಜನತೆ ಗುಳೆ ಹೋಗುತ್ತಿದ್ದಾರೆ. ಈ ವಿಷಯ ತೀರ ಗಂಭೀರ ಎಂದು ಪರಿಗಣಿಸಿ ಕ್ರಮ ಜರುಗಿಸಬೇಕು ಎಂದು ಕೇಳಿಕೊಂಡರು.
 
ಬರಗಾಲದ ಸಂದರ್ಭದಲ್ಲಿ ಸಿಂದಗಿ ತಾಲ್ಲೂಕಿನಲ್ಲಿ 145 ಕೊಳವೆಬಾವಿಗಳನ್ನು ಕೊರೆಯಿಸಿದ್ದು ಅದರಲ್ಲಿ ಬಹುತೇಕ ಕೊಳವೆಬಾವಿಗಳಿಗೆ ನೀರಿಲ್ಲದಿದ್ದರೂ ಅವುಗಳಿಗೆ ಮೋಟಾರ ಅಳವಡಿಸಿ ಅನುದಾನವನ್ನು ವ್ಯವಸ್ಥಿತವಾಗಿ ಲಪಟಾಯಿಸುವ ಕಾರ್ಯದಲ್ಲಿ ಜಿಪಂ ಎಂಜನಿಯರಿಂಗ್ ಉಪವಿಭಾಗದ ಎಇಇ ತೊಡಗಿಕೊಂಡಿದ್ದಾರೆ ಎಂದು ಆಪಾದಿಸಿದರು.

ಆಲಮೇಲ ಹೋಬಳಿಯಲ್ಲಿನ 40 ಗ್ರಾಮಗಳಲ್ಲಿ ನೀರಿಲ್ಲದೇ ರೈತರ ಕಬ್ಬು ಸಂಪೂರ್ಣ ಒಣಗಿ ಹೋಗಿದೆ. ಹೀಗಾಗಿ ರೈತರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.   ಪತ್ರಿಕಾಗೋಷ್ಠಿಯಲ್ಲಿ ಶ್ರೀಶೈಲಗೌಡ ಪಾಟೀಲ ಕನ್ನೊಳ್ಳಿ, ಹಣಮಂತ್ರಾಯ ಬಿರಾದಾರ ಉಪಸ್ಥಿತರಿದ್ದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT