ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗೆ ಕೀಟ ಕಾಟ: ರೈತರ ಪರದಾಟ

Last Updated 6 ಡಿಸೆಂಬರ್ 2014, 5:58 IST
ಅಕ್ಷರ ಗಾತ್ರ

ವಿಜಯಪುರ: ಆರಂಭದಲ್ಲಿ ತೊಗರಿ ಚಲೋ ಇತ್ತು. ಬಂಪರ್ ಬೆಳೆಯ ಆಸೆ ಮೂಡಿತ್ತು. ಕಷ್ಟ ನೀಗುವ ಕನಸು ಕಂಡಿದ್ದೇವು. ಆದರೆ ನಮ್ಮ ದುರಾದೃಷ್ಟ. ವಾರದ ಹಿಂದೆ ಕವಿದ ಹೊಗೆ ಮಂಜು ನಮ್ಮ ಕನಸುಗಳನ್ನು ಒಮ್ಮೆಲೆ ಕಮರಿಸಿತು...

ಇದೀಗ ತೊಗರಿ ಕೊಯ್ಲಿನ ಸಮಯ. ಇಂದಿಗೂ ಕೀಟ ಕಾಟ ತಪ್ಪಿಲ್ಲ. ಆರಂಭದಿಂದಲೂ ಕೀಟ ನಾಶಕ ಸಿಂಪಡಿಸಿ ಸೋತಿದ್ದೇವೆ. ಈಗಲೂ ಸಿಂಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಉತ್ಪನ್ನ ಸಾಧಾರಣ ಸಿಗಬಹುದು. ಔಷಧಿ, ಕೂಲಿ ಖರ್ಚು ಸಿಕ್ಕರೆ ಸಾಕು ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಾಲ್ಲೂಕಿನ ಉತ್ನಾಳ ಗ್ರಾಮದ ರೈತ ಕಾಳಪ್ಪ ರಾಮಪ್ಪ ಕಿರಿಸೋದ್ ಬೇಸರ ವ್ಯಕ್ತಪಡಿಸಿದರು.

ಹಿಂಗಾರಿ ಬೆಳೆಗಳು ಆರಂಭದ ದಿನಗಳಲ್ಲಿ ಚೆನ್ನಾಗಿದ್ದವು. ಬಂಪರ್ ಫಸಲಿನ ನಿರೀಕ್ಷೆ ಹೆಚ್ಚಿತ್ತು. ಆದರೆ ಮೂರ್ನಾಲ್ಕು ದಿನ ಸೈಕ್ಲೋನ್‌ ಹಿಡಿದಿದ್ದು, ಹೊಗೆ ಮಂಜು ಕವಿದಿದ್ದರಿಂದ ನಮ್ಮ ನಿರೀಕ್ಷೆಗಳು ಮಂಜಿನಂತೆ ಕರಗಿದವು.

ಉಳ್ಳಾಗಡ್ಡಿ, ಹತ್ತಿ ಬೆಳೆ ಅರ್ಧಕ್ಕೆ ಅರ್ಧ ಫಸಲು ಸಿಗುವುದು ದುಸ್ತರ ಎನ್ನುವಂಥ ಸ್ಥಿತಿ. ಕಡಲೆಗೆ ವಿಪರೀತ ಕೀಟ ಬಾಧೆ. ಮುಂಗಾರಿನಲ್ಲಿ ಮಳೆ ಕೈಕೊಟ್ಟರೆ, ಇದೀಗ ಹಿಂಗಾರಿಗೆ ಕೀಟದ ಕಾಟ. ಒಟ್ಟಾರೆ ರೈತರ ಪರದಾಟ ಮಾತ್ರ ಎಂದಿಗೂ ತಪ್ಪದು ಎಂದು ಶುಕ್ರವಾರ ‘ಪ್ರಜಾವಾಣಿ’ ಬಳಿ ನಿಟ್ಟುಸಿರು ಬಿಟ್ಟರು.

ಸಕಾಲಕ್ಕೆ ಮಳೆ ಸುರಿಯದಿದ್ದರಿಂದ ಮುಂಗಾರು ಹಂಗಾಮು ಕೈಕೊಟ್ಟರೆ, ಹಿಂಗಾರು ಕೀಟ ಕಾಟಕ್ಕೆ ತುತ್ತಾಗಿದೆ. ತೊಗರಿ, ಕಡ್ಲೆ, ಹಿಂಗಾರಿ ಬಿಳಿಜೋಳ, ಹತ್ತಿ ಸೇರಿದಂತೆ ವಿವಿಧ ಪ್ರಮುಖ ಬೆಳೆಗಳಿಗೆ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಚಿಂತೆಗೆ ದೂಡಿದೆ ಎನ್ನುತ್ತಾರೆ ರೈತ ಶರಣು ಹಿಪ್ಪರಗಿ.

ಈ ಭಾಗದ ಪ್ರಮುಖ ಬೆಳೆ ಹಿಂಗಾರಿ ಬಿಳಿಜೋಳಕ್ಕೆ ಅಲ್ಲಲ್ಲೇ ‘ಕುಂಕುಮ ರೋಗ’ ತಗುಲಿದೆ. ದಂಟು ಒಣಗುತ್ತಿದೆ. ಇದು ರೈತರನ್ನು ಆತಂಕಕ್ಕೆ ದೂಡಿದೆ. ಇನ್ನೂ ಕಡಲೆಗೆ ಕೀಟ ಬಾಧೆ ಹೆಚ್ಚಿದ್ದು, ವಾರಕ್ಕೆ 2–3 ಬಾರಿ ಔಷಧಿ ಸಿಂಪಡಿಸಿದರೂ, ನಿಯಂತ್ರಣಕ್ಕೆ ಬರುತ್ತಿಲ್ಲ.
ಹತ್ತಿಗೆ ತಾಂಬರೂ ರೋಗ. ಎಲೆ ಕೆಂಪಾಗುತ್ತಿವೆ. ಕಾಯಿ ಮೇಲೆ ರೋಗಾಣುಗಳು ಬೀಳುತ್ತಿದ್ದು, ಹತ್ತಿ ಸಮರ್ಕವಾಗಿ ಅರಳುತ್ತಿಲ್ಲ. ಇದು ಇಳುವರಿ ಮೇಲೆ ಪರಿಣಾಮ ಬೀರಲಿದೆ. ನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಿಸುವಲ್ಲೇ ಹೈರಾಣಾಗಿದ್ದೇವೆ ಎಂದು ರೈತ ನಿಂಗಪ್ಪ ಬಾಗೇವಾಡಿ ಅಳಲು ತೋಡಿಕೊಂಡರು.

ಫಲವತ್ತಾದ ಎರೆ ಭೂಮಿಯಲ್ಲಿ ಬೆಳೆದಿರುವ ಗೋಧಿ, ಕಡಲೆ, ತೊಗರಿ, ಬಿಳಿಜೋಳವೂ ಚಲೋ ಇವೆ. ಕೃಷಿ ಚಟಿವಟಿಕೆ ಬಿರುಸಿನಿಂದ ನಡೆದಿವೆ. ಆದರೆ ಇತರೆ ಭೂಮಿಯಲ್ಲಿ ಬೆಳೆದಿರುವ ಬೆಳೆ ಅಷ್ಟಕ್ಕಷ್ಟೇ ಎನ್ನುವಂತಿವೆ ಎಂದು ಹಿಟ್ನಳ್ಳಿಯ ರೈತ ಬಸಪ್ಪ ಹಿಟ್ಟಪ್ಪ ಚೌಧರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೀಟ ಬಾಧೆ ಸಹಜ
ತೊಗರಿ, ಕಡಲೆ ಬೆಳೆಗೆ ಪ್ರತಿ ವರ್ಷವೂ ಕೀಟ ಬಾಧೆ ತಪ್ಪದು. ಜಿಲ್ಲೆಯ ವಿವಿಧೆಡೆಯಿಂದ ಕೀಟ ಬಾಧೆ ಬಗ್ಗೆ ದೂರುಗಳು ಬರುತ್ತಿವೆ. ರೈತರು ಹೆಚ್ಚಿಗೆ ಆತಂಕ ಪಟ್ಟುಕೊಂಡು ವಿಪರೀತ ಔಷಧಿ ಸಿಂಪಡಿಸುವ ಅಗತ್ಯವಿಲ್ಲ. ವಾತಾವರಣದಲ್ಲಿನ ವ್ಯತ್ಯಾಸದಿಂದ ಇದು ಸಹಜ ಎಂದು ಕೃಷಿ ಇಲಾಖೆ ಅಧಿಕಾರಿ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT