ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ನಳ್ಳಿ ಕೃಷಿ ವಿಸ್ತರಣಾ ಕೇಂದ್ರ ಸ್ಥಳಾಂತರಕ್ಕೆ ವಿರೋಧ

ಅಗತ್ಯವಿದ್ದರೆ ಮುದ್ದೇಬಿಹಾಳದಲ್ಲಿ ಹೊಸ ಕೇಂದ್ರ ತೆರೆಯಿರಿ: ಶಾಸಕ ದೇವಾನಂದ ಚವ್ಹಾಣ ಆಗ್ರಹ
Last Updated 21 ಫೆಬ್ರುವರಿ 2021, 12:21 IST
ಅಕ್ಷರ ಗಾತ್ರ

ವಿಜಯಪುರ: ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿರುವ ಹಿಟ್ನಳ್ಳಿ ಕೃಷಿ ವಿಸ್ತರಣಾ ಕೇಂದ್ರವನ್ನು ಮುದ್ದೇಬಿಹಾಳ ಅಥವಾ ತಾಳಿಕೋಟೆ ತಾಲ್ಲೂಕಿಗೆ ಸ್ಥಳಾಂತರಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಶಾಸಕ ದೇವಾನಂದ ಚವ್ಹಾಣ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಟ್ನಳ್ಳಿಯಲ್ಲಿ 32 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೃಷಿ ವಿಸ್ತರಣಾ ಕೇಂದ್ರವು ಜಿಲ್ಲೆಯ ಎಲ್ಲ ತಾಲ್ಲೂಕುಗಳ ರೈತರಿಗೂ ಅನುಕೂಲವಾಗುವ ಸ್ಥಳದಲ್ಲಿ ಇದೆ ಎಂದರು.

ಮುದ್ದೇಬಿಹಾಳ, ತಾಳಿಕೋಟೆ ತಾಲ್ಲೂಕಿನ ರೈತರಿಗೆ ಹಿಟ್ನಳ್ಳಿ ಕೃಷಿ ವಿಸ್ತರಣಾ ಕೇಂದ್ರ ದೂರವಾಗುತ್ತಿದೆ ಎಂಬ ಕಾರಣಕ್ಕೆ ಸ್ಥಳಾಂತರ ಮಾಡುವುದು ಖಂಡನೀಯ ಎಂದು ಹೇಳಿದರು.

ಜಿಲ್ಲಾ ಕೇಂದ್ರವಾದವಿಜಯಪುರದ ಬಳಿ ಇರುವ ಹಿಟ್ನಳ್ಳಿಯು ತಾಳಿಕೋಟೆ, ಮುದ್ದೇಬಿಹಾಳದವರಿಗೆ ದೂರ ಎನ್ನುವುದಾದರೆ ಮಹಾರಾಷ್ಟ್ರ ಗಡಿಯಲ್ಲಿರುವ ಚಡಚಣ, ಉಮರಾಣಿ, ಧೂಳಖೇಡ, ದಸೂರ, ಉಮರಜ, ಝಳಕಿ, ಹೊರ್ತಿ ಸೇರಿದಂತೆ ಇತರೆ ಗ್ರಾಮಗಳ ರೈತರಿಗೆ ತಾಳಿಕೋಟೆ ಅಥವಾ ಮುದ್ದೇಬಿಹಾಳ ದೂರವಾಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಹಿಟ್ನಳ್ಳಿ ಕೃಷಿ ವಿಸ್ತರಣಾ ಕೇಂದ್ರವನ್ನು ಸ್ಥಳಾಂತರ ಮಾಡುವ ಬದಲುಮುದ್ದೇಬಿಹಾಳದಲ್ಲಿ ಹೊಸದಾಗಿ ಇನ್ನೊಂದು ಕೃಷಿ ವಿಸ್ತರಣಾ ಕೇಂದ್ರ ತೆರೆಯಲಿ ಎಂದು ಸಲಹೆ ನೀಡಿರುವ ಅವರು, ಅದನ್ನು ಬಿಟ್ಟು ಜಿಲ್ಲೆಯ ರೈತರ ನಡುವೆ ಜಗಳ ತಂದಿಟ್ಟು ನೋಡುವ ಕುತಂತ್ರ ಸರಿಯಲ್ಲ ಎಂದು ಅವರು ಹೇಳಿದರು.

ಸಚಿವರಿಗೆ ಮನವಿ:ಯಾವುದೇ ಕಾರಣಕ್ಕೂ ಕೃಷಿ ವಿಸ್ತರಣಾ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಪತ್ರ ಬರೆದಿದ್ದು, ಜಿಲ್ಲೆಗೆ ಫೆ.22ರಂದು ಬರುತ್ತಿರುವ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಹಿಟ್ನಳ್ಳಿ ಕೃಷಿ ವಿಸ್ತರಣಾ ಕೇಂದ್ರವನ್ನು ಮತ್ತಷ್ಟು ಬಲಪಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಕೃಷಿ ಸಚಿವರಿಗೆ ಮನವಿ ಮಾಡಿದರು.

ತಾರತಮ್ಯ ಬೇಡ:ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನೀಡಿರುವಷ್ಟೇ ಅನುದಾನವನ್ನು ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೂ ಅನುದಾನ ನೀಡಬೇಕು. ಯಾವುದೇ ಕಾರಣಕ್ಕೂ ತಾರತಮ್ಯ ಮಾಡಬಾರದು ಎಂದು ದೇವಾನಂದ ಚವ್ಹಾಣ ಹೇಳಿದರು.

ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ₹380 ಕೋಟಿ ನೀಡಲಾಗಿದೆ. ಆದರೆ‌, ವಿಜಯಪುರ ವಿಮಾನ ನಿಲ್ದಾಣಕ್ಕೆ ಪ್ರಥಮ ಹಂತದಲ್ಲಿ ₹220 ಕೋಟಿ ಮೀಸಲಿಟ್ಟು, ಅದರಲ್ಲಿ ಕೇವಲ ₹95 ಕೋಟಿ ಮಾತ್ರ ಮಂಜೂರು ಮಾಡಿರುವುದು ಸರಿಯಲ್ಲ ಎಂದರು.

ವಿಜಯಪುರ ಜಿಲ್ಲೆ ಐತಿಹಾಸಿಕ ಪ್ರವಾಸಿತಾಣಗಳು ಹಾಗೂ ತೋಟಗಾರಿಕಾ ಬೆಳೆಗಳಿಗೆ ಪ್ರಸಿದ್ಧವಾಗಿದೆ. ಪ್ರತಿನಿತ್ಯ ಸಾವಿರಾರು ದೇಶ, ವಿದೇಶದ ಪ್ರವಾಸಿಗರು ಸಂಚಾರ ಮಾಡುತ್ತಿದ್ದಾರೆ. ಅಲ್ಲದೇ, ಇಲ್ಲಿತ ತೋಟಗಾರಿಕಾ ಉತ್ಪನ್ನಗಳ ರಫ್ತಿಗೆ ಅನುಕೂಲವಾಗುವಂತೆ ವಿಜಯಪುರ ವಿಮಾನ ನಿಲ್ದಾಣವನ್ನು ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿಯಲ್ಲೇ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಾಗಠಾಣ ಮತಕ್ಷೇತ್ರದಲ್ಲಿ ಅನುಷ್ಠಾನಗೊಳ್ಳದೇ ನನೆಗುದಿಗೆ ಬಿದ್ದಿರುವ ಹಲವಾರು ಅಭಿವೃದ್ಧಿ ಕಾರ್ಯಗಳನ್ನು 2021–22ನೇ ಸಾಲಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡಿ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಗೆ ಪ್ರಜ್ವಲ್ ಇಂದು‌:

ಹಾಸನ ಸಂಸದ, ಜೆಡಿಎಸ್‌ ಯುವ ಮುಖಂಡ ಪ್ರಜ್ವಲ್‌ ರೇವಣ್ಣ ಅವರು ಫೆ.22ರಂದು ಜಿಲ್ಲೆಗೆ ಆಗಮಿಸಲಿದ್ದು, ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಿಂದಗಿಗೆ ತೆರಳಿ ದಿವಂಗತ ಎಂ.ಸಿ.ಮನಗೂಳಿ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಲಿದ್ದಾರೆ ಎಂದರು.

****

ಸಿಂದಗಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದಿಂದ ಮನಗೂಳಿ ಅವರ ಕುಟುಂಬದವರನ್ನೇ ಕಣಕ್ಕಿಳಿಸಲಾಗುವುದು. ಈ ಸಂಬಂಧ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ

–ದೇವಾನಂದ ಚವ್ಹಾಣ,ಶಾಸಕ, ನಾಗಠಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT