ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಹಿನ್ನೋಟ 2021: ಪ್ರವಾಹ, ಅತಿವೃಷ್ಟಿಗೆ ನಲುಗಿದ ಜಿಲ್ಲೆ

ಕೋವಿಡ್‌ ಅಲೆಗಳಲ್ಲಿ ಕಾಲ ಕಳೆಯುವಂತೆ ಪರಿಸ್ಥಿತಿ,
Last Updated 31 ಡಿಸೆಂಬರ್ 2021, 2:32 IST
ಅಕ್ಷರ ಗಾತ್ರ

ಯಾದಗಿರಿ: 2021ರಲ್ಲಿ ಜಿಲ್ಲೆಯಲ್ಲಿ ಒಂದರ ಮೇಲೊಂದು ಬರೆ ಬಿದ್ದಿತು. ಒಂದೇ ಕೃಷ್ಣಾ ನದಿ ಪ್ರವಾಹ ನಂತರ ಅತಿವೃಷ್ಟಿಯಿಂದ ಹಲವಾರು ಬೆಳೆಗಳು ಹಾಳಾಗಿ ರೈತಾಪಿ ವರ್ಗ ಈ ವರ್ಷವೂ ಕಷ್ಟ ಪಡುವಂತೆ ಆಯಿತು.

ಪ್ರತಿವರ್ಷ ಕೃಷ್ಣಾ, ಭೀಮಾ ನದಿಯಲ್ಲಿ ಪ್ರವಾಹ, ಅತಿವೃಷ್ಟಿ ರೈತರ ಜೊತೆಗೆ ಚೆಲ್ಲಾಡವಾಡುತ್ತಿದ್ದು, ಸಮೃದ್ಧ ನೀರಿದ್ದರೂ ಪ್ರಕೃತಿ ವಿಕೋಪದಿಂದ ಬೆಳೆಗಳನ್ನು ಕಾಪಾಡಿಕೊಳ್ಳಲು ಹೆಣಗಾಡಬೇಕಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಅನೇಕ ಉದ್ಯಮಗಳು ಹಳಿಗೆ ಬಂದಿಲ್ಲ. ಈಗ ಕೋವಿಡ್‌ ರೂಪಾಂತರಿ ತಳಿ ಓಮೈಕ್ರಾನ್‌ ಭೀತಿಯಲ್ಲಿ ಕಾಲಕಳೆಯುವಂತೆ ಆಗಿದೆ. 2021ರಲ್ಲಿ ಎರಡನೇ ಕೋವಿಡ್‌ ಅಲೆಯಲ್ಲಿ ಆಮ್ಲಜನಕ ಯಂತ್ರಗಳ ಸಮಸ್ಯೆ ತೀವ್ರವಾಗಿ ಹಲವರು ಆಸ್ಪತ್ರೆಗಳಲ್ಲಿ ಪ್ರಾಣ ಕಳೆದುಕೊಂಡರು. ಇದರಿಂದ ಎರಡನೇ ಕೋವಿಡ್‌ ಅಲೆಯಲ್ಲಿ ದಾಖಲೆಗಳ 146 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

2020ರಲ್ಲಿ ಲಾಕ್‌ಡೌನ್‌ ಘೋಷಣೆಯಾದ ಎರಡೂವರೆ ತಿಂಗಳು ನಂತರ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಾ ಹೋಗಿದ್ದವು. ನಂತರ ಮೊದಲನೇ ಅಲೆಯಲ್ಲಿ 61 ಜನ ಕೋವಿಡ್‌ನಿಂದ ಮೃತಪಟ್ಟಿದ್ದರು. ಈ ವರ್ಷಷ ಎರಡನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ಆಸ್ಪತ್ರೆ ಕೊರತೆ ಇನ್ನಿಲ್ಲದಂತೆ ಕಾಡಿತ್ತು. ಸೋಂಕಿತರು, ಅವರ ಜೊತೆಗಿದ್ದವರು ತೀವ್ರ ತೊಂದರೆ ಅನುಭವಿಸಿದ್ದರು.

ಮುಖ್ಯಮಂತ್ರಿ ಬದಲಾದರೂ ಜಿಲ್ಲೆಗಿಲ್ಲ ಲಾಭ:ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಬದಲಾವಣೆಯಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರೂ ಇಲ್ಲಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿಲ್ಲ. ಈಗ ನೇಮಕವಾಗಿರುವವರು ಕೋವಿಡ್ ಮತ್ತು ಪ್ರವಾಹ ನಿರ್ವಹಣೆಗೆ ನೇಮಕವಾಗಿದ್ದು, ಆರ್.ಶಂಕರ್‌ ಅವರ ನಂತರ ಜಿಲ್ಲೆಗೆ ಉಸ್ತುವಾರ ಸಚಿವರೇ ನೇಮಕವಾಗಿಲ್ಲ.

ಜಿಲ್ಲೆಯ ಜನತೆ ಸಂಕಷ್ಟ ಅನುಭವಿಸುತ್ತಿದ್ದರೂ ಜಿಲ್ಲೆಗೆ ಸಂಬಂಧಿಸಿದ ಜನಪ್ರತಿನಿಧಿಗಳು ಜಿಲ್ಲೆಗೆ ಬಾರದೆ ಜನತೆ ಅಕ್ರೋಶವನ್ನು ಎದುರಿಸಬೇಕಾಯಿತು. ಕೋವಿಡ್‌ ಮಧ್ಯೆಯ ಬಂದ ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡುವ ಪರಿಸ್ಥಿತಿ ಬಂದೊದಗಿತ್ತು.

ಒಂದನೇ ಮತ್ತು ಎರಡನೇ ಅಲೆಯಲ್ಲಿ ಲಾಕ್‌ಡೌನ್‌ ಪರಿಣಾಮ ಸಾರಿಗೆ ಸಂಸ್ಥೆಗೆ ಹೆಚ್ಚಿನ ಒಡೆತಕೊಟ್ಟಿತ್ತು. ಈಗಲೂ ಹಲವಾರು ಗ್ರಾಮೀಣ ಪ್ರದೇಶಗಳಿಗೆ ಬಸ್‌ ತಲುಪುತ್ತಿಲ್ಲ. ಇದರಿಂದ ಪ್ರಯಾಣಿಕರು ಸಂಕಷ್ಟ ಪಡುತ್ತಿದ್ದಾರೆ.

ಈ ಬಾರಿ ಮುಂಗಾರು ಮಳೆ ಆಶಾದಾಯಕವಾಗಿದ್ದರೂ ನಂತರ ಬಂದ ಪ್ರವಾಹ, ಅತಿವೃಷ್ಟಿಗೆ ನದಿ ದಂಡೆಯ ಮೇಲಿರುವ ರೈತರಿಗೆ ಕಣ್ಣೀರಿ ತರಿಸುತ್ತಿ. ಹತ್ತಿ, ಭತ್ತ, ಹೆಸರು ಬೆಳೆ ರೈತರು ಬಿತ್ತನೇ ಮಾಡಿ ಬೆಳೆ ಅತಿವೃಷ್ಟಿಯಿಂದ ಹಾಳಾಗಿ ಹೋಗಿದ್ದವು. ಬೆಳೆ ಬೆಳೆದ ರೈತರು ಕಣ್ಣೀರು ಸುರಿಸಿದರು. ಹತ್ತಿ ಮತ್ತು ಶೇಂಗಾಕ್ಕೆ ಹುಳು ಬಾಧೆ ಕಾಣಿಸಿಕೊಂಡು ಸಾವಿರಾರು ರೂಪಾಯಿಯನ್ನು ಔಷಧಿಗಾಗಿ ಸುರಿಯುವಂತೆ ಆಯಿತು. ನವೆಂಬರ್‌ನಲ್ಲಿ ಸುರಿದ ಒಂದೇ ಮಳೆಗೆ ಹಲವಾರು ಮನೆಗಳು ಬಿದ್ದು, ಹೆಚ್ಚಿನ ತೇವಾಂಶದಿಂದ ಬೆಳೆಗಳು ಹಾಳಾಗಿದ್ದವು.

ಕಳೆದ ಎರಡು ವರ್ಷಗಳಲ್ಲಿ ಸುರಿದ ಅಧಿಕ ಮಳೆ, ಆಲಿಕಲ್ಲು ಮಳೆ, ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಹಲವರಿಗೆ ಇನ್ನೂ ಪರಿಹಾರ ಬಾರದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಾರಿಯೂ ಸಚಿವ ಗಿರಿಯಿಲ್ಲ

ಈ ಬಾರಿಯೂ ಸಚಿವ ಸ್ಥಾನ ಜಿಲ್ಲೆಗೆ ಇನ್ನೂ ಲಭಿಸಿಲ್ಲ. ಸಚಿವ ಸಂಪುಟ ವಿಸ್ತರಣೆಯಾಗಿ ಈ ಬಾರಿ ಸುರಪುರ ಶಾಸಕ ರಾಜೂಗೌಡ ಅವರಿಗೆ ಸಿಗುತ್ತದೆ ಎಂದು ಜಿಲ್ಲೆಯ ಜನತೆ ಎದುರು ನೋಡುತ್ತಿದ್ದರು. ಆದರೆ, ಸಚಿವ ಸ್ಥಾನ ಇಲ್ಲದೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತೆ ಆಗಿತ್ತು.

ಪೌರಕಾರ್ಮಿಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಯಾದಗಿರಿ ನಗರಸಭೆ ಪೌರಕಾರ್ಮಿಕರಾದ ರತ್ನಮ್ಮ ಶಿವಪ್ಪ ಸ್ವಂತಿ ಆವರು ಆಯ್ಕೆಗೊಂಡಿದ್ದು, ಸಂತಸ ಇಮ್ಮಡಿಗೊಳ್ಳುವಂತೆ ಆಗಿತ್ತು.

ಕಳೆದ 31 ವರ್ಷಗಳಿಂದ ತಮ್ಮ ಪಾಡಿಗೆ ತಾವು ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಸೇವೆ ಮಾಡುತ್ತಿದ್ದರನ್ನು ರಾಜ್ಯೋತ್ಸವ ಪ್ರಶಸ್ತಿ ಹರಸಿಕೊಂಡು ಬಂದಿತ್ತು. ಈ ಪ್ರಶಸ್ತಿ ತಮಗೆ ದೊರತಿದೆ ಎಂದು ತಿಳಿದಾಗ ಅವರೆ ನಂಬದಂತೆ ಆಗಿತ್ತು. ಆಷ್ಟರ ಮಷ್ಟಿಗೆ ಪ‍್ರಶಸ್ತಿ ಗೌರವ ಹೆಚ್ಚಿಸಿತ್ತು.

ಕೋವಿಡ್ ಲಸಿಕಾ ಅಭಿಯಾನ ತೀವ್ರ

ಜಿಲ್ಲೆಯಲ್ಲಿ ಜನವರಿ 16ರಿಂದ ಕೋವಿಡ್‌ ಲಸಿಕೆ ನೀಡುವುದು ಆರಂಭಿಸಿ ಈಗ ತೀವ್ರಗತಿಯಲ್ಲಿ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಢ ನಂಬಿಕೆಯಿಂದ ಲಸಿಕೆಗೆ ವಿರೋಧ ವ್ಯಕ್ತಪಡಿಸಿ ದೇವರು ಮೈಮೇಲೆ ಬಂದತೆ ಮಾಡುವುದು ಸಾಮಾನ್ಯವಾಗಿತ್ತು. ಚುಚ್ಚುಮದ್ದು ನೀಡಲು ತೆರಳಿದವರ ಮೇಲೆ ಹಲ್ಲೆ ಹತ್ನ ಸೇರಿದಂತೆ ಹಲವೂ ವಿರೋಧಗಳು ವ್ಯಕ್ತವಾಗಿದ್ದವು. ಆದರೆ, ಜಿಲ್ಲಾಡಳಿತ ಸಮರೋಪಾದಿಯಲ್ಲಿ ಲಸಿಕಾಕರಣ ಕೈಗೊಂಡು ಮೊದಲ, ಎರಡನೇ ಡೋಸ್‌ ನೀಡುವತ್ತ ಲಕ್ಷ್ಯ ವಹಿಸಿದೆ.

ತಲೆತಗ್ಗಿಸಿದ ಅತ್ಯಾಚಾರ ಪ್ರಕರಣ

ಅತ್ಯಾಚಾರ ಪ್ರಕರಣಗಳಲ್ಲಿ ಜಿಲ್ಲೆಯ ಮಾನ ಹರಾಜು ಹಾಕಿದಂತೆ ಘಟನೆಗಳು ಬೆಳಕಿಗೆ ಬಂದಿದ್ದವರು. ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿರುವ ಘಟನೆಗಳ ಜೊತೆಗೆ ಹಲವಾರು ಅತ್ಯಾಚಾರ ಪ್ರಕರಣಗಳು ಬಯಲಿಗೆ ಬಂದು ಜಿಲ್ಲಾಡಳಿತ ಮುಜುಗರ ಪಡುವಂತೆ ಆಗಿತ್ತು. ರಾಜ್ಯಮಟ್ಟದಲ್ಲಿ ಜಿಲ್ಲೆಯ ಬಗ್ಗೆ ಕೆಟ್ಟ ಅಭಿಪ್ರಾಯ ವ್ಯಕ್ತವಾಗುವಂತೆ ಅತ್ಯಾಚಾರ ಪ್ರಕರಣಗಳು ರಾರಾಜಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT