ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಗಿ ಗ್ರಾಮಸ್ಥರಿಂದ ಗೊಂಬೆ ಮದುವೆ

ಮನರಂಜಿಸಿದ ನೀವೆಂಥ ಬೀಗರೋ ಹಾಡು...
Last Updated 4 ಜುಲೈ 2013, 5:40 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಅಲ್ಲಿ ಒಂದು ಸಾಂಪ್ರದಾಯಿಕ ಮದುವೆಗೆ ಏನು ಬೇಕೋ ಅದೆಲ್ಲವೂ ಇತ್ತು. ಹೆಣ್ಣಿನವರು, ಗಂಡಿನವರು, ಜಿದ್ದಿಗೆ ಬಿದ್ದು ಪರಸ್ಪರರನ್ನು ಕಿಚಾಯಿಸಿ ಹಾಡು, ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ನಾಟಕೀಯ ಜಗಳ, ಗೊಂಬೆ ಹಿಡಿದ ಬಾಲ ವಧು, ಬಾಲ ವರ, ಅರಿಶಿಣ ಹಚ್ಚುವ, ಅಕ್ಕಿ ಕಾಳು ಹಾಕಿ ಮದುವೆ ಮಾಡಿ ನಂತರ ಭರ್ಜರಿ ಊಟ ಸವಿಯುವ ಕೆಲಸವನ್ನು ಎಲ್ಲರೂ ಮಾಡಿದರು.

ಇಂಥ ನಾಟಕೀಯ ಪ್ರಸಂಗದ ಮದುವೆ ನಡೆದದ್ದು ಸೋಮವಾರ ತಾಲ್ಲೂಕಿನ ತಂಗಡಗಿಯಲ್ಲಿ. ಮಳೆ ಬಾರದೇ ಹೋದರೆ ರೈತರು ಚಿಂತೆ ಮಾಡುತ್ತ ಕೂಡದೇ ಸರ್ವರೂ ಸೇರಿ ಏನಾದರೂ ಮನರಂಜನೆ ಮಾಡುವ ಪರಿಪಾಠವನ್ನು ಹಿರಿಯರು ಹೇಗೆ ಮಾಡಿದರು ಎನ್ನುವುದಕ್ಕೆ ಈ ಗೊಂಬೆ ಮದುವೆ ಉದಾಹರಣೆ. ಸೋಮವಾರ ಬೆಳಿಗ್ಗೆ  ಎದ್ದು ಗ್ರಾಮದ ಗೌಡರ ಬಾವಿಗೆ ಹೋಗಿ ಪೂಜೆ ಮಾಡಿ ಅಲ್ಲಿಂದ ಐದು ಬಿಂದಿಗೆ ನೀರು ತುಂಬಿಕೊಂಡು ಬಂದು ನಾಲತವಾಡದ ಶ್ರೀ ವೀರೇಶ್ವರ ಮುತ್ಯಾನ ಗುಡಿಯಲ್ಲಿ ಇಡಲಾಯಿತು.

ಕನ್ಯಾದವರನ್ನು ಎದುರುಗೊಳ್ಳಲು ಹೊಳಿಯವರ ಓಣಿಗೆ ಗಂಡಿನ ಕಡೆಯವರು ಹೋಗುವುದು. ವರನನ್ನು ಕರೆ ತರಲು ಡೊಂಗರಗಾವಿಯವರ ಮನೆಗೆ ಹೋಗುವುದು ನಡೆಯಿತು. ಪ್ರತಿಯೊಂದು ಕಾರ್ಯಕ್ಕೂ  ಬಾಜಾ ಭಜಂತ್ರಿ ತೆಗೆದುಕೊಂಡು ಶಹನಾಯಿ ಊದುತ್ತ, ಡೋಲು ಬಡಿಯುತ್ತ ನಡೆಯುವುದನ್ನು ನೋಡುವುದೇ ಒಂದು ಅಪರೂಪ.

ಬಾಜಾ ಭಜಂತ್ರಿಯೊಂದಿಗೆ ಕನ್ಯೆಯನ್ನು ಕರೆ ತರುವ ಕೆಲಸ, ನಂತರ ಗ್ರಾಮದ ಕೇಂದ್ರ ಸ್ಥಾನವಾದ ಪುಂಡಪ್ಪ ಮುತ್ಯಾನ ಕಟ್ಟೆ ಹತ್ತಿರ ಪರಸ್ಪರ ಗಂಡಿನವರು ಹೆಣ್ಣಿನವರು ಎದುರುಗೊಳ್ಳುವ ಕಾರ್ಯ ನಡೆಯಿತು. ಹೆಣ್ಣಿಗೆ ಕಾಯಿ, ಅಕ್ಕಿ, ಉತ್ತತ್ತಿ, ಅಡಿಕೆ ಸೇರಿಸಿ ಉಡಿ ತುಂಬುವ ಕಾರ್ಯವನ್ನು ಮಹಿಳೆಯರು ನಡೆಸಿದರು.

ಇದೇ ಸಮಯದಲ್ಲಿ ಹೆಣ್ಣಿನ ಮೇಲೆ ಗಂಡಿನ ಕಡೆಯ ಹೆಣ್ಣು ಮಕ್ಕಳು ರಾಗವಾಗಿ  “ವರಗ ಹಾಕ್ಕೋಳಾಕ ಬಟ್ಟಿ ತಂದಿಲ್ಲಾ, ಬೂಟ್ ತಂದಿಲ್ಲಾ, ವಾಚಾ ತಂದಿಲ್ಲ ಎಂಥ ಬೀಗರು ಗಂಟು ಬಿದ್ರೀ ನೀವು” ಎಂದು ಹಾಡಿದರೆ, ಹೆಣ್ಣಿನವರು ಶೇರಿಗೆ ಸವ್ವಾ ಶೇರು ಎನ್ನುವಂತೆ, “ಕನ್ಯಾಕ ನೆಕ್ಲೆಸ ಮಾಡಿಸಲಿಲ್ಲ, ತಾಳಿ ಚೈನ ಮಾಡಿಸಲಿಲ್ಲ, ಪಾಟ್ಲಿ ಮಾಡಸ್ತಿನಿ ಅಂತಾ ಮಂದ್ಯಾಗ ಕುಂತ ಹೇಳಿದ್ರಿ, ಅದನ್ನೂ ಮಾಡಿಸಲಿಲ್ಲ, ನೀವೆಂಥ ಬೀಗ್ರೋ” ಅಂಥ ಜಿದ್ದಿಗೆ ಬಿದ್ದು ಹಾಡುವ ಕಾರ್ಯ ನಡೆಯಿತು.

ಹಾಡು ಹೇಳುವ ಕೆಲಸವನ್ನು ಗಂಗವ್ವ ಹೊಳಿ, ಸಂಗವ್ವ ಹೊಳಿ, ಗಿರಿಜವ್ವ ತುಪ್ಪದ, ನಾಗವ್ವ ಪೂಜಾರಿ, ಸೀತವ್ವ ಪೂಜಾರಿ, ನೀಲವ್ವ ಚಲವಾದಿ ಮಾಡಿದರು.  ನಂತರ ಮೆರವಣಿಗೆಯಲ್ಲಿ ವೀರೇಶ್ವರ ಮುತ್ಯಾನ ದೇವಸ್ಥಾನದ ಆವರಣದಲ್ಲಿ  ವಧು ವರರಿಗೆ ಅರಿಶಿಣ ಹಚ್ಚುವ, ಸ್ನಾನ ಮಾಡಿಸುವ ಕೆಲಸ, ಹೊಸ ಬಟ್ಟೆ ಉಡಿಸಿದ ನಂತರ `ಮಾಂಗಲ್ಯಂ ತಂತು ನಾನೇನ' ಎಂದು  ಮಂತ್ರ ಹೇಳುವ ಕಾಯಕವನ್ನು ರುದ್ರಯ್ಯ ಹಿರೇಮಠ ಹಾಗೂ ಸಂಗಯ್ಯ ಸಾರಂಗಮಠ ಮಾಡಿದರೆ ಮದುವೆಯ ಕಾರ್ಯದಲ್ಲಿ ವಿಘ್ನಗಳು ಬರದಂತೆ ಹಿರಿಯರಾಗಿ ನಾಗಪ್ಪ ತಾಳಿಕೋಟಿ, ಪರಪ್ಪ ಹೊಳಿ, ಚರಲಿಂಗಪ್ಪ ತಾಳಿಕೋಟಿ ಕೆಲಸ ಮಾಡಿದರು. ನಂತರ ವಧುವಿನ ಕೈಯಲ್ಲಿಯ ಗೊಂಬೆಗೆ ವರ ತಾಳಿ ಕಟ್ಟುವ ಕಾರ್ಯ ನಡೆಯಿತು.

ಹರನಾಳಿಗೆ ಪೂಜೆ: ಮದುವೆಯ ನಂತರ  ತುಂಬಿದ ಕೊಡ ತೆಗೆದುಕೊಂಡು ಹಿರಿಯರೆಲ್ಲರೂ ಕುರುಬರ ಸಮಾಜ ಸಿದ್ದಪ್ಪ ವಾಲಿಕಾರ ಮನೆಯ ಹರನಾಳಿಗೆಯನ್ನು ಪೂಜೆ ಮಾಡಲಾಯಿತು. ನಂತರ ಹರನಾಳಿಗೆಯಲ್ಲಿ ನೀರು ಹರಿಯುವಂತೆ ತುಂಬಿದ ಕೊಡ ಸುರಿಯಲಾಯಿತು.

ಹೀಗೆ ಮಾಡಿದರೆ ದೊಡ್ಡ ಮಳೆ ಬಂದು ಹರನಾಳಿಗೆಗಳ ಮೂಲಕ ನೀರು ಬರುತ್ತದೆ ಎಂಬ ನಂಬಿಕೆ ಹಿರಿಯರದು. ಅಲ್ಲಿಂದ  ಮೆರವಣಿಗೆಯಲ್ಲಿ ಸುರಗಿ ಸಾಮಾನು ತೆಗೆದುಕೊಂಡು ವರನ ಮನೆಗೆ ಹೋಗಿ ಮುಟ್ಟಿಸಿ, ಅವರಿಂದ ಚಾಜಾ ಬಟ್ಟೆ ಮಾಡಿಸಿಕೊಂಡು ಮರಳಿ ಗುಡಿಗೆ ಬಂದ ನಂತರ ಎಲ್ಲರಿಗೂ ಭರ್ಜರಿ ಊಟ ಬಡಿಸಲಾಯಿತು.

ಗಂಡಿನವರ ಕಡೆಯಾಗಿ ಬಸವರಾಜ ಡೊಂಗರಗಾವಿ, ಹೆಣ್ಣಿನವರ ಕಡೆಯವರಾಗಿ ಪ್ರವೀಣ ಹೊಳಿ, ವಧುವಾಗಿ ಶ್ರೀಕಾಂತ ನೇಕಾರ, ವರನಾಗಿ ಶಾಶ್ವತ ಬಸವರಾಜ ಡೊಂಗರಗಾವಿ ತಮ್ಮ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸಿದರು.

ಮದುವೆ ಸಮಾರಂಭದಲ್ಲಿ ಹಿರಿಯರಾದ ಮುರಗಯ್ಯ ಪಾರ್ವತಿಮಠ, ಉಮೇಶ ಪಾರ್ವತಿಮಠ, ಶೇಖಪ್ಪ ಸಜ್ಜನ, ಮಾಂತೇಶ ನೇಕಾರ, ಶಂಕ್ರಪ್ಪ  ವಾಲಿಕಾರ,  ಚಂದಪ್ಪ ಮಾದಿನಾಳ, ಸುಬಾನಿ ನದಾಫ, ನಾಗಪ್ಪ ತಾಳಿಕೋಟಿ, ಮಹಾಂತೇಶ ಹೊಳಿ, ಸಿದ್ದಪ್ಪ ಮರೋಳ, ಅಶೋಕ ನಿಡಗುಂದಿ, ನೀಲಮ್ಮ ಬಸಪ್ಪ ಹುನಗುಂದ, ನೀಲವ್ವ ಹಂದ್ರಾಳ, ದುಂಡವ್ವ ಡೊಂಗರಗಾವಿ, ಪಾರ್ವತಿಬಾಯಿ ಅಳ್ಳಗಿ,  ನಾಗರತ್ನ ಡೊಂಗರಗಾವಿ, ಪಾರ್ವತೆವ್ವ ಬಿಚಗಲ್ಲ,  ರೇಣವ್ವ ಪಾಟೀಲ, ನೀಲವ್ವ ಪಡಶೆಟ್ಟಿ, ಪ್ರಕಾಶ ಹಂದ್ರಾಳ, ಪ್ರವೀಣ ಹೊಕ್ರಾಣಿ, ಶಾಂತಪ್ಪ ತಾಳಿಕೋಟಿ, ಬಸವರಾಜ ಮಂಕಣಿ, ಜಗದೀಶ ಬೆನಕಟ್ಟಿ, ಮಲ್ಲಪ್ಪ ಕುಂಬಾರ, ಮಂಜು ಮಂಡಿ ಡ್ಯಾನ್ಸರ, ರೇಣುಕಾ ತಾಳಿಕೋಟಿ, ಸರೋಜಾ ಹುಮನಾಬಾದ, ನೀಲವ್ವ ಅಫಜಲಪೂರ, ವಿಶಾಲಾಕ್ಷಿ ಹೊಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT