ಸೋಮವಾರ, ಸೆಪ್ಟೆಂಬರ್ 27, 2021
23 °C
ಮಾಗಡಿಯ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ್‌ ಸಲಹೆ

‘ಜನಸಂಖ್ಯೆ ನಿಯಂತ್ರಿಸಿ ಪ್ರಗತಿಗೆ ಸಹಕರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಜಿಜೆಸಿ ವಿದ್ಯಾರ್ಥಿನಿಯರು

ಮಾಗಡಿ: ‘ಮಳೆ ಬಂದರೆ ಕೆಡುಕಾಗುವುದಿಲ್ಲ, ಹೆಚ್ಚು ಮಕ್ಕಳಾದರೆ ಕೆಡುಕಿಲ್ಲ ಎಂಬ ಮೂಢನಂಬಿಕೆ ಕೈಬಿಡಿ. ಗಂಡಿರಲಿ ಅಥವಾ ಹೆಣ್ಣಿರಲಿ ಮನೆಗೊಂಡು ಮಗುವಿರಲಿ’ ಎಂದು ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ್‌ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ವತಿಯಿಂದ ನಡೆದ ‘ವಿಶ್ವ ಜನಸಂಖ್ಯಾ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಚಿಕ್ಕ ಕುಟುಂಬ, ಚೊಕ್ಕ ಕುಟುಂಬ’  ಮಾದರಿಯೂ ದೇಶದ ಬೆಳವಣಿಗೆಗೆ ಪೂರಕವಾಗಲಿದೆ. 21 ವರ್ಷದ ತುಂಬಿದ ಮೇಲೆ ಮದುವೆಯಾಗಬೇಕು. ವೈವಾಹಿಕ ಜೀವನದಲ್ಲಿ ಮೊದಲ 3 ವರ್ಷ ಕಳೆಯುವವರೆಗೆ ಮಕ್ಕಳು ಬೇಡ ಎಂದು ತಿಳಿಸಿದರು. ಜನಸಂಖ್ಯೆ ಏರಿಕೆಯಿಂದ ಹಲವು ಸಮಸ್ಯೆ ಸೃಷ್ಟಿಯಾಗಲಿವೆ. ಆರೋಗ್ಯದಲ್ಲಿ ಅರಿವು ಮೂಡಿಸಿಕೊಂಡು, ಕುಟುಂಬ ಕಲ್ಯಾಣ ವಿಧಾನವನ್ನು ಜಾರಿಗೆ ತರುತ್ತಾ, ಜನಸಂಖ್ಯೆ ನಿಯಂತ್ರಣಕ್ಕೆ ಎಲ್ಲರೂ ಮುಂದಾಗೋಣ ಎಂದರು.

ಪುರಸಭೆ ಸದಸ್ಯೆ ಹೊಂಬಮ್ಮ ನರಸಿಂಹ ಮೂರ್ತಿ ಮಾತನಾಡಿ, ಮಕ್ಕಳನ್ನು ಹೊಡೆಯಬಾರದು. ಪೋಷಕರು ಪ್ರೀತಿಯಿಂದ ಪಾಲನೆ ಮಾಡಬೇಕು. ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು. ‌ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವುದು ಮುಖ್ಯ. ಅತಿಯಾದ ಜನಸಂಖ್ಯೆಯಿಂದ ದೇಶದ ಪ್ರಗತಿ ಕುಂಠಿತವಾಗಲಿದೆ. ವಿವಾಹ, ಸಂಸಾರದ ಯೋಚನೆ ಬಿಟ್ಟು ಉತ್ತಮವಾಗಿ ವ್ಯಾಸಂಗ ಮಾಡಿ ಭವಿಷ್ಯ ರೂಪಿಸಿಕೊಳ್ಳುವತ್ತಾ ಕಾಲೇಜು ವಿದ್ಯಾರ್ಥಿಗಳು ಗಮನ ಹರಿಸಿ ಎಂದು ಸಲಹೆ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ಸಿ.ಚಂದ್ರಶೇಖರ್‌ ಮಾತನಾಡಿ, ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೆ.ಎಸ್‌.ವೈ, ಪ್ರಸೂತಿ, ತಾಯಿಭಾಗ್ಯ, ಜೆ.ಎಸ್‌.ಎಸ್‌.ಕೆ ‘108’ ಸೇವೆಗಳನ್ನು ಬಳಸಿಕೊಂಡು ಜನಸಂಖ್ಯಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ ಎಂದರು.

ಪ್ರಭಾರ ಆರೋಗ್ಯ ಶಿಕ್ಷಣಾಧಿಕಾರಿ ಆರ್‌.ರಂಗನಾಥ್‌ ಮಾತನಾಡಿ, ಕುಟುಂಬ ಕಲ್ಯಾಣ ವಿಧಾನಗಳ ಬಗ್ಗೆ ತಾತ್ಕಾಲಿಕ ವಿಧಾನಗಳಲ್ಲಿ ನೂತನವಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಬಳಸಿಕೊಳ್ಳಬೇಕು. ಶಿಕ್ಷಣದ ಜೊತೆ ಆರೋಗ್ಯದ ಅರಿವು ಮೂಡಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಾಗಣ್ಣ.ಜಿ ಮಾತನಾಡಿ, ಜನಸಂಖ್ಯಾ ಸ್ಫೋಟಕ್ಕೆ ಮುಖ್ಯವಾಗಿ ಅನಕ್ಷರತೆ, ಅಜ್ಞಾನ, ಬಡತನ, ಮೂಢನಂಬಿಕೆ, ಬಾಲ್ಯವಿವಾಹ, ಗಂಡುಮಗು ಬೇಕೆಂಬ ವ್ಯಾಮೋಹವೇ ಕಾರಣ ಎಂದರು.  ಮದುವೆಯಾಗಿ, ತಡವಾಗಿ ಮಕ್ಕಳನ್ನು ಪಡೆದು ಆರೋಗ್ಯವಂತ ಕುಟುಂಬ ಮಾಡಿಕೊಳ್ಳಲು ಯುವಜನತೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಹಾರೋಹಳ್ಳಿ ಕುಮಾರ್‌, ಸರ್ಕಾರಿ ಆಸ್ಪತ್ರೆಯ ಆಢಳಿತಾಧಿಕಾರಿ ಡಾ.ರಾಜೇಶ್‌, ಡಾ.ರಾಮಚಂದ್ರ, ಉಪ ಪ್ರಾಂಶುಪಾಲ ಗಾಯತ್ರಿದೇವಿ, ಆರೋಗ್ಯಾಧಿಕಾರಿ ಆರ್‌.ಮಂಜುಳಾ, ಆರೋಗ್ಯಾಧಿಕಾರಿ ತುಕಾರಾಂ, ಆರೋಗ್ಯ ಸಹಾಯಕರಾದ ಎಂ.ಕೆ.ಪ್ರಶಾಂತ್‌, ಬೈಲಪ್ಪ, ರಾಘವೇಂದ್ರ, ಮೋಹನ್‌, ಆಶಾ ಸುಗಮಕಾರರಾದ ಧನಲಕ್ಷ್ಮೀ, ಸರ್ವಮಂಗಳ, ಗಂಗಮ್ಮ, ಕಮಲಮ್ಮ,ಸೌಭಾಗ್ಯ, ಜಯಂತಿ, ಜಯಲಕ್ಷ್ಮೀ, ಅನುಸೂಯ, ದಾಕ್ಷಾಯಿಣಿ ವೇದಿಕೆಯಲ್ಲಿದ್ದರು.

ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು , ಕಾಲೇಜಿನ ಉಪನ್ಯಾಸಕರು, ಆರೋಗ್ಯ ಇಲಾಖೆಯ ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು